ಮೂಡುಬಿದಿರೆ: ಕೆಂಪು ಕಲ್ಲಿನ ಕ್ವಾರಿಯಲ್ಲಿ ದುಡಿಯುತ್ತಿದ್ದ ವಿವಾಹಿತನೋರ್ವನ ಶವವು ಅದೇ ಕ್ವಾರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದ್ದು, ಆಕಸ್ಮಿಕವಾಗಿ ಸಾವನ್ನಪ್ಪರುವ ಬಗ್ಗೆ ಪೋಲಿಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿಬೈಲಿನ ನಿವಾಸಿ ಹರೀಶ್ (30) ಮೃತ ವ್ಯಕ್ತಿ. ಇವರು ಮೂಲತ ಬೆಳ್ಮಣ್ ನಿವಾಸಿಯಾಗಿದ್ದು, ಕಳೆದ 3 ವರ್ಷಗಳ ಹಿಂದೆ ಕಂಚಿಬೈಲಿನ ಸುನಂದಾ ಎಂಬ ಯುವತಿಯನ್ನು ಮದುವೆಯಾಗಿ ಅಲ್ಲೇ ಕೆಂಪು ಕಲ್ಲಿನ ಕ್ವಾರಿಯಲ್ಲಿ ದುಡಿಯುತ್ತಿದ್ದರು. ಕ್ವಾರಿಯ ಪಕ್ಕದಲ್ಲೇ ಡೇರೆ ನಿರ್ಮಿಸಿ ಕುಟುಂಬ ಸಮೇತ ವಾಸವಿದ್ದರು.
ಕಳೆದ ಶುಕ್ರವಾರ ಸಂಜೆ ವೇಳೆ ತನ್ನ ಮಡದಿಯ ಬಳಿ ತಾನು ಅಂಗಡಿಗೆ ಹೋಗಿ ಮನೆಗೆ ಬೇಕಾಗುವ ದಿನಸಿ ಸಾಮಾನುಗಳನ್ನು ತರುವುದಾಗಿ ತಿಳಿಸಿ ಹೋಗಿದ್ದ ಹರೀಶ್ ಮತ್ತೆ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದು, ಪತ್ನಿ ಅನಕ್ಷರಸ್ಥೆಯಾಗಿದ್ದ ಹಿನ್ನಲೆಯಲ್ಲಿ ಪೋಲಿಸರಿಗೆ ದೂರು ನೀಡಿರಲಿಲ್ಲ.
ಕ್ವಾರಿ ಪಕ್ಕದಲ್ಲಿ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಹುಡುಕಾಡಿದ್ದು, ಸೋಮವಾರ ಶವ ಪತ್ತೆಯಾಗಿದೆ. ಶುಕ್ರವಾರ ಸಂಜೆ ಅಂಗಡಿಗೆ ಹೋಗಿದ್ದ ಹರೀಶ್ ಅವರು ಮರಳಿ ಬರುವಾಗ ರಾತ್ರಿಯಾಗಿತ್ತು. ಕೋರೆಯ ಬಳಿ ನಡೆದುಕೊಂಡು ಬರುತ್ತಿದ್ದಾಗ ಕತ್ತಲೆಯಾದ್ದರಿಂದ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಉಪ ನಿರೀಕ್ಷಕ ದೇಜಪ್ಪ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
