ಫರಂಗಿಪೇಟೆ:ಗ್ಯಾಂಗ್ ವಾರ್‍ನಲ್ಲಿ ಇಬ್ಬರು ಯುವಕರು ಬಲಿಯಾದ ಘಟನೆ ರಾ.ಹೆ.ಯ ಫರಂಗಿಪೇಟೆ ಪೊಲೀಸ್ ಔಟ್‍ಪೊಸ್ಟ್ ಬಳಿ ಸೋಮವಾರ ತಡ ರಾತ್ರಿ ನಡೆದಿದ್ದು ಮೂರು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಮೃತರನ್ನು ಮಂಗಳೂರು ಹೊರ ವಲಯದ ಅಡ್ಯಾರ್ ಕಟ್ಟೆಯ ನಿವಾಸಿ ರಿಯಾಝ್ ಯಾನೆ ಝಿಯಾ ಮತ್ತು ಅಡ್ಯಾರ್ ಬಿರ್ಪುಗುಡ್ಡೆಯ ನಿವಾಸಿ ಫಯಾಝ್ ಯಾನೆ ಪಯ್ಯಾ ಎಂದು ಗುರುತಿಸಲಾಗಿದೆ.

IMG-20170926-WA0063
ಈ ಘಟನೆಯಿಂದ ಅನೀಸ್, ಮುಶ್ತಾಕ್,ಫಝಲ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಪೈಕಿ ಮುಶ್ತಾಕ್ ಚಿಂತಾಜನಕಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ದಾಳಿಯ ವೇಳೆ ಅಝ್ಮಾನ್ ಎಂಬಾತ ಎದುರಾಳಿಗಳಿಂದ ತಪ್ಪಿಸಿಕೊಂಡಿದ್ದಾನೆ. ರಿಯಾಝ್, ಫಯಾಝ್, ಅನೀಸ್, ಮುಶ್ತಾಕ್, ಫಝಲ್ ಹಾಗೂ ಅಝ್ಮಾನ್ಎಂಬವರು ಶಿಫ್ಟ್ ಕಾರಿನಲ್ಲಿ ಸೋಮವಾರ ರಾತ್ರಿ ಗಂಟೆ 11.15ರ ವೇಳೆಗೆ ಫರಂಗಿಪೇಟೆ ಪೆಟ್ರೋಲ್ ಪಂಪಿನಲ್ಲಿ ಪೆಟ್ರೋಲ್ ಹಾಕಿ ಬಿ.ಸಿ.ರೋಡ್‍ನತ್ತ ಬರುತ್ತಿದ್ದಂತೆಇನೋವಾ ಕಾರು ಹಾಗೂ ಪಿಕಪ್‍ನಲ್ಲಿ ಬಂದ ತಂಡವೊಂದುಝಿಯಾ ತಂಡದ ಕಾರನ್ನು ಅಡ್ಡಗಟ್ಟಿ, ಕಾರಿನ ಗಾಜು ಪುಡಿಗಟ್ಟಿ ಯದ್ವಾತದ್ವಾ ತಲವಾರು ದಾಳಿ ನಡೆಸಿದೆನ್ನಲಾಗಿದೆ.ಘಟನೆಯ ತೀವ್ರತೆಗೆ ಝಿಯಾ ಸ್ಥಳದಲ್ಲೇ ಮೃತಪಟ್ಟರೆ, ಫಯಾಝ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಅಡ್ಯಾರ್, ಕಣ್ಣೂರು ಪರಿಸರದ ನೌಫಲ್ ಮತ್ತು 8 ಮಂದಿಯ ತಂಡ ಈ ಕೃತ್ಯ ನಡೆಸಿದೆ ಎಂದು ತಿಳಿದುಬಂದಿದೆ.

IMG-20170926-WA0061
*ಪ್ರತಿಕಾರಕ್ಕೆ ಡಬಲ್ ಮರ್ಡರ್:
5 ವರ್ಷಗಳ ಹಿಂದೆ ಅಂದರೆ 2012ರಲ್ಲಿ ಮೃತಪಟ್ಟ ಝಿಯಾ ಗ್ಯಾಂಗಿನ ಕಣ್ಣೂರು ಪುತ್ತ ಎಂಬಾತನ ಕೊಲೆ ನಡೆದಿತ್ತು. ಇದರಲ್ಲಿ ಇಜಾಝ್ ಕಣ್ಣೂರು ಎಂಬಾತ ಆರೋಪಿಯಾಗಿದ್ದ. ಇದರ ಪ್ರತಿಕಾರವಾಗಿ 2014 ಅಕ್ಟೋಬರ್ 31ರಂದು ಕಣ್ಣೂರಿನಲ್ಲಿ ಸೆಲೂನೊಂದಕ್ಕೆ ನುಗ್ಗಿ ಝಿಯಾ ಅಡ್ಯಾರ್ ನೇತೃತ್ವದ ತಂಡ ದಾಳಿ ನಡೆಸಿ ಇಜಾಜ್ ನನ್ನುಅಲ್ಲೇ ಕೊಚ್ಚಿ ಕೊಲೆಗೈದಿತ್ತು. ಈ ಪ್ರಕರಣದಲ್ಲಿ ಇತ್ತೀಚೆಗೆ ಝಿಯಾ ಜಾಮೀನು ಪಡೆದು ಹೊರಬಂದಿದ್ದ. ಹಾಗೆಯೇ ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾರಿಪಳ್ಳದಲ್ಲಿ ನೌಶಾದ್ ಎಂಬಾತನ  ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ತೌಸಿಫ್ ಎಂಬಾತ ಆರೋಪಿಯಾಗಿದ್ದ. ಇದಾದ ಕೆಲವೇ ಸಮಯಗಳ ಬಳಿಕ ಈತನ ತಮ್ಮ ರಿಕ್ಷಾ ಚಾಲಕ ರಿಫಾಯಿ ಎಂಬಾತ ಕೊಲೆಗೀಡಾಗಿದ್ದ. ಈ ಪ್ರಕರಣದಲ್ಲಿ ಹಫೀಝ್ ಆರೋಪಿಯಾಗಿದ್ದು ಈತನ ಮೇಲೆ ಪ್ರತಿಕಾರ ತೀರಿಸಲು ನೌಫಲ್ ತಂಡ ಸಂಚುರೂಪಿಸಿ ಆಗಮಿಸಿತ್ತು.

IMG-20170926-WA0062

ಬೈಕ್‍ಗೆ ಡಿಕ್ಕಿ:
ಹಫೀಝ್ ಫರಂಗಿಪೇಟೆಯ ಬಳಿ ತನ್ನ ಬೈಕ್‍ನಲ್ಲಿ ಸಂಚರಿಸುತ್ತಿದ್ದಾಗ ಇನ್ನೋವಾ ಕಾರ್‍ನಲ್ಲಿ ಬಂದಿದ್ದ ನೌಫಲ್ ತಂಡ ಬೈಕ್‍ಗೆ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದೆ. ಈ ಸಂದರ್ಭದಲ್ಲಿ ಅಪಾಯದ ಅರಿವಾದ ಹಫೀಝ್ ಸ್ಥಳದಿಂದ ತಪ್ಪಿಸಿಕೊಂಡಿದ್ದು, ತಕ್ಷಣ ಈ ಘಟನೆಯ ಬಗ್ಗೆ ಸ್ನೇಹಿತ ಝಿಯಾಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಝಿಯಾ ಮತ್ತು ಆತನ ಸ್ನೇಹಿತರು ಮಾರಿಪಳ್ಳದ ಕಡೆಗೆ ಬಂದಿದ್ದಾರೆ.
ಝಿಯಾ ತಂಡವನ್ನು ಗಮನಿಸಿದ ನೌಫಲ್ ತಂಡ ಅವರ ಮೇಲೆ ಯದ್ವಾತದ್ವಾ ದಾಳಿ ನಡೆಸಿ ಝಿಯಾನ ಮೇಲಿನ ಪ್ರತಿಕಾರವನ್ನು ತೀರಿಸಿದೆ ಎಂದು ಪೊಲೀಸರು ತಮ್ಮ
ಪ್ರಾಥಮಿಕ ತನಿಖೆಯಲ್ಲಿ ಮಾಹಿತಿಯನ್ನು ಕಲೆಹಾಕಿದ್ದಾರೆ ಎಂದು ತಿಳಿದುಬಂದಿದೆ.ಪರಸ್ಪರ ತಲವಾರು ಕಾಳಗ ನಡೆಸಿದ ಎರಡೂ ತಂಡಗಳು ರೌಡಿಶೀಟರ್‍ಗಳಾಗಿದ್ದು, ಪರಸ್ಪರ ಗೆಳೆಯರಾಗಿದ್ದವರೇ ಗಾಂಜಾ ವ್ಯವಹಾರದ ಹಿನ್ನೆಲೆಯಲ್ಲಿ ಈ ತಂಡಗಳ ಮಧ್ಯೆ ವೈರತ್ವ ಉಂಟಾಗಿತ್ತತೆನ್ನನಲಾಗಿದೆ.

ಕಾನ್‍ಸ್ಟೇಬಲ್‍ಗೂ ಜಳಪಿಸಿದ ತಲವಾರು:
ಫರಂಗಿಪೇಟೆ ಹೊರಠಾಣೆಯ ಮೂಗಿನ ನೇರಕ್ಕೆ ಈ ಘಟನೆ ನಡೆಯುತ್ತಿದ್ದಂತೆ ಠಾಣೆಯಲ್ಲಿ ಕರ್ತವ್ಯ ನಿರತರಾಗಿದ್ದ ಕಾನ್‍ಸ್ಟೇಬಲ್ ಸುಬ್ರಹ್ಮಣ್ಯ ಎಂಬವರು ಲಾಠಿ ಹಿಡಿದು ಸ್ಥಳಕ್ಕೆ ಧಾವಿಸಿದ್ದರು. ಆಗ ಆರೋಪಿಗಳು ಇವರಿಗೂ ತಲವಾರು ಜಳಪಿಸಿದ್ದು, ಏಕಾಂಗಿಯಾಗಿದ್ದ ಕಾನ್‍ಸ್ಟೇಬಲ್ ಅಸಹಾಯಕರಾಗಿ ವಾಪಸ್ ಠಾಣೆಗೆ ಬಂದು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಎಎಸ್ಪಿ ಡಾ. ಅರುಣ್, ಸಿಐ ಎಂ.ಎಸ್. ಪ್ರಕಾಶ್, ಎಸ್ಸೈ ಉಮೇಶ್ ಮತ್ತವರ ತಂಡ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಬಂದೋಬಸ್ತ್‍ನ್ನು ಏರ್ಪಡಿಸಿದ್ದಾರೆ.
ಘಟನೆಯ ಬೆನ್ನಲ್ಲೇ ಆರೋಪಿಗಳ ಪತ್ತೆಗಾಗಿ ನಾಕಾಬಂಧಿ ನಡೆಸಿ ಬಲೆ ಬೀಸಿದ್ದರೂ ಆರೋಪಿಗಳು ಅದಾಗಲೇ ಪಿಕಪ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಇನ್ನೋವಾ ಕಾರ್‍ನಲ್ಲಿ ಪರಾರಿಯಾಗಿದ್ದಾರೆ.
ಸಿನಿಮಾ ಮಾದರಿಯ ಘಟನೆ:
ರಾತ್ರಿ ಸುಮಾರು 11:15ರಿಂದ 11:30ರವರೆಗೆ ಸಿನಿಮೀಯ ಮಾದರಿಯಲ್ಲಿ ನಡೆದ ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಪೊಲೀಸ್ ಔಟ್ ಪೊಸ್ಟ್ ಬಳಿಯಲ್ಲೇ ನಡೆದಿರುವ ಈ ಘಟನೆ ಪೊಲೀಸರಿಗೂ ಇದೀಗ ಸವಾಲಾಗಿದೆ.
ತಂಡ ರಚನೆ:

ಆರೋಪಿಗಳ ಪತ್ತೆಗಾಗಿ ಮೂರು ತಂಡವನ್ನು ರಚಿಸಲಾಗಿದೆ ಎಂದು ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಒಂದು ತನಿಖಾ ತಂಡ ಹಂತಕರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದರೆ ಇನ್ನೆರಡು ತಂಡ ಆರೋಪಿಗಳ ಬಂಧನ ಕಾರ್ಯಾಚರಣೆ ನಡೆಸುತ್ತಿದೆ. ಕೃತ್ಯದ ಬಳಿಕ ಹಂತಕರು ಕಾಸರಗೋಡು ಮೂಲಕ ಕೇರಳಕ್ಕೆ ಪರಾರಿಯಾಗಿರುವಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಗಾಯಾಳು ಫಝಲ್ ನೀಡಿರುವ ದೂರಿನಂತೆ ನೌಫಲ್ ಕಣ್ಣೂರು, ನೌಫಲ್ ಫೈಝಲ್ ನಗರ, ಆಚಿ ಯಾನೆ ಮೂಪಆಚಿ, ಸದ್ದಾಂ, ಅಮ್ಮಿ ಕಣ್ಣೂರು, ಮುನ್ನಾ ಫೈಝಲ್ ನಗರ, ಹರ್ಷದ್ ಫೈಝಲ್‍ನಗರ ಎಂಬವರ ಮೇಲೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

By suddi9

Leave a Reply

Your email address will not be published. Required fields are marked *