ಬಜ್ಪೆ: ಸೆಝ್ ಕಂಪೆನಿಯ ಅಧಿಕಾರಿಗಳು ಸಾರ್ವಜನಿಕ ಪಿಡಬ್ಲ್ಯುಡಿ ರಸ್ತೆಗೆ ಅಡ್ಡವಾಗಿ ರಾತೋರಾತ್ರಿ ನಿರ್ಮಿಸಿದ್ದ ಆವರಣ ಗೋಡೆಯನ್ನು ಬಜ್ಪೆ ಪಂಚಾಯತ್ ಅಧ್ಯಕ್ಷ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ತೆರವುಗೊಳಿಸಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಘಟನೆಯ ವಿವರ: ಶುಕ್ರವಾರ ಮುಂಜಾನೆ ಇಲ್ಲಿನ ರಸ್ತೆಯ ಬದಿಯಲ್ಲಿ ಕಾರ್ಮಿಕರು ಗುಂಡಿ ಅಗೆಯುತ್ತಿರುವುದನ್ನು ಇಲ್ಲಿನ ಸ್ಥಳೀಯರು ಗಮನಿಸಿದ್ದರು. ಈ ಬಗ್ಗೆ ಸ್ಥಳೀಯರು ವಿಚಾರಿಸಿದಾಗ ಕಾರ್ಮಿಕರು ಇಲ್ಲಿ ಪೈಪ್ಲೈನ್ ಕಾಮಗಾರಿಗೆ ಅಗೆಯುತ್ತಿರುವುದಾಗಿ ತಿಳಿಸಿದ್ದರು. ಆದರೆ ಶನಿವಾರ ಮುಂಜಾನೆ ನೋಡಿದಾಗ ಇಲ್ಲಿ ಬಹು ಎತ್ತರ ಆವರಣ ಗೋಡೆ ಎದ್ದುನಿಂತಿತ್ತು. ಜನರ ಕಣ್ಣುತಪ್ಪಿಸಿ ಸೆಝ್ ಅಧಿಕಾರಿಗಳ ಆದೇಶದಂತೆ ಶುಕ್ರವಾರ ರಾತೋರಾತ್ರಿ ಕಾರ್ಯ ಚರಣೆ ನಡೆಸಿದ ಸೆಝ್ ಅಧಿಕಾರಿಗಳು ಇಲ್ಲಿರುವ ಮನೆಗಳ ಎದುರೇ ಗೋಡೆಯನ್ನು ನಿರ್ಮಿಸಿ  ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಆವರಣ ಗೋಡೆಯಿಂದಾಗಿ ಇಲ್ಲಿನ ನಿವಾಸಿಗಳಿಗೆ ದಿಗ್ಬಂಧನ ವಿಧಿಸದಂತಾಗಿದ್ದು, ಇದರಿಂದ ಮನೆಯ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೇ ಬಾಕಿಯಾಗಿದ್ದರು. ಅಲ್ಲದೆ ಎತ್ತರದ ಕಂಪೌಂಡ್ ಗೋಡೆಯನ್ನು ಹಾರಿ ಹೋಗುವುದು ಕಷ್ಟವಾದ್ದರಿಂದ ಜನರು ಸಂಚಾರಕ್ಕೆ ಪರದಾಡುವಂತಾಗಿತ್ತು.

ಇದನ್ನು ಗಮನಿಸಿದ ಬಜ್ಪೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ಕುಮಾರ್ ನೇತೃತ್ವದಲಿ ಸಾರ್ವಜನಿಕ ಪಿಡಬ್ಲ್ಯುಡಿ ರಸ್ತೆಗೆ ಅಡ್ಡವಾಗಿ ಸೆಝ್ ಅಧಿಕಾರಿಗಳು ರಾತೋರಾತ್ರಿ ನಿರ್ಮಿಸಿದ್ದ ಕಂಪೌಂಡ್ ಗೋಡೆಯನ್ನು ಶನಿವಾರ ಮಧ್ಯಾಹ್ನ ತೆರವುಗೊಳಿಸಲಾಯಿತು. ಈ ಬಗ್ಗೆ ಮಾತಾಡಿದ ಪ್ರದೀಪ್ ಕುಮಾರ್ ಅವರು, `ಪಿಡಬ್ಲ್ಯುಡಿ ವಶದಲ್ಲಿರುವ ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಕಂಪೌಂಡ್ ನಿರ್ಮಿಸಿ ಸೆಝ್ ಅಧಿಕಾರಿಗಳು ಸ್ಥಳೀಯರನ್ನು ದಿಗ್ಬಂಧನಕ್ಕೆ ಗುರಿಮಾಡಿದ್ದರು. ಇದು ಪಂಚಾಯತ್ ಗಮನಕ್ಕೆ ಬಂದ ಕೂಡಲೇ ಪಿಡಿಒ ಹಾಗೂ ಸಂಬಂಧಿತ ಅಧಿಕಾರಿಗಳ ಜೊತೆ ತೆರಳಿ ಕಂಪೌಂಡ್ ಗೋಡೆಯನ್ನು ತೆರವುಗೊಳಿಸಿದ್ದೇವೆ’ ಎಂದು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಕಾರ್ಯಚರಣೆಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸೆಝ್ ವ್ಯಾಪ್ತಿಯಲ್ಲಿ ಬರುವ ನೆಲ್ಲಿದಡಿ ಎಂಬಲ್ಲಿ ಅವಿಭಕ್ತ ಕುಟುಂಬ ಹಾಗೂ ಕೆಲವು ಮನೆಗಳ ಮಂದಿ ವಾಸಿಸುತ್ತಿದ್ದಾರೆ. ಆದರೆ ಅವರು ಬೇರೆಡೆ ಸ್ಥಳಾಂತರಗೊಳ್ಳಲು ಬಯಸಿಲ್ಲ. ಇದರಿಂದ ಸೆಝ್ ವ್ಯಾಪ್ತಿ ಪ್ರದೇಶದಲ್ಲಿ ಅವರು ತಮ್ಮ ಜಮೀನಿನಲ್ಲೇ ವಾಸ್ತವ್ಯವಿದ್ದಾರೆ. ಅನೇಕ ಬಾರಿ ಸೆಝ್ ಅಧಿಕಾರಿಗಳು ಅವರನ್ನು ಬಲಪ್ರಯೋಗ ಮಾಡಿ ಒಕ್ಕಲೆಬ್ಬಿಸಲು ನೋಡಿದ್ದರೂ ಅವರು ಅಲ್ಲಿಯೇ ವಾಸವಿದ್ದಾರೆ. ಬಜ್ಪೆ ಪಂಚಾಯತ್ ಅವರಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ ಎಲ್ಲದರ ವ್ಯವಸ್ಥೆಯನ್ನೂ ಮಾಡಿಕೊಟ್ಟಿದೆ. 9 bajpe 5

9 bajpe 1

9 bajpe 2

9 bajpe 3

9 bajpe 4

 

 

By suddi9

Leave a Reply

Your email address will not be published. Required fields are marked *