ಸಿರಾಜುದ್ದೀನ್ ಉಳ್ಳಾಲ, ತಾಜುದ್ದೀನ್, ಅಕ್ಬರ್ ವಳಚ್ಚಿಲ್ ಮತ್ತು ಅನ್ವರ್ ಬಜ್ಪೆ ಜಾಮೀನು ಪಡೆದ ಆರೋಪಿಗಳು. ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂಡುಬಿದಿರೆ ಪೊಲೀಸರು 10 ಮಂದಿಯನ್ನು ಬಂಧಿಸಿ 17 ಮಂದಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿ ಆರೋಪಿಗಳಲ್ಲಿ ಸಿರಾಜುದ್ದೀನ್ ಉಳ್ಳಾಲ, ತಾಜುದ್ದೀನ್, ಅಕ್ಬರ್ ವಳಚ್ಚಿಲ್ ಮತ್ತು ಅನ್ವರ್ ಬಜ್ಪೆ ಎರಡು ತಿಂಗಳ ಹಿಂದೆ ಮೂಡುಬಿದಿರೆ ನ್ಯಾಯಾಲಯಕ್ಕೆ ಶರಣಾಗಿದ್ದರು. ಅನಂತರ ಮೂಡುಬಿದಿರೆ ಪೊಲೀಸರು ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಇದಾದ ಬಳಿಕ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳು ಜಾಮೀನು ಕೋರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆರ್ಜಿ ವಿಚಾರಣೆ ನಡೆಸಿದ ಮಂಗಳೂರು ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರವಾಗಿ ಅಶ್ರಫ್ ಕೆ. ಮತ್ತು ಅಬ್ದುಲ್ ಮಜೀದ್ ಖಾನ್ ವಾದಿಸಿದ್ದರು.

