ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ವಲಯ ರಾಗ ತರಂಗಿಣಿ ಭಜನಾ ಒಕ್ಕೂಟದ ವತಿಯಿಂದ ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ಧರ್ಮ ಜಾಗೃತಿ ಭಜನಾ ಜಾಥಾ ಮತ್ತು ಭಜನಾ ಕಮ್ಮಟ ಕಾರ್ಯಕ್ರಮ ಭಾನುವಾರ ನಡೆಯಿತು.ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ, ಕರಿಂಜೆ ಮುಕ್ತಾನಂದ ಸ್ವಾಮೀಜಿ, ಕಣಿಯೂರು ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಿ, ಭಜನೆಯಿಂದ ಸಂಘಟನೆ ಮತ್ತು ಸತ್ಕರ್ಮ ಸಾಧ್ಯವಾಗುತ್ತದೆ ಎಂದರು.
ಕಾರ್ಕಳ ಉಪನ್ಯಾಸಕಿ ಅಕ್ಷಯ ಗೋಖಲೆ ಧಾರ್ಮಿಕ ಉಪನ್ಯಾಸ ನೀಡಿ, ಪ್ರತೀ ಮನೆಗಳಲ್ಲಿ ನಿತ್ಯ ಭಜನೆ ನಡೆದಾಗ ದುಷ್ಟಶಕ್ತಿಗಳು ದೂರವಾಗುತ್ತದೆ ಎಂದರು. ಯುವಜನತೆ ದುಶ್ಚಟಕ್ಕೆ ಬಲಿಯಾಗುವುದನ್ನು ತಡೆದು ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಭಜನೆ ಸಹಕಾರಿಯಾಗಲಿದೆ ಎಂದು ಹೇಳಿದರು. ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಬಿಲ್ಲವ ಮಹಾ ಮಂಡಲ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಮತ್ತಿತರರು ಶುಭ ಹಾರೈಸಿದರು.
ಸಿದ್ಧಕಟ್ಟೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಂಗೇರ, ದೇವಳದ ಆಡಳಿತ ಮೊಕ್ತೇಸರ ಚಂದ್ರಹಾಸ ಗುರಿಕಾರ, ಪ್ರಧಾನ ಅರ್ಚಕ ಪ್ರಭಾಕರ ಐಗಳ್ ಮತ್ತಿತರರು ಇದ್ದರು.ಆರಂಭದಲ್ಲಿ ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರುಮಂದಿರದಿಂದ ಸಂಗಬೆಟ್ಟು ತನಕ ಆಕರ್ಷಕ ಭಜನಾ ಜಾಥಾ ನಡೆಯಿತು. ಜಿಲ್ಲೆಯ ವಿವಿಧೆಡೆಯಿಂದ ನೂರಾರು ಭಜನಾ ತಂಡಗಳು ಭಜನಾ ಕಮ್ಮಟದಲ್ಲಿ ಪಾಲ್ಗೊಂಡಿದ್ದರು. ಒಕ್ಕೂಟ ಅಧ್ಯಕ್ಷ ರವೀಂದ್ರ ಪೂಜಾರಿ, ಪ್ರಮುಖರಾದ ಸಂತೋಷ್ ಅಂಚನ್, ನೋಣಯ ಶೆಟ್ಟಿಗಾರ್, ದಿನೇಶ ಸುವರ್ಣ ಮತ್ತಿತರರು ಇದ್ದರು.
