ಗುರುಪುರ : ಮಂಗಳೂರು-ಮೂಡಬಿದ್ರೆ(ಕಾರ್ಕಳ) ರಾಷ್ಟ್ರೀಯ ಹೆದ್ದಾರಿ 169ರ ಮಧ್ಯೆ ಗುರುಪುರದಲ್ಲಿರುವ ಬ್ರಿಟಿಷರ ಕಾಲದ ಸೇತುವೆಗೆ ಪರ್ಯಾಯ ವ್ಯವಸ್ಥೆ ಹಾಗೂ ಕಳೆದ 20 ವರ್ಷದಿಂದ ನೆನೆಗುದಿಗೆ ಬಿದ್ದಿರುವ ಹೆದ್ದಾರಿ ಅಗಲೀಕರಣ(ಮೇಲ್ದರ್ಜೆ) ಪ್ರಸ್ತಾವ ಮುಂದಿಟ್ಟು ಡಿಸೆಂಬರ್ 3 ಮತ್ತು 4ರಂದು ಗುರುಪುರ ಮತ್ತು ಕೈಕಂಬದಲ್ಲಿ ಎರಡು ಪ್ರತ್ಯೇಕ ಪ್ರತಿಭಟನಾ ಸಭೆ ನಡೆಯಲಿದೆ.ಡಿ.3ರಂದು ಅಪರಾಹ್ನ 2 ಗಂಟೆಗೆ ಸಿಪಿಐಎಂ ಗುರುಪುರ ವಲಯ ಸಮಿತಿ ಗುರುಪುರ ಪೇಟೆಯಿಂದ ಫಲ್ಗುಣಿ ಸೇತುವೆಯವರೆಗೆ ರ್ಯಾಲಿ ನಡೆಸಿ, ಸೇತುವೆ ಬಳಿ ರಸ್ತೆ ತಡೆ ಮಾಡಲು ನಿರ್ಧರಿಸಿದೆ. ಇದೇ ರೀತಿ ರಾಷ್ಟ್ರೀಯ ಹೆದ್ದಾರಿ(169) ಹೋರಾಟ ಸಮಿತಿ(ಮಿಜಾರು) ಡಿ.4ರಂದು ಬೆಳಿಗ್ಗೆ 10 ಗಂಟೆಗೆ ಗುರುಪುರ ಕೈಕಂಬದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲು ತೀರ್ಮಾನಿಸಿದೆ.
ಕಮ್ಯುನಿಸ್ಟರು ಈ ಹಿಂದೆಯೂ ಹಲವು ಬಾರಿ ಗುರುಪುರ ಸೇತುವೆ ಪುನರ್ ನಿರ್ಮಾಣ ಮುಂದಿಟ್ಟು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದೇ ರೀತಿ ಮಿಜಾರು ಹೋರಾಟ ಸಮಿತಿ ವರ್ಷಗಳಿಂದಲೂ ಹೋರಾಟ ನಡೆಸುತ್ತ ಬಂದಿದ್ದು, ಎರಡು ತಿಂಗಳು ಹಿಂದೆ ಉಗ್ರ ಹೋರಾಟದ ಎಚ್ಚರಿಕೆ ನೀಡಿತ್ತು.ಇದೇ ವಿಷಯ ಮುಂದಿಟ್ಟು ಅಕ್ಟೋಬರ್ 23ರಂದು ಗುರುಪುರ ಫಲ್ಗುಣಿ ಸೇತುವೆ ಮೇಲೆ ಎಂಎಲ್‍ಸಿ ಐವನ್ ಡಿ’ಸೋಜ ನೇತೃತ್ವದಲ್ಲಿ ಪಕ್ಷಾತೀತ ಪ್ರತಿಭಟನೆಯೊಂದು ನಡೆದಿತ್ತು. ಆದರೆ ಹೆದ್ದಾರಿ ಅಥವಾ ಸೇತುವೆಯಲ್ಲಿ ಒಂದಿನಿತೂ ಪ್ಯಾಚ್ ವರ್ಕ್ ಕೆಲಸ ನಡೆದಿಲ್ಲ. ರಸ್ತೆ ಹೊಂಡಗಳು `ಅಗಲೀಕರಣ’ಗೊಂಡಿದೆ ಅಷ್ಟೇ. ಬೇರೇನೂ ಆಗಿಲ್ಲ.
ಹೊಸ ಸೇತುವೆ ನಿಮಾರ್ಣವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕೆಲವು ವರ್ಷಗಳಿಂದ ಸಾರ್ವಜನಿಕರು ಮತ್ತು ಮತದಾರರಿಗೆ ಭರವಸೆ ನೀಡುತ್ತ ಬಂದಿದ್ದಾರೆ. ಬಿಜೆಪಿ ಶಾಸಕ ಕೃಷ್ಣ ಪಾಲೆಮಾರ್ ಕೂಡಾ ಇದೇ ರೀತಿ ಸುಳ್ಳು ಹೇಳಿಕೆ ನೀಡಿದ್ದು, ಈಗ ಮನೆ ಸೇರಿಕೊಂಡಿದ್ದಾರೆ. ಸೇತುವೆ, ಹೆದ್ದಾರಿ ಕೆಲಸ ಕೇಂದ್ರ ಸರ್ಕಾರಕ್ಕೆ ಸೇರಿದ್ದಾಗಿದೆ ಎಂದು ಈಗ ಸಬೂಬು ನೀಡುತ್ತಿರುವ ಹಾಗೂ ಹಿಂದೆ ಈ ಭಾಗದ ಶಾಸಕರಾಗಿದ್ದ ರಮಾನಾಥ ರೈ ಹಾಗೂ ಹಾಲಿ ಶಾಸಕ ಮೊೈದಿನ್ ಬಾವರಿಗೆ ಗುರುಪುರದಲ್ಲಿ ಹೊಸ ಸೇತುವೆ ನಿರ್ಮಿಸಬೇಕೆನ್ನುವ ಪ್ರಸ್ತಾವ ಕಳೆದ 20 ವರ್ಷದಿಂದಲೂ ಪಲ್ಟಿ ಹೊಡೆಯುತ್ತಿದೆ ಎಂಬುದು ಗೊತ್ತಿಲ್ಲವೇ ? ಆಗ ಕೇಂದ್ರದಲ್ಲಿ ಯಾರ ಸರ್ಕಾರವಿತ್ತು ? ಇಚ್ಛಾಶಕ್ತಿ ಇದ್ದರೆ ಬಿಜೆಪಿಯಿಂದಲೇ ಅಲ್ಲ, ಕಾಂಗ್ರೆಸ್ಸಿನಿಂದಲೂ ಸೇತುವೆ ನಿರ್ಮಿಸಲು ಸಾಧ್ಯವಿದೆ. ಲಾಬಿ ಇದ್ದರೆ ಮಾತ್ರ ಕಷ್ಟ ಎಂದು ಜನಸಾಮಾನ್ಯರು ಹೇಳುತ್ತಿದ್ದಾರೆ.
ಹೆಸರಿಗೆ ಮಾತ್ರ ಎನ್‍ಎಚ್ ಆಗಿರುವ ಈ ರಸ್ತೆ ವಾಹನ ಸಂಚಾರಕ್ಕೆ ಸಂಚಕಾರ ತಂದಿದೆ. ಕಳೆದ ಒಂದು ತಿಂಗಳಾವಧಿಯಲ್ಲಿ ಗುರುಪುರ ಕೈಕಂಬದಲ್ಲೇ ಮೂರು ಭೀಕರ ಅಪಘಾತಗಳು ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಈ ರಸ್ತೆಯಲ್ಲಿ ಧಾರಣಾಶಕ್ತಿಗಿಂತ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಇನ್ನು ಗುರುಪುರ ಸೇತುವೆಯ ಮಧ್ಯ ಭಾಗದಲ್ಲಿ ಹೊಂಡಗಳು ಸೃಷ್ಟಿಯಾಗಿದ್ದು, ರಂಧ್ರಗಳಲ್ಲಿ ನದಿ ನೀರು ಕಾಣುತ್ತಿದೆ. 1923ರಲ್ಲಿ ನಿರ್ಮಿಸಲಾಗಿರುವ ಈ ಸೇತುವೆ ಈಗ ಜರ್ಜರಿಗೊಂಡಿದ್ದರೂ, ಟನ್ನಗಟ್ಟಲೆ ಸರಕು ಹೊತ್ತ ಟ್ರಕ್ಕುಗಳು ಸಂಚರಿಸುತ್ತಿವೆ. ವರ್ಷಗಳಿಂದ ಸೇತುವೆಯ ನಿರ್ವಹಣೆ ನೋಡುವವರಿಲ್ಲ. ಪ್ರತಿದಿನ ಹಲವು ಬಾರಿ ಸೇತುವೆ ಮೇಲೆ ಟ್ರಾಫಿಕ್ ಜ್ಯಾಂ ಆಗುತ್ತಿದೆ.
………………
“ಶಿಥಿಲಗೊಂಡಿರುವ ಗುರುಪುರ ಸೇತುವೆಗೆ ಪರ್ಯಾಯ ಸೇತುವೆಯೊಂದು ನಿರ್ಮಿಸಬೇಕು. ಈ ಸೇತುವೆ ಇನ್ನು ಯಾವುದೇ ಸಂದರ್ಭದಲ್ಲಿ ಕುಸಿದು ಬೀಳಬಹುದು. ಹೊಸ ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ನಾವು ಹೆದ್ದಾರಿ ಪ್ರಧಾಕಾರ ಮತ್ತು ಜಿಲ್ಲಾಧಿಕಾರಿಗಳುಗೆ ಹಲವು ಬಾರಿ ಮನವಿ ನೀಡಿದ್ದೆವು. ಆದರೆ ಬಡವರು ಮಧ್ಯ ಮಧ್ಯಮ ವರ್ಗದವರ ಪಾಲಿಗೆ ಶಾಪವಾಗಿರುವ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ಇನ್ನೂ ನಿದ್ದೆಯಿಂದ ಎದ್ದಿಲ್ಲ. ಹಾಗಾಗಿ ಈ ಬಾರಿ ಪ್ರತಿಭಟನೆಯ ದಾರಿ ಹಿಡಿದಿದ್ದೇವೆ” ಎಂದು ಸಿಪಿಐಎಂ ಗುರುಪುರ ವಲಯ ಸಮಿತಿ ಕಾರ್ಯದರ್ಶಿ ಕೆ ಸದಾಶಿವ ದಾಸ್ ಹೇಳಿದರು.
……………….
“ಆದಷ್ಟು ಶೀಘ್ರ ಈ ರಾಷ್ಟ್ರೀಯ ಹೆದ್ದಾರಿ(169) ಮೇಲ್ದರ್ಜೆಗೇರಿಸಬೇಕು ಅಥವಾ ಅಗಲೀಕರಣಗೊಳಿಸಬೇಕು. ಜೊತೆಗೆ ಹಳೆಯ ಸೇತುವೆಗೆ ಪರ್ಯಾಯ ಸೇತುವೆ ನಿರ್ಮಿಸಬೇಕು. ಜಾಗ ಕಳೆದುಕೊಳ್ಳುವ ಕುಟುಂಬಗಳಿಗೆ ಯೋಗ್ಯ ಪರಿಹಾರ ನೀಡಬೇಕು ಎಂಬುದು ಹೋರಾಟ ಸಮಿತಿಯ ಪ್ರಮುಖ ಬೇಡಿಕೆಯಾಗಿದೆ. ಸಮಿತಿ ಈ ಹಿಂದೆ ಹಲವು ಬಾರಿ ಸಂಬಂಧಿತ ಇಲಾಖೆಗಳು ಮತ್ತು ರಾಜಕಾರಣಿಗಳ ಕದ ತಟ್ಟಿದ್ದರೂ, ಇದುವರೆಗೆ ಯಾರು ಸಮರ್ಪಕ ಉತ್ತರ ನೀಡಿಲ್ಲ. ಇತ್ತೀಚೆಗೆ ನೀಡಿದ ಮನವಿಗೂ ಸೂಕ್ತ ಪ್ರತಿಕ್ರಿಯೆ ನೀಡಿಲ್ಲ” ಎಂದು ಹೋರಾಟ ಸಮಿತಿ ಅಧ್ಯಕ್ಷ ಸುಧಾಕರ ಪೂಂಜ ಹೇಳಿದರು.
