ಬಂಟ್ವಾಳ:ಅಂದು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ ಎಂದು ಹೇಳುತ್ತಿರುವ ಕಾಂಗ್ರೆಸ್ ಇಂದು ದೇಶದಲ್ಲಿ ಶ್ರಮಜೀವಿಗಳು ಬೆವರು ಹರಿಸುತ್ತಿರುವ ಇಲ್ಲಿನ ಹಿಂದೂಸ್ಥಾನ ಎಂಬ ಪುಣ್ಯಭೂಮಿಯಲ್ಲಿ ರಕ್ತ ಹರಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕೆ.ಹರಿಕೃಷ್ಣ ಬಂಟ್ವಾಳ್ ಆರೋಪಿಸಿದ್ದಾರೆ.ತಾಲ್ಲೂಕಿನ ರಾಯಿ-ಕೊಯಿಲ ಗ್ರಾಮ ಬಿಜೆಪಿ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅರ್ಹ ಫಲಾನುಭವಿಗಳಿಗೆ ‘ಮಣಿಪಾಲ ಆರೋಗ್ಯ ಕಾರ್ಡು’ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರನ್ನು ವಿಧಾನಸೌಧದಲ್ಲಿ ಕೂರಿಸಿದ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಅವರನ್ನೇ ನಿಂದಿಸುವ ಮೂಲಕ ಕೃತಘ್ನತೆ ತೋರಿದ್ದಾರೆ. ಪ್ರಸಕ್ತ ಕಾಂಗ್ರೆಸ್‍ನಲ್ಲಿ ಅಕ್ರಮ ಮರಳು, ಮರ, ಜಾನುವಾರು, ಗಾಂಜಾ, ಡ್ರಗ್ಸ್ ದಂಧೆಕೋರರಿಂದ ಕೂಡಿದೆ ಎಂದು ಆರೋಪಿಸಿದರು.
É ಇದಕ್ಕಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರ್ಮೂಲನೆಗೊಳಿಸಲು ಎಲ್ಲರೂ ಒಂದಾಗಬೇಕು ಎಂದರು.
ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಅರ್ಹ ಫಲಾನುಭವಿಗಳಿಗೆ ‘ಮಣಿಪಾಲ ಆರೋಗ್ಯ ಕಾರ್ಡು’ ವಿತರಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಂಡ ‘ಕಾಂಗ್ರೆಸ್ ಮುಕ್ತ ರಾಜ್ಯದ ಕನಸು’ ನನಸಾಗಿಸಲು ಶೀಘ್ರವೇ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ‘ಪಾದಯಾತ್ರೆ’ ಕೈಗೊಳ್ಳುವುದಾಗಿ ತಿಳಿಸಿದರು.
ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ, ಆಡಳಿತಾರೂಢ ಕಾಂಗ್ರೆಸ್ ಮತ್ತು ಅಧಿಕಾರಿಗಳ ದರ್ಪ ಮುರಿಯಲು ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಉಪಾಧ್ಯಕ್ಷೆ ಪುಷ್ಪಲತಾ, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಸದಸ್ಯರಾದ ರಾಘವ ಅಮೀನ್, ಪದ್ಮನಾಭ ಗೌಡ, ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ರಮಾನಾಥ ರಾಯಿ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಬೆಟ್ಟು, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಕೆ.ಪರಮೇಶ್ವರ ಪೂಜಾರಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಸಂತ ಗೌಡ ಮುದ್ದಾಜೆ ಮತ್ತಿತರರು ಇದ್ದರು.
ಅರಳ ಗ್ರಾಮ ಪಂಚಾಯಿತಿ ಸದಸ್ಯ ಡೊಂಬಯ ಬಿ.ಅರಳ ಸ್ವಾಗತಿಸಿ ವಂದಿಸಿದರು.
–
