ಬಂಟ್ವಾಳ: ಫರಂಗಿಪೇಟೆಯಲ್ಲಿ ಸೋಮವಾರ ರಾತ್ರಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಕಲೆಹಾಕುವಲ್ಲಿ ಜಂಟಿ ಪೊಲೀಸ್ ತಂಡ ಯಶಸ್ವಿಯಾಗಿದೆ.ಆರೋಪಿಗಳ ಸ್ಪಷ್ಟ ಸುಳಿವನ್ನು ಪಡೆದಿರುವ ಪೊಲೀಸ್ ತಂಡ, ಒಂದೆರಡು ದಿನಗಳಲ್ಲಿ ಆರೋಪಿಗಳನ್ನು ತಮ್ಮ ಬಲೆಗೆ ಕೆಡವಿ ಹಾಕುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.

5f3af88c-0b11-4de2-8fed-10bbd1bcb8a2
ಆರೋಪಿಗಳ ಪತ್ತೆಗಾಗಿ ಡಿಸಿಐಬಿ, ಸಿಸಿಬಿ ಹಾಗೂ ಬಂಟ್ವಾಳ ಇನ್‍ಸ್ಪೆಕ್ಟರ್ ಅವರ ನೇತೃತ್ವದ ಮೂರು ತಂಡವನ್ನು ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ರಚಿಸಿದ್ದರು. ಕೃತ್ಯದ ಬಳಿಕ ಹಂತಕರು ಕಾಸರಗೋಡು ಮೂಲಕ ಕೇರಳಕ್ಕೆ ಪರಾರಿಯಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಂಡಿದ್ದ ಡಿಸಿಐಬಿ, ಸಿಸಿಬಿ ತಂಡವು ಆರೋಪಿಗಳ ಸುಳಿವನ್ನು ಪತ್ತೆಹಚ್ಚಿ ಬಂಧನ ಕಾರ್ಯಾಚರಣೆಗೆ ಬಲೆ ಬೀಸಿದೆ.
ಸೋಮವಾರ ರಾತ್ರಿ ಫರಂಗಿಪೇಟೆ ಪೊಲೀಸ್ ಹೊರಠಾಣೆಯ ಪಕ್ಕದಲ್ಲೇ ಅಡ್ಯಾರ್ ಕಣ್ಣೂರಿನ ನೌಫಲ್ ಸೇರಿದಂತೆ 7 ಮಂದಿಯ ತಂಡ ಇನ್ನೋವಾ ಹಾಗೂ ಪಿಕಪ್‍ಲ್ಲಿ ಆಗಮಿಸಿ ಅಡ್ಯಾರ್‍ಕಟ್ಟೆಯ ಝಿಯಾ ಮತ್ತಾತನ ಸ್ನೇಹಿತರಿದ್ದ ಶಿಫ್ಟ್ ಕಾರನ್ನು ತಡೆದು ತಲವಾರು ದಾಳಿ ನಡೆಸಿದ್ದರು.

ಪರಿಣಾಮ ಝಿಯಾ ಹಾಗೂ ಫಯಾಝ್ ಸಾವಿಗೀಡಾಗಿದ್ದರು. ಅನೀಸ್, ಮುಶ್ತಾಕ್,ಫಝಲ್ ಎಂಬವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಪೈಕಿ ಅನೀಸ್, ಮುಶ್ತಾಕ್ ಸ್ಥಿತಿ ಇನ್ನೂ ಕೂಡ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಗಾಯಾಳು ಫಝಲ್ ಚೇತರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
* ಕಾರಿನೊಳಗೆ ಕೊಚ್ಚಿದ ಗ್ಯಾಂಗ್:
ಕಣ್ಣೂರಿನ ನೌಫಲ್ ಮತ್ತು ತಂಡ ತನ್ನ ಎದುರಾಳಿ ಗ್ಯಾಂಗ್‍ನ ಝಿಯಾ ಮತ್ತಾತನ ಸ್ನೇಹಿತರ ಮೇಲೆ ಯದ್ವಾತದ್ವಾವಾಗಿ ತಲವಾರು ದಾಳಿ ನಡೆಸಿತ್ತು.
ಫಯಾಝ್ ಸ್ವಿಫ್ಟ್ ಕಾರನ್ನು ಚಲಾಯಿಸುತ್ತಿದ್ದು ಝಿಯಾ ಪಕ್ಕದ ಸೀಟ್‍ನಲ್ಲಿ ಕುಳಿತ್ತಿದ್ದರೆ ಉಳಿದ ಮೂವರು ಹಿಂಬಂದಿ ಸೀಟ್‍ನಲ್ಲಿ ಇದ್ದರು.
ಝಿಯಾ ತಂಡದ ಕಾರು ಫರಂಗಿಪೇಟೆಯ ಹೊಟೇಲೊಂದರ ಮುಂಭಾಗದಲ್ಲಿ ಬಂದು ನಿಲ್ಲುತ್ತಿದ್ದಂತೆ ನೌಫಲ್ ಸಹಿತ 7 ಮಂದಿ ಹಠಾತನೆ ಝಿಯಾ ಕಾರಿನ ಮೇಲೆ ಎರಗಿದ್ದಾರೆ.
ಕಾರಿನ ಗಾಜನ್ನು ಪುಡಿಗೈದು ಝಿಯಾ ಮತ್ತು ಫಯಾಝ್ ಕಾರಿನ ಬಾಗಿಲನ್ನು ತೆರೆಯಲು ಅವಕಾಶ ನೀಡದೆ ಕುಳಿತ ಸೀಟ್‍ನಲ್ಲೇ ಕೊಚ್ಚಿ ಹಾಕಿದ್ದಾರೆ. ಈ ವೇಳೆ ಹಿಂಬದಿ ಸೀಟ್‍ನಲ್ಲಿದ್ದವರ ಮೇಲೆ ದಾಳಿ ನಡೆಸಿದಾಗ ಅವರು ತಕ್ಷಣ ಕಾರಿನ ಬಾಗಿಲು ತೆರೆದು ಓಡಲು ಆರಂಭಿಸುತ್ತಿದ್ದಂತೆ ಅವರ ಮೇಲೂ ದಾಳಿ ನಡೆಸಲಾಗಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಂಜಾ ಮಾಫಿಯಾ:
ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಎರಡು ಗ್ಯಾಂಗ್‍ನ ಮಧ್ಯೆ ವೈಷಮ್ಯ ಬೆಳೆದಿದ್ದು, ಮಾರಿಪಳ್ಳ ಫರಂಗಿಪೇಟೆ, ಅಡ್ಯಾರ್, ಕಣ್ಣೂರು ಪರಿಸರದಲ್ಲಿ ಗಾಂಜಾ ಮಾಫಿಯಾ ವ್ಯಾಪಕವಾಗಿ ಬೇರುಬಿಟ್ಟಿರುವುದು ಪೊಲೀಸರಿಗೂ ಮಾಹಿತಿ ಇದೆ. ಆದರೆ ಒತ್ತಡಗಳು ಕಟ್ಟಿಹಾಕಿವೆ. ಗಾಂಜಾ ಸೇವನೆಯಿಂದಾಗಿ ಸ್ಥಳೀಯ ಯುವಕರು ಅಪರಾಧ ಕೃತ್ಯಗಳಲ್ಲಿ ಶಾಮೀಲಾಗುತ್ತಿರುವುದು ಹೆಚ್ಚಾಗುತ್ತಿದೆ.
ಮಾರಿಪಳ್ಳ ಹಾಗೂ ಫರಂಗಿಪೇಟೆ ಪರಿಸರದಲ್ಲಿ ಗಾಂಜಾ ಸೇವನೆಯಿಂದ ಯುವಕರ ಮಧ್ಯೆ ಹೊಡೆದಾಟ, ಹಲ್ಲೆ ಪ್ರಕರಣಗಳು ನಡೆಯುತ್ತಲೇ ಇವೆ. ಆದರೆ ಪೊಲೀಸರಿಗೆ ಇದನ್ನು ತಡೆಗಟ್ಟಲೂ ಈವರೆಗೂ ಸಾಧ್ಯವಾಗಿಲ್ಲ.
ಪಿಕಪ್ ವಶಕ್ಕೆ:
ಹಂತಕರು ಕೃತ್ಯಕ್ಕೆ ಬಳಸಿದ್ದ ಪಿಕಪ್‍ಅನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಈ ವಾಹನ ಯಾರಿಗೆ ಸೇರಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

By suddi9

Leave a Reply

Your email address will not be published. Required fields are marked *