ಬಂಟ್ವಾಳ: ತಾಲೂಕು ಪಂಚಾಯತ್ ವತಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಒಟ್ಟು 557 ಕಾಮಗಾರಿಗಳ ಪೈಕಿ 480 ಪೂರ್ಣಗೊಂಡಿವೆ, ಸುಮಾರು 3 ಕೋಟಿ ರೂಪಾಯಿಗಳ ಕೆಲಸಗಳು ಆಗಿವೆ ಎಂದು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದಾ ಹೇಳಿದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಜಮಾಬಂಧಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಅವರು, ಇಲಾಖಾವಾರುಮಾಹಿತಿಯನ್ನು ಒದಗಿಸಿದರು.
ಒಟ್ಟು 2.41 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಹಿಂದಿನ ಅನುದಾನ 1.98 ಕೋಟಿ ರೂ ಇದ್ದು, ಒಟ್ಟು 4.39 ಕೋಟಿ ರೂಗಳ ಪೈಕಿ 3.1 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ. 1.38 ಕೋಟಿ ರೂ ಉಳಿಕೆಯಾಗಿದೆ ಎಂಬ ಮಾಹಿತಿಯನ್ನು ಮಿರಾಂದಾ ನೀಡಿದರು.

ಇವುಗಳಲ್ಲಿ ರಸ್ತೆ ಮತ್ತು ಸೇತುವೆಗೆ ಸಂಪೂರ್ಣ ಅನುದಾನ ಖರ್ಚಾಗಿದೆ. ಗ್ರಾಪಂ ನಿರ್ಬಂಧಿತ ಅನುದಾನಗಳು ಅಧಿಕ ಸಂಖ್ಯೆಯಲ್ಲಿ ಉಳಿಕೆಯಾಗಿವೆ ಎಂದು ಅವರು ಹೇಳಿದರು.
ಈ ಸಂದರ್ಭ ನೋಟಲ್ ಅಧಿಕಾರಿಯಾಗಿ ಜಿಪಂ ಸಹಾಯಕ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಮತ್ತು ಇಂಜಿನಿಯರಿಂಗ್ ಉಪವಿಭಾಗದ ಎಇಇ ನರೇಂದ್ರಬಾಬು , ಸಹಾಯಕ ಲೆಕ್ಕಾಧಿಕಾರಿ ಶಾರದಾ ಶೆಟ್ಟಿ ಉಪಸ್ಥಿತರಿದ್ದರು.
