ವಿಟ್ಲ: ಬಾಲಕಿಯೋರ್ವಳು ಯುವಕನ ಪ್ರೀತಿಯಿಂದ ಮೋಸ ಹೋಗಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಮಂಗಳಪದವುನಲ್ಲಿ ಶನಿವಾರ ನಡೆದಿದೆ.
ಮೃತ ಬಾಲಕಿಯನ್ನು ಪತ್ರತೋಟದ ನಿವಾಸಿ ಫಾತಿಮಾ ಮಿನಾಝ್ ಎಂದು ಗುರುತಿಸಲಾಗಿದೆ.
9ನೇ ತರಗತಿ ವಿದ್ಯಾರ್ಥಿನಿ ಮಿನಾಝ್ ಳನ್ನು ಆರೋಪಿ ವೀರಕಂಬ ಗ್ರಾಮದ ಮಂಗಳಪದವಿನ ದರ್ಖಾಸ್ ನಿವಾಸಿ ರಶೀದ್ (22) ಪ್ರೀತಿಯ ನಾಟಕವಾಡಿ ಸುತ್ತಾಡುತ್ತಿದ್ದ. ಈ ವಿಚಾರ ಮಿನಾಝ್ ಮನೆಯವರಿಗೆ ತಿಳಿಯುತ್ತಿದ್ದಂತೆ ಎಚ್ಚೆತ್ತು ಆತನೊಂದಿಗೆ ಮಾತುಕತೆ ನಡೆಸಿ, ಮದುವೆ ವಯಸ್ಸು ಬಂದಾಗ ಮದುವೆ ಮಾಡಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು ಎಂದು ತಿಳಿದು ಬಂದಿದೆ.
ಬಳಿಕ ಆರೋಪಿ ರಶೀದ್ ಮಿನಾಝ್ ಗೆ ಮದುವೆಯಾಗುತ್ತೇನೆಂದು ನಂಬಿಸಿ ವಿದೇಶಕ್ಕೆ ತೆರಲಿದ್ದ. ಈ ವೇಳೆ ರಶೀದ್ ಮನೆಯವರು ಈತನಿಗೆ ಬೋಳಂತೂರು ಕಡೆಯ ಬೇರೆ ಯುವತಿ ಜತೆ ಮದುವೆ ನಿಶ್ಚಿಯ ನಡೆಸಲು ಸಿದ್ಧತೆ ನಡೆಸಿದ್ದರು. ಈ ವಿಚಾರವನ್ನು ರಶೀದ್ ಬೇರೆ ವ್ಯಕ್ತಿಗಳ ಮೂಲಕ ಬಾಲಕಿಗೆ ತಿಳಿಸಿದ್ದು, ಇದರಿಂದ ಮನನೊಂದ ಬಾಲಕಿ ತನ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

