ಕೈಕಂಬ: ಇಲ್ಲಿನ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮೊನ್ನೆ ತಾಲೂಕು ಪಂಚಾಯತ್ ವತಿಯಿಂದ ರಾಜ್ಯ ಸರ್ಕಾರದ `ಮಾತೃಪೂರ್ಣ ಯೋಜನೆ’ ಕಾರ್ಯಕ್ರಮ ಜರುಗಿದ್ದು, ಕೆಲವು ಗರ್ಭಿಣಿ ಮಹಿಳೆಯರು ಪಾಲ್ಗೊಂಡಿದ್ದರು.ಸರ್ಕಾರದ ಈ ಮಹತ್ವಪೂರ್ಣ ಯೋಜನೆನ ಯಶಸ್ವಿಗಾಗಿ ಮಹಿಳೆಯರು ಶ್ರಮಿಸಬೇಕು. ಗರ್ಭಿಣಿಯರು ಮತ್ತು ಬಾಣಂತಿಯರಿಗಾಗಿ ಅಂಗನವಾಡಿಗಳ ಮೂಲಕ ಪರಿಚಯಿಸಲಾಗಿರುವ ಪೌಷ್ಠಿಕ ಆಹಾರ ಒದಗಿಸುವ ಈ ಯೋಜನೆಯ ಲಾಭ ಪಡೆಯಬೇಕು ಮತ್ತು ತಾವು ಪೌಷ್ಠಿಕ ಆಹಾರ ಸೇವಿಸಿ, ಭವಿಷ್ಯದಲ್ಲಿ ಮಕ್ಕಳನ್ನು ಆರೋಗ್ಯವಂತರಾಗಿ ಬೆಳೆಸಬೇಕು ಎಂದು ದೀಪ ಬೆಳಗಿಸಿ ಸ್ಥಳೀಯವಾಗಿ ಯೋಜನೆಗೆ ಚಾಲನೆ ನೀಡಿದ ಜಿ ಪಂನ ಗುರುಪುರ ಸದಸ್ಯ ಯು ಪಿ ಇಬ್ರಾಹಿಂ ಅಭಿಪ್ರಾಯಪಟ್ಟರು.
ಮಾತೃಪೂರ್ಣ ಯೋಜನೆ ರಾಜ್ಯ ಮಟ್ಟದ್ದಾಗಿದ್ದು, ಇದನ್ನು ಜಿಲ್ಲೆಗಳಿಗೆ ಅನ್ವಯವಾಗುವಂತೆ ಪ್ರತ್ಯೇಕ ರೀತಿಯಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ. ಜಿಲ್ಲೆಯ ಮಟ್ಟಿಗೆ ಸ್ವಲ್ಪ ಕಷ್ಟವಾಗಿದ್ದರೂ ಯೋಜನೆಯ ಮೂಲ ಉದ್ದೇಶ ಉತ್ತಮವಾಗಿದೆ ಎಂದು ಗುರುಪುರ ಗ್ರಾಮ ಪಂಚಾಯತ್ ಸದಸ್ಯ ಜಿ ಎಂ ಉದಯ ಭಟ್ ಹೇಳಿದರು.ಸರ್ಕಾರದ ಯೋಜನೆ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕೆಂದು ತಾ ಪಂ ಸದಸ್ಯ ಸಚಿನ್ ಅಡಪ ವಿನಂತಿಸಿದರು. ಈ ಸಂದರ್ಭದಲ್ಲಿ ಗುರುಪುರ ಗ್ರಾ ಪಂ ಬಿಜೆಪಿ ಸದಸ್ಯ ರಾಜೇಶ್ ಹಾಗೂ ಸ್ಥಳೀಯ ಗರ್ಭಿಣಿ ಮಹಿಳೆಯರು ಮತ್ತಿತರರು ಇದ್ದರು.
