ಗುರುಪುರ : ಇಂದು ಗುರುಪುರದ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ನಡೆದ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ 2016-17ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಪದಾಧಿಕಾರಿಗಳು ನಡೆಸಿರುವ ಭ್ರಷ್ಟಾಚಾರ ಏನೆಂಬುದಕ್ಕೆ ಸಾಕ್ಷ್ಯಿಯಾಯಿತು.ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಘಕ್ಕೆ ಸಿಬ್ಬಂದಿ ನೇಮಕ ಪ್ರಕ್ರಿಯೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಸಂಘದ ಮಾಜಿ ನಿರ್ದೇಶಕರೊಬ್ಬರು ಸಾಕ್ಷ್ಯ ಸಮೇತ ಆರೋಪಿಸುತ್ತ, ಸಿಬ್ಬಂದಿ ನೇಮಿಸುವಾಗಿ ಸಂಘದ ನಿಯೋಜಿತ ಸಮಿತಿ ಸದಸ್ಯರು ಒಂದರಿಂದ ಎರಡು ಲಕ್ಷ ರೂ ಲಂಚ ಪಡೆದಿದ್ದು, ಆ ಹಣ ಎಲ್ಲಿ ಠೇವಣಿ ಇಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ) ನಾಗರಾಜ್ ರಾವ್ ಈ ಆರೋಪಕ್ಕೆ ಉತ್ತರಿಸುತ್ತ, ಸರ್ಕಾರಿ ಮಟ್ಟದಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ ಎಂದು ಪರೋಕ್ಷವಾಗಿ ಲಂಚದ ಆರೋಪ ಒಪ್ಪಿಕೊಂಡಾಗ, ಸಂಘದ ಸದಸ್ಯರು ಪದಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಇದೇ ವೇಳೆ ಸಂಘದ ಮಾಜಿ ಸದಸ್ಯರೊಬ್ಬರು ಮಾಜಿ ನಿರ್ದೇಶಕರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸುತ್ತ, ನೀವೆಷ್ಟು ಸಾಚಾ ವ್ಯಕ್ತಿ ಎಂದು ಪ್ರಶ್ನಿಸುತ್ತ ಕೈಮಿಲಾಯಿಸಲು ಮುಂದೆ ಬಂದರು. ಉಳಿದವರು ತಕ್ಷಣ ಪರಿಸ್ಥಿತಿ ತಹಬದಿಗೆ ತಂದರು. ಆದಾಗ್ಯೂ ಲಂಚ ಪಡೆದ ಆರೋಪ ಅಲ್ಲಗಳೆಯುವಲ್ಲಿ ಸಂಘದ ಸಿಇಒ ರಾವ್ ವಿಫಲರಾದರು.

ಸಂಘಕ್ಕೆ ರೈತಾಪಿ ವರ್ಗದ ಆರು ಮಂದಿ ಆಯ್ಕೆ ಮಾಡಬೇಕು. ಯಾರ್ಯಾರನ್ನೋ ಸಂಘದ ಆಡಳಿತ ಮಂಡಳಿಯಲ್ಲಿ ಕೂರಿಸುವುದು ಸರಿಯಲ್ಲ ಎಂದು ಕೃಷಿಕ ಕಿಟ್ಟಣ್ಣ ರೈ ಸಲಹೆ ನೀಡಿದಾಗ, ಸಂಘದ ನಿರ್ದೇಶಕ ವಿನಯಕುಮಾರ್ ಶೆಟ್ಟಿ ಒಪ್ಪಿಗೆ ಸೂಚಿಸಿದರು. ಈ ವಿಷಯದಲ್ಲಿ ದುರ್ಗಾಪ್ರಸಾದ್ ಶೆಟ್ಟಿ ಯಾನೆ ವರ್ಧಮಾನ ಶೆಟ್ಟಿ ಬೈಲಾ ಕಾನೂನುರೀತ್ಯಾ ಸಲಹೆ ನೀಡಿದರು.ಕೋಳಿಅಂಕ, ಕ್ರಿಕೆಟ್ ಹೀಗೆ ಬೇಡದ ವಿಷಯಗಳಿಗೆ ಸಂಘದಿಂದ ಜಾಹೀರಾತು ನೀಡುತ್ತೀರಿ. ಸದಸ್ಯರ ಹಣ ಈ ರೀತಿ ಪೋಲು ಮಾಡುವುದರಲ್ಲಿ ಅರ್ಥವಿದೆಯೇ ಎಂದು ರೈ ಮತ್ತೊಂದು ಸವಾಲೆಸೆದಾಗ, ಇನ್ನು ಮುಂದೆ ನೋಂದಾಯಿತ ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಜಾಹೀರಾತು ನೀಡುವ ಬಗ್ಗೆ ನಿರ್ಣಯಿಸಲಾವುದುದೆಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಘ 23 ಲಕ್ಷ ರೂ ಕಡಿಮೆ ಲಾಭದಲ್ಲಿದೆ ಎಂದು ಹೇಳುತ್ತಿದ್ದರೂ, ಅಕ್ರಮ ಜಾಗ(ಆರೂವರೆ ಸೆಂಟ್ಸ್) ಖರೀದಿಸಿ, ಅದನ್ನು ಸಮತಟ್ಟುಗೊಳಿಸಿ, ಗೋಡೆ ನಿರ್ಮಿಸಲು 9.68 ಲಕ್ಷ ರೂ ಖರ್ಚು ಮಾಡಿರುವುದರ ಔಚಿತ್ಯವೇನೆಂದು ರೈ ಪ್ರಶ್ನಿಸಿದಾಗ, “ಅದು ಅಕ್ರಮ ಜಾಗವಲ್ಲ, ಎಲ್ಲ ದಾಖಲೆಗಳಿವೆ” ಎಂದು ಸಂಘದ ನಿರ್ದೇಶಕ ಸ್ಪಷ್ಟನೆ ನೀಡಿದರು.ಕಳೆದ ಸಾಲಿನಂತೆ ಈ ವರ್ಷವೂ ಸಂಘದ ಮಹಾಸಭೆಯು ಕೆಲವರ ವೈಯಕ್ತಿಕ ಪ್ರಶ್ನೆಗಳು ಹಾಗೂ ಭ್ರಷ್ಟಾಚಾರದ ಆರೋಪಗಳಿಗೆ ಸಾಕ್ಷ್ಯಿಯಾಯಿತು. ಸಭೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಯಿತು. ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳಾದ ಸಚಿನ್ ಅಡಪ, ಸದಾಶಿವ ಶೆಟ್ಟಿ, ನರೇಶ್, ಶೀನ ಕೋಟ್ಯಾನ್, ಶೇಖಬ್ಬ, ವಿನಯಕುಮಾರ್ ಶೆಟ್ಟಿ, ನಾಗೇಶ್, ಗಣೇಶ್, ಗೀತಾ ಸುವರ್ಣ, ನಳಿನಿ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಕಮಲಾಕ್ಷ ವರದಿ ವಾಚಿಸಿದರು. ನಾಗೇಶ್ ವಂದನಾರ್ಪಣೆಗೈದರು.

By suddi9

Leave a Reply

Your email address will not be published. Required fields are marked *