ಬಂಟ್ವಾಳ:ಸಮಾಜದಲ್ಲಿ ಯಾವುದೇ ಕಲೆಯನ್ನು ಶ್ರದ್ಧಾಪೂರ್ವಕವಾಗಿ ಆರಾದನೆ ಮಾಡಿದಾಗ ಮಾತ್ರ ಕಲೆ ನಿಜಕ್ಕೂ ನಮಗೆ ಒಲಿಯುತ್ತದೆ ಎಂದು ಪಟ್ಲ ಫೌಂಡೇಶನ್ ಅಧ್ಯಕ್ಷ ಭಾಗವತ ಪಟ್ಲ ಸತೀಶ ಶೆಟ್ಟಿ ಹೇಳಿದರು.
ತಾಲ್ಲೂಕಿನ ನರಿಕೊಂಬು ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರ ಮತ್ತು ಕೀರ್ತನಾ ಸಂಗೀತ ಶಾಲೆಯ ಕಲಾರಾಧನೆ ಪ್ರಯುಕ್ತ ಇಲ್ಲಿನ ಶ್ರೀ ಕೋದಂಡರಾಮ ಭಜನಾ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಯಕ್ಷಾರಾಧನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
ಇದೇ ವೇಳೆ ಹಿಮ್ಮೇಳ ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರನ್ನು ಸನ್ಮಾನಿಸಲಾಯಿತು.ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ.ಜಯರಾಮ ಭಟ್ ಮಾತನಾಡಿ, ಕರಾವಳಿಯಲ್ಲಿ ಜನ್ಮ ತಾಳಿದ ಕರ್ಣಾಟಕ ಬ್ಯಾಂಕ್ ಯಕ್ಷಗಾನಕ್ಕೆ ಸದಾ ಪ್ರೋತ್ಸಾಹ ನೀಡುತ್ತದೆ ಎಂದರು.
ಭಜನಾ ಮಂಡಳಿ ಗೌರವಾಧ್ಯಕ್ಷ ವಕೀಲ ರವಿವರ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ, ಪೊಳಲಿ ವೆಂಕಪ್ಪಯ್ಯ ಭಟ್ ಉಪಸ್ಥಿತರಿದ್ದರು.
ಇದೇ ವೇಳೆ ಯುವ ಪ್ರತಿಭೆ ಚಿನ್ಮಯ ಭಟ್, ಭೋಪಾಲ್‍ನಲ್ಲಿ ನಡೆದ ಕಲೋತ್ಸವದಲ್ಲಿ ರಾಷ್ಟ್ರಮಟ್ಟದ ಪುರಸ್ಕಾರ ಪಡೆದ ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢಶಾಲೆಗೆ ಅಭಿನಂದಿಸಲಾಯಿತು.
ಕೃಷ್ಣರಾಜ ಭಟ್ ಸ್ವಾಗತಿಸಿ, ಡಾ.ಸುಬ್ರಹ್ಮಣ್ಯ ಭಟ್ ವಂದಿಸಿದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ಬಳಿಕ ಶ್ರೀವತ್ಸ ಎಸ್.ಆರ್. ನಿರ್ದೇಶನದಲ್ಲಿ ಸೀತಾ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಿತು.
