ಕಾಪು : ಸಮಾಜ ಮತ್ತು ಸಮಾಜದ ಜನರ ನಡುವೆ ಮದ್ಯವರ್ತಿಯಂತೆ ಸೇವೆ ಮಾಡುವ ಅವಕಾಶವನ್ನು ದೇವರು ನೀಡಿದ್ದಾರೆ. ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳ ಪ್ರತಿಪಾದನೆ ಮತ್ತು ಅನ್ನದಾನ, ವಸ್ತ್ರದಾನ ಮತ್ತು ವಿದ್ಯಾದಾನದ ಮೂಲಕ ಜನಸೇವೆ ಮಾಡುವ ಅವಕಾಶ ದೊರಕಿದೆ. ಸಮಾಜದ ಎಲ್ಲರ ಆಶೀರ್ವಾದ ದೊರಕಿದಲ್ಲಿ ಇದಕ್ಕಿಂತಲೂ ಹೆಚ್ಚಿನ ರೀತಿಯ ಸೇವೆ ಮಾಡಲು ಸಿದ್ಧ ಎಂದು ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಕಾಂಗ್ರೆಸ್ ಮುಖಂಡ ಮತ್ತು ಚಿತ್ರನಟ ರಾಜಶೇಖರ್ ಕೋಟ್ಯಾನ್ ಹೇಳಿದರು. ಅವರು ಸೋಮವಾರ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಜರಗಿದ ಎರಡನೇ ವರ್ಷದ ಸೀರೆ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಅಶೋಕ್ ಎಂ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಪೀತಾಂಬರ ಹೇರಾಜೆ ಮಾತನಾಡಿ, ಸಮಾಜದ ಜನರ ಸೇವೆಗಾಗಿ ತನ್ನ ದುಡಿಮೆಯ ಗರಿಷ್ಟ ಭಾಗವನ್ನು ಸಮಾಜದ ಬಡಜನರ ಸೇವೆಗಾಗಿ ಮೀಸಲಿಡುವ ಮತ್ತು ಜಾತಿ, ಮತ, ಭೇಧ ರಹಿತವಾಗಿ ಸಮಾಜದ ಅಶಕ್ತರ ಸೇವೆಗಾಗಿ ನೀಡುವ ಮೂಲಕ ರಾಜಶೇಖರ್ ಕೋಟ್ಯಾನ್ ಅವರಿಂದ ನಿಜಾರ್ಥದ ಸೇವೆ ನಡೆಯುತ್ತಿದೆ. ಇಂತಹ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದರು.
ದಾನಿಗಳಾದ ಸೂರ್ಯ ಪ್ರಕಾಶ್, ಸಂತೋಷ್ ಕೋಟ್ಯಾನ್ ಉಗ್ಗೆಲುಬೆಟ್ಟು, ಗಿರಿಜಾ ದೋಗ್ರ ಪೂಜಾರಿ, ಮೈಮುನಾ ಕಟಪಾಡಿ, ಸುಮತಿ ಎಂ. ಸನಿಲ್, ಉಡುಪಿ ನಾರಾಯಣ ಗುರು ಅರ್ಬನ್ ಕೋ. ಅಪರೇಟಿವ್ ಬ್ಯಾಂಕ್ ನ ಉಪಾಧ್ಯಕ್ಷೆ ವಿಜಯಾ ಡಿ. ಬಂಗೇರ, ಗಣ್ಯರಾದ ರವಿ ಪೂಜಾರಿ ಚಿಲಿಂಬಿ, ದೀಪಕ್ ಕೋಟ್ಯಾನ್, ರಾಘು ಪೂಜಾರಿ ಕಲ್ಮಂಜೆ, ರತ್ನಾಕರ ಅಂಚನ್, ಸುಲೋಚನಾ ಪಾಲನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿಯ ಗೌ. ಪ್ರ. ಕಾರ್ಯದರ್ಶಿ ಹರೀಶ್ಚಂದ್ರ ಅಮೀನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಮಿಟಿ ಸದಸ್ಯ ನವೀನ್ ಅಮೀನ್ ಶಂಕರಪುರ ಕಾರ್ಯಕ್ರಮ ನಿರೂಪಿಸಿದರು.




