ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅರಳ ಗ್ರಾಮದ ಮುಲಾರಪಟ್ನ ಫಲ್ಗುಣಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಐವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಮಂಗಳವಾರ ದಿನವಿಡೀ ನದಿ ನೀರಿನಿಂದ ಮೃತ ದೇಹಗಳನ್ನು ಹುಡುಕಾಟ ನಡೆಸಿ ಮೇಲೆತ್ತುವ ಕಾರ್ಯ ನಡೆದಿದೆ. ತೀರಾ ಬಡ ಕುಟುಂಬದ ಈ ಬಾಲಕರ ಸಾವಿನಿಂದ ಇಲ್ಲಿನ ಪರಿಸರದಲ್ಲಿ ಸ್ಮಶಾನ ಮೌನ ಆವರಿಸಿದೆ.7btl-Shava

7 patna 2ಮೃತರನ್ನು ಸ್ಥಳೀಯ ನವಗ್ರಾಮ ನಿವಾಸಿ ಕೂಲಿ ಕಾರ್ಮಿಕ ಆಶ್ರಪ್ ಇವರ ನಾಲ್ಕು ಮಂದಿ ಮಕ್ಕಳಲ್ಲಿ ಎರಡನೇ ಪುತ್ರ ಆಸ್ಲಾಂ (16), ಗೂಡಂಗಡಿ ನಡೆಸುತ್ತಿರುವ ಶರೀಫ್ ಇವರ ಎಂಟು ಮಕ್ಕಳಲ್ಲಿ ನಾಲ್ಕನೇ ಪುತ್ರ ದೇರಳಕಟ್ಟೆ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿ ಮುದಸಿರ್(17), ಶುಂಠಿಹಿತ್ಲು ಕಲ್ಲಗುಡ್ಡೆ ನಿವಾಸಿ ಜಿ. ಮಹಮ್ಮದ್ ಇವರ ಎಂಟು ಮಕ್ಕಳಲ್ಲಿ ನಾಲ್ಕನೇ ಪುತ್ರ ಸವಾದ್ (17), ಕೆ. ಶರೀಫ್ ಇವರ ಐದು ಮಕ್ಕಳಲ್ಲಿ ಮೂರನೇ ಪುತ್ರ ರಮೀಝ್(17) ಹಾಗೂ ಗುಜರಿ ವ್ಯಾಪಾರಿ ಹಕೀಂ ಇವರ ನಾಲ್ಕು ಮಕ್ಕಳಲ್ಲಿ ಮೂರನೇ ಪುತ್ರ ಅಜ್ಮಲ್( 17) ಎಂದು ಗುರುತಿಸಲಾಗಿದೆ. ಇವರಲ್ಲಿ ರಮೀಝ್ ಮತ್ತು ಮುದಸಿರ್ ಹೊರತುಪಡಿಸಿ ಉಳಿದಂತೆ ಎಲ್ಲರೂ ಸ್ಥಳೀಯ ಮುತ್ತೂರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯೂಸಿ ವಿದ್ಯಾರ್ಥಿಗಳು ಎನ್ನಲಾಗಿದೆ.7btl-Ambulance

ಸೋಮವಾರ ಕನಕ ಜಯಂತಿ ಪ್ರಯುಕ್ತ ಶಾಲಾ ಕಾಲೇಜಿಗೆ ರಜೆ ಹಿನ್ನೆಲೆಯಲ್ಲಿ ಮಧ್ಯಾಹ್ನ ವೇಳೆಗೆ ಇವರೆಲ್ಲರೂ ಒಟ್ಟಾಗಿ ಗುರುಪುರ ಕೈಕಂಬದಲ್ಲಿ ಮಿತ್ರರೊಬ್ಬರ ವಿವಾಹ ಕಾರ್ಯಕ್ರಮಕ್ಕೆ ಎಂದು ಮನೆಯಲ್ಲಿ ತಿಳಿಸಿ ಹೊರಟು ಹೋಗಿದ್ದರು. ಆದರೆ ರಾತ್ರಿ ಸುಮಾರು 9 ಗಂಟೆಗೆ ಬರುವ ಕೊನೆ ಬಸ್ಸಿನಲ್ಲಿಯೂ ಮಕ್ಕಳು ಬಾರದಿರುವ ಬಗ್ಗೆ ಮಕ್ಕಳ ಹೆತ್ತವರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇದರಿಂದಾಗಿ ಇವರು ಪರಸ್ಪರ ವಿಚಾರಿಸಿ ಹುಡುಕಾಟ ಆರಂಭಿಸಿದ್ದರು. ಈ ನಡುವೆ ಬಾಲಕರು ಮಂಗಳೂರಿಗೆ ಸಿನೆಮಾ ನೋಡಲು ಹೋಗಿದ್ದಾರೆ ಎಂಬ ಮಾತು ಕೂಡಾ ಕೇಳಿ ಬಂದಿತ್ತು. ಇದೇ ವೇಳೆ ಮುಲಾರಪಟ್ನ ಮುಹಿಯುದ್ದೀನ್ ಜುಮ್ಮಾ ಮಸೀದಿ ಖತೀಬ ಅವರು ತಿಳಿಸಿದಂತೆ ಸೋಮವಾರ ಬೆಳಿಗ್ಗೆ ಸುಮಾರು 11.30 ಗಂಟೆಗೆ ಇಲ್ಲಿನ ಸೇತುವೆ ಬಳಿ ನದಿಯಲ್ಲಿ ಸ್ನಾನಕ್ಕೆ ಬಂದಿವರನ್ನು ವಾಪಾಸು ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಈ ನಡುವೆ ಮತ್ತಷ್ಟು ಆತಂಕಗೊಂಡ ಮಕ್ಕಳ ಹೆತ್ತವರು ಮತ್ತು ಸ್ಥಳೀಯರು ಒಟ್ಟಾಗಿ ಇರೇಂದಿಲು ಎಂಬಲ್ಲಿ ಫಲ್ಗುಣಿ ನದಿಗೆ ಇಳಿದು ಹುಡುಕಾಡಿದಾಗ ಮಕ್ಕಳು ಧರಿಸಿದ್ದ ಬಟ್ಟಬರೆ ಮತ್ತು, ಚಪ್ಪಲಿ, ಮೊಬೈಲ್ ಪತ್ತೆಯಾಗಿದೆ.7btl-Jana

ಇದರಿಂದಾಗಿ ಆತಂಕಗೊಂಡ ಸ್ಥಳೀಯರು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿ ರಾತ್ರಿ ಸುಮಾರು 12ಗಂಟೆತನಕ ಹುಡುಕಾಡಿ ವಾಪಾಸಾಗಿರುವುದಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಆಶ್ರಫ್ ಮುಲಾರಪಟ್ನ ತಿಳಿಸಿದ್ದಾರೆ. ಇವರು ನದಿಗೆ ಇಳಿದ ಇರೇಂದಿಲು ಪ್ರದೇಶದಲ್ಲಿ ಕೆಸರು ಕೂಡಾ ಇದ್ದು ಆರಂಭದಲ್ಲಿ ಒಬ್ಬಾತ ಕೆಸರಿನಲ್ಲಿ ಜಾರಿ ಆಲವಾದ ನೀರಿನಲ್ಲಿ ಮುಳುಗುತ್ತಿದ್ದಂತೆಯೇ ಇತರರು ಕೂಡಾ ಆತನನ್ನು ರಕ್ಷಿಸಲು ಧಾವಿಸಿ ಈಜು ಬಾರದೆ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.7btl-Sethuve (1)

ಮೃತ ದೇಹ ಪತ್ತೆ:

ಮಂಗಳವಾರ ಬೆಳಿಗ್ಗೆ ಮತ್ತೆ ನದಿಯಲ್ಲಿ ಹುಡುಕಾಟ ಆರಂಭಿಸಿದಾಗ ಮುಲಾರಪಟ್ನ ಸೇತುವೆ ಸಮೀಪದಲ್ಲಿ ಸವಾದ್ ಎಂಬವರ ಮೃತದೇಹ ಸ್ಥಳೀಯರಿಗೆ ದೊರೆತಿದೆ. ಆ ಬಳಿಕ ಬಂಟ್ವಾಳ ಮತ್ತು ಮಂಗಳೂರು ಅಗ್ನಿಶಾಮಕ ದಳ ಸಿಬ್ಬಂದಿಯೊಂದಿಗೆ ಸ್ಥಳೀಯ ಈಜುಗಾರರಾದ ಜಬ್ಬಾರ್, ಸಲಾಂ, ಸಾದತ್ ಮತ್ತಿತರ ಹಲವಾರು ಮಂದಿ ಹುಡುಕಾಟ ನಡೆಸಿದ್ದಾರೆ ಎಂದು ಸ್ಥಳಿಯ ರಾದ ಮಹಮ್ಮದ್ ಶಮೀರ್ ಪತ್ರಕರ್ತರಿಗೆ ಮಾಹಿತಿ ನೀಡಿದರು.  ಸುಮಾರು 11ಗಂಟೆಯಿಂದ 12 ಗಂಟೆತನಕ ಮತ್ತೆ ರಮೀಝ್, ಅಸ್ಲಾಂ, ಅಜ್ಮಲ್ ಇವರ ಮೃತ ದೇಹವು ಮುಲಾರಪಟ್ನ ಮತ್ತು ಇರೇಂದಿಲು ನಡುವಿನ ಛತ್ರ ಶಾಲೆ ಎದುರಿನ ನದಿ ಗುಂಡಿಯಲ್ಲಿ ಪತ್ತೆಯಾಗಿದೆ. ಉಳಿದಂತೆ ಮುದಸಿರ್ ಮೃತದೇಹಕ್ಕಾಗಿ ಸಂಜೆ ಸುಮಾರು 8 ಗಮಟೆಯವರೆಗೆ  ಹುಡುಕಿದ ಬಳಿಕ  ಮೃತದೇಹ ಪತೆಯಾಗಿದೆ . 8.30ಕ್ಕೆ  ಎಲ್ಲಾ ಐದು  ಮಕ್ಕಳ ಮೃತ ದೇಹ ಪತ್ತೆಯಾಗಿದೆ .

ಸಚಿವ ರೈ ಸೂಚನೆ:
ಬೆಂಗಳೂರು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಜೊತೆ ವಿಶೇಷ ಸಭೆಗೆ ತೆರಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಮೃತ ದೇಹ ಹುಡುಕಿ ಮೇಲೆತ್ತಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಸಂಜೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ರಾಜಕೀಯ ಮಖಂಡರ ಭೇಟಿ:

ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಎಂ. ತುಂಗಪ್ಪ ಬಂಗೇರ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೆರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಲೊರೆಟ್ಟೊ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಎಪಿಎಂಸಿ ಸದಸ್ಯ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ಗೇರು ಅಭಿವೃದ್ದಿ ನಿಗಮ ಸದಸ್ಯ ಜಗದೀಶ ಕೊಯಿಲ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ವ್ಯಕ್ತಪಡಿಸಿದರು.

ಮಂಗಳೂರು ಸಹಾಯಕ ಕಮಿಷನರ್ ಎ.ಸಿ.ರೇಣುಕಾ ಪ್ರಸಾದ್, ಬಂಟ್ವಾಳ ಎಎಸ್ಪಿ ಡಾ. ಅರುಣ್, ಇನ್ಸ್‍ಪೆಕ್ಟರ್ ಪ್ರಕಾಶ್, ಎಸೈ ಪ್ರಸನ್ನ, ಎಎಸೈ ರಮೇಶ್, ಬಂಟ್ವಾಳ ಅಗ್ನಿ ಶಾಮಕದಳ ಎಎಸೈ ರಾಜೀವ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ನವೀನ್ ಕುಮಾರ್, ಗ್ರಾಮ ಕರಣಿಕ ಅಮೃತಾಂಶು, ರಾಜು ಲಂಬಾಣಿ, ಸಂದೀಪ್. ಶಿವರಾಜ್ . ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಎನ್. ಮತ್ತಿತರ ಅಧಿಕಾರಿಗಳು ಇದ್ದರು. ಈ ದುರ್ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ನದಿ ತೀರ ಸೇರಿದಂತೆ ಸೇತುವೆ ಮೇಲೆ ರಸ್ತೆಯುದ್ದಕ್ಕೂ ಅಪಾರ ಮಂದಿ ಕುತೂಹಲದಿಂದ ಜಮಾಯಿಸಿದ್ದರು.

ಎಚ್ಚರಿಕೆ ಫಲಕ ಇಲ್ಲ:
ಇಲ್ಲಿನ ಮುಲಾರಪಟ್ನ ಸೇತುವೆ ಬದಿ ಫಲ್ಗುಣಿ ನದಿಯಲ್ಲಿ ಈ ಹಿದೆಯೂ ಹಲವು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೂ ಇಲ್ಲಿ ಯಾವುದೇ ಎಚ್ಚರಿಕೆ ನಾಮಫಲಕ ಇಲ್ಲ. ಕಳೆದ ಹಲವು ವರ್ಷಗಳಿಂದ ವ್ಯಾಪಕವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಈಚೆಗಷ್ಟೇ ಸ್ವಲ್ಪ ಕಡಿವಾಣ ಬಿದ್ದಿದೆ. ಈ ನದಿಗೆ ಒಂದೆಡೆ ಬಂಟ್ವಾಳ ಮತ್ತು ಮಂಗಳೂರು ತಾಲ್ಲೂಕು ಸಂಪರ್ಕಿಸಲು ಮುಲಾರಪಟ್ನ ಸೇತುವೆ ಇದ್ದರೆ, ಇನ್ನೊಂದೆಡೆ ತೂಗು ಸೇತುವೆ ಇದೆ. ಈ ನಡುವೆ ಮತ್ತೆ ಒಂದು ಅಣೆಕಟ್ಟೆ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ಸಚಿವ ಬಿ.ರಮಾನಾಥ ರೈ ಈಚೆಗಷ್ಟೆ ತಿಳಿಸಿದ್ದಾರೆ.

ಮೂಲರಪಟ್ನದಲ್ಲಿ  ಸರಣಿ ಸಾವು:

ಕಳೆದ ವರ್ಷ ಮೂಲರಪಟ್ನ ಸೇತುವೆ ಬಳಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿದಾಗ ಪರಾರಿಯಾಗಲು ಯತ್ನಿಸಿದ್ದ ಕಾರ್ಮಿಕ ಶರೀಫ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಇಲ್ಲಿನ ಶಾರದಾ ಮೂರ್ತಿ ವಿಸರ್ಜನೆ ವೇಳೆ ಸ್ಥಳೀಯ ಕಲಾವಿದ ಸತೀಶ ಭಂಡಾರಿ ಮತ್ತು ಯೋಗೀಶ ಎಂಬವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಕಳೆದ 20 ವರ್ಷಗಳ ಹಿಂದೆ ಇಲ್ಲಿನ ಬಾಡಿಗೆ ಮನೆಯೊಂದಕ್ಕೆ ಬಂದಿದ್ದ ಮೂವರು ಮಕ್ಕಳು ಸ್ನಾನಕ್ಕೆ ಇಳಿದು ಬಳಿಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 * ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

By suddi9

Leave a Reply

Your email address will not be published. Required fields are marked *