30btl-Nalin

ಬಂಟ್ವಾಳ: ಕೇರಳದ ಕಮ್ಯೂನಿಸ್ಟರ ಗೂಂಡಾ ರಾಜ್ಯದಂತೆ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಿಂದೂ ದಮನ ನೀತಿ ಅನುಸರಿಸುತ್ತಿದ್ದು, ಇದೇ ಹಾದಿಯಲ್ಲಿರುವ ಸಚಿವ ಬಿ.ರಮಾನಾಥ ರೈ ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹತಾಶರಾಗಿ ಜಿಲ್ಲೆಯಲ್ಲಿ ಮುಸ್ಲಿಮರ ಋಣ ತೀರಿಸಲು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಶನಿವಾರ ತಾಲೂಕಿನ ಬಿ.ಸಿ.ರೋಡ್ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ಈಗಾಗಲೇ ಹಲವು ಸುಳ್ಳು ಕೇಸುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಖುಲಾಸೆಗೊಂಡಿರುವ ಕಲ್ಲಡ್ಕ ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಶೆಟ್ಟಿ ಅವರನ್ನು ಶನಿವಾರ ಬೆಳಗ್ಗೆ ಸ್ಥಳೀಯ ನಂದಾವರ ಆಂಜನೇಯ ದೇವಸ್ಥಾನದಿಂದ ಪೊಲೀಸರು ಬಂಧಿಸಿ ಉಡುಪಿ ಜಿಲ್ಲೆಗೆ ಗಡಿಪಾರುಗೊಳಿಸಿದ್ದಾರೆ ಎಂದರು.

ಮುಂದಿನ ವಿಧಾನಸಭಾ ಚುನಾವಣೆಗೆ ಆರು ತಿಂಗಳು ಇರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಿಂದುಪರ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿ ಬೆದರಿಕೆ, ಲಾಠಿ ಚಾರ್ಜ್, ಅಮಾಯಕರ ಬಂಧನ ಮೂಲಕ ಅಲ್ಪಸಂಖ್ಯಾತರ ಓಲೈಕೆಗಾಗಿ ಪೊಲೀಸರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕಲ್ಲಡ್ಕದಲ್ಲಿ ಕೇಶವ ಎಂಬವರ ಮೇಲೆ ನಡೆದ ಹತ್ಯೆಗೆ ಯತ್ನ ನಡೆಸಿದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿಲ್ಲ. ಜಿಲ್ಲೆಯಲ್ಲಿ ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸಸುವಲ್ಲಿ ಪೊಲೀಸರು ವಿಫಲರಾಗಿದ್ದು, ಗಾಂಜಾ, ಡ್ರಗ್ಸ್ ಮತ್ತಿತರ ಜಾಲ ಪತ್ತೆ ಹಚ್ಚುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರನ್ನು ನಿಂದಿಸಿ ಅವರಲ್ಲಿ ಕಣ್ಣೀರಿಳಿಸಿದ್ದ ಸಚಿವ ರೈ ಕಲ್ಲಡ್ಕ ಮತ್ತು ಪುಣಚ ಶಾಲೆಗೆ ಕೊಲ್ಲೂರು ಕ್ಷೇತ್ರದಿಂದ ಸಿಗುತ್ತಿದ್ದ ಅಕ್ಷರ ದಾಸೋಹಕ್ಕೆ ತಡೆಯೊಡ್ಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ಆದೇಶ ವಿರುದ್ಧ ಕಾನೂನು ಹೋರಾಟ ನಡೆಸುವುದರ ಜತೆಗೆ ಹಿಂದೂ ಸಂಘಟನೆ ಪ್ರತಿಭಟನೆ ಮತ್ತಿತರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

 

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಜಿ.ಆನಂದ, ಬಿ.ದೇವದಾಸ ಶೆಟ್ಟಿ, ರಾಮದಾಸ ಬಂಟ್ವಾಳ, ವಜ್ರನಾಥ ಕಲ್ಲಡ್ಕ ಮತ್ತಿತರರು ಇದ್ದರು.

 

By suddi9

Leave a Reply

Your email address will not be published. Required fields are marked *