ಗುರುಪುರ : ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹುಟ್ಟುಹಬ್ಬ ಅ. 4ರಂದು ಗುರುಪುರ ಕೈಕಂಬದ ರೋಸಾ ಮಿಸ್ತಿಕ ಕಾನ್ವೆಂಟಿನ ಹಿಂದುಗಡೆ ಇರುವ ಅನಾಥ ಮಕ್ಕಳು ಮತ್ತು ವಯೋವೃದ್ಧರ ಆಶ್ರಮ `ಜೀವದಾನ’ದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ನಾಗರಿಕರ ಉಪಸ್ಥಿತಿಯಲ್ಲಿ ಜರುಗಿತು.
“ದೇವರ ಮಕ್ಕಳ ಆಲಯದಂತಿರುವ ಈ ಜೀವದಾನದಲ್ಲಿ ಮೂರು ವರ್ಷದದಿಂದ ಹುಟ್ಟುಹಬ್ಬ ಆಚರಿಸುತ್ತ ಬಂದಿದ್ದೇನೆ. ಇಲ್ಲಿನ ಮಕ್ಕಳು ಮತ್ತು ಸಿಬ್ಬಂದಿ ವರ್ಗದ ಪ್ರಾರ್ಥನೆಯಿಂದ ನಾನಿಂದು ರಾಜಕೀಯವಾಗಿ ಪಕ್ಷದಲ್ಲಿ ಒಂದೊಂದೇ ಉನ್ನತ ಸ್ಥಾನ ಗಳಿಸುವಂತಾಗಿದೆ. ಅನಾಥ ಮಕ್ಕಳು ಮತ್ತು ವೃದ್ಧರ ಮೇಲೆ ಸಂಸ್ಥೆ ತೋರಿಸುತ್ತಿರುವ ಕಾಳಜಿಯೇ ಇಲ್ಲಿ ನನ್ನ ಹುಟ್ಟುಹಬ್ಬ ಆಚರಿಸಲು ಪ್ರೇರಣೆಯಾಗಿದೆ. ನಾನು ಈ ಸಂಸ್ಥೆಯೊಂದಿಗೆ ಸದಾ ಇರುತ್ತೇನೆ” ಎಂದು ಹುಟ್ಟುಹಬ್ಬದ ಸಭೆಯಲ್ಲಿ ಮಿಥುನ್ ರೈ ಅಭಿಪ್ರಾಯಪಟ್ಟರು.

ಸಾರ್ವಜನಿಕರಿಗೆ ತಕ್ಷಣ ಸಿಗುವ ಹಾಗೂ ಎಲ್ಲರೊಂದಿಗೆ ಬೆರತು, ಎಲ್ಲರನ್ನು ಒಗ್ಗೂಡಿಸಿ ಕೆಲಸ ಮಾಡುವಂತಹ ಪಾದರರಸದಂತಹ ವ್ಯಕ್ತಿತ್ವವುಳ್ಳ ನಾಯಕರಾದ ರೈಗೆ, ಈ ಸಂಸ್ಥೆಯ ಪ್ರಾರ್ಥನೆಯ ಬಲದಿಂದ ದೇವರು ಇನ್ನಷ್ಟು ಉತ್ತಮ ಕೆಲಸ ಮಾಡಿಸುವಂತಾಗಲಿ ಎಂದು ರೈಗೆ ಕೆಪಿಸಿಸಿ ಸದಸ್ಯ ಪೃಥ್ವೀರಾಜ್ ಹುಟ್ಟಹಬ್ಬದ ಶುಭ ಹಾರೈಸಿದರು.
“ಇವರೊಬ್ಬ ಭವಿಷ್ಯದ ನಾಯಕ. ಇವರಿಂದ ಪಕ್ಷ ಇನ್ನಷ್ಟು ಸೇವೆ ಆಶಿಸಿದೆ. ಇವರಿಗೆ ದೇವರು ಆಯುರಾರೋಗ್ಯ ಭಾಗ್ಯ ನೀಡಲಿ” ಎಂದು ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಹೇಳಿದರೆ, “ನನ್ನ ಉತ್ತಮ ಗೆಳೆಯ ರೈಯ ರಾಜಕೀಯ ಭವಿಷ್ಯ ಉಜ್ವಲವಾಗಲಿ” ಎಂದು ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಅಭಿನಂದಿಸಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಸೆಲಿನ್ ಫೆರ್ನಾಂಡಿಸ್, ಬಾಷಾ, ಸಚಿನ್ ಅಡಪ, ಕೃಷ್ಣ ಅಮೀನ್, ಕಿರಣ್, ಜೀವದಾನದ ಸಿಸ್ಟರ್ ಜಾನ್ಸಿ, ಗಣೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಉತ್ತರ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ಆಶ್ರಮದ ಮಕ್ಕಳು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ, ಹಂಚ ಹುಟ್ಟುಹಬ್ಬದ ಸಂಭ್ರಮ ಆಚರಿಸಲಾಯಿತು. ಅಲ್ಲದೆ ನೆರೆದಿದ್ದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
