ಬಂಟ್ವಾಳ: ಒಂದು ಸಣ್ಣ ಸಸಿಗೆ ಮುಂದೆ ಬೃಹತ್ತಾಗಿ ಬೆಳೆಯಲು ಸರಿಯಾದ ನೀರು ಗೊಬ್ಬರ ಎಷ್ಟು ಅವಶ್ಯಕವೋ ಅದೇ ರೀತಿ ಭವಿಷ್ಯದ ಕವಿಗಳಿಗೆ ಸರಿಯಾದ ಮಾರ್ಗದರ್ಶನವೂ ಅವಶ್ಯಕ. ಪರಿಸರದಲ್ಲಿ ದಿನನಿತ್ಯ ಕಾಣುವ ವಸ್ತುಗಳೇ ಸಾಹಿತ್ಯ ರಚನೆಗೆ ವಸ್ತುವಾಗಬಲ್ಲುದು. ಕವಿ ಸಮಯ, ಧ್ಯಾನಸ್ಥ ಮನಸ್ಸು, ಅನುಭವಗಳ ವ್ಯವಸ್ಥಿತವಾದ ಸಂಘಟನೆಯಿಂದ ಉತ್ತಮ ಸಾಹಿತ್ಯ ರಚಿಸಬಹುದಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ಸುಧಾ ನಾಗೇಶ್ ಅಭಿಪ್ರಾಯಪಟ್ಟರು.
ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪ.ಪೂ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾಯೋಜನೆ ಮತ್ತು ಅಖಿಲಭಾರತ ಸಾಹಿತ್ಯ ಪರಿಷತ್ತು ಬಂಟ್ವಾಳ ಸಹಯೋಗದಲ್ಲಿ ನಡೆದ ಸಾಹಿತ್ಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಕತೆ ಕವನ ಹುಟ್ಟಲು ನಿರ್ದಿಷ್ಟವಾದ ಕಾಲವೆಂದು ನಿರ್ಧರಿಸುವಂತಿಲ್ಲ. ಮನಸ್ಸಿನ ಆಳದ ಭಾವತೀವ್ರತೆಯೇ ಇಲ್ಲಿ ಮುಖ್ಯ. ಅದನ್ನೇ ಕವಿ ಸಮಯ ಎಂದು ಕರೆಯುತ್ತಾರೆ. ಇಂದಿನ ಮಕ್ಕಳಿಗೆ ತಾವು ಕಲಿಯುವ ಶಾಲೆ ಕಾಲೇಜುಗಳಲ್ಲಿ ವ್ಯವಸ್ಥಿತವಾದ ತರಬೇತಿ ಕಾರ್ಯಾಗಾರಗಳು ನಡೆಯುತ್ತವೆ. ಆದರೆ ಹಿಂದಿನ ಮಕ್ಕಳಿಗೆ ಈ ಬಗೆಯ ಅವಕಾಶಗಳಿರಲಿಲ್ಲ. ವಿದ್ಯಾರ್ಥಿಗಳು ಈ ರೀತಿಯ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಎಸ್.ವಿ.ಎಸ್ ಪ.ಪೂ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ., ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಾಗಾರದ ಸಂಯೋಜಕ ಚೇತನ್ ಮುಂಡಾಜೆ ಉಪಸ್ಥಿತರಿದ್ದರು. ಉಪನ್ಯಾಸಕ ಶಿವಪ್ರಸಾದ್ ನೀರಚಿಲುಮೆ ಸ್ವಾಗತಿಸಿದರು. ಉಪನ್ಯಾಸಕ ಪ್ರದೀಪ್ ಪೂಜಾರಿ ವಂದಿಸಿದರು. ಎನ್ನೆಸ್ಸೆಸ್ ಸ್ವಯಂಸೇವಕಿ ಲಿಖಿತ ಜಿ ಎನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರು ಸ್ವರಚಿತ ಕವನ, ಹನಿಗವನಗಳನ್ನು ವಾಚಿಸಿದರು.
