ಬಂಟ್ವಾಳ: ಭಾಷಣದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಅಭಿವೃದ್ದಿ ಕೆಲಸ ಮಾಡಿ ತೋರಿಸಿದರೆ ಮಾತ್ರ ಅದು ಪ್ರಯೋಜನಕಾರಿಯಾಗುತ್ತದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಲವಾರು ಜನಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಸಜೀಪಮುನ್ನೂರು ಗ್ರಾಮಪಂಚಾಯಿತಿ ವ್ಯಾಪ್ತಿಯ 94ಸಿಸಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರಕಾರಿ ಜಮೀನಿನಲ್ಲಿ ಇರುವವರು 94ಸಿಸಿಯಡಿ ಅರ್ಜಿ ಸಲ್ಲಿಸಲು ಇನ್ನೂ ಕಾಲವಕಾಶವನ್ನು ವಿಸ್ತರಣೆ ಮಾಡಲಾಗಿದೆ ಎಂದ ಸಚಿವ ರಮಾನಾಥ ರೈ ಶಾಸಕನಾಗಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ನಡೆಸಿದ್ದೇನೆ. ಅದನ್ನು ಸಹಿಸದವರು ಅಪಪ್ರಚಾರ ಮಾಡುತ್ತಿದ್ದಾರೆ. ಒಟ್ಟು ಅಭಿವೃದ್ದಿಯ ಕಾಲು ಭಾಗ ಕಾರ್ಯವು ಅಪಪ್ರಚಾರ ಮಾಡುವವರ ಅಧಿಕಾರವಧಿಯಲ್ಲಿ ನಡೆದಿಲ್ಲ ಎಂದು ಟೀಕಿಸಿದರು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಸಜೀಪಮುನ್ನೂರು ಗ್ರಾ.ಪಂ. ಅಧ್ಯಕ್ಷ ಶರೀಫ್ ನಂದಾವರ, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯೆ ನಸೀಮಾ ಬೇಗಂ, ಅರಣ್ಯ ಸಮಿತಿ ಸದಸ್ಯ ಎಂ. ಪರಮೇಶ್ವರ, ಪಂಚಾಯಿತಿ ಸದಸ್ಯರಾದ ಸಯಿದಾ, ಸುಮತಿ, ನಳಿನಿ, ಗುತ್ತಿಗೆದಾರ ಮನ್ಸೂರ್ ಹಾಜರಿದ್ದರು.
ಆರಾಧನ ಸಮಿತಿ ಸದಸ್ಯ ಯೂಸುಫ್ ಕರಂದಾಡಿ ಸ್ವಾಗತಿಸಿದರು, ಕಂದಾಯ ನಿರೀಕ್ಷಕ ರಾಮ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭ ಸಜೀಪಮುನ್ನೂರು ಗ್ರಾಮದಲ್ಲಿ 10 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಣಗೊಂಡ ಮರ್ತಾಜೆ ರಸ್ತೆಯ ಕಾಂಕ್ರೀಟಿಕರಣ ಉದ್ಘಾಟನೆ, 8 ಲಕ್ಷ ರುಪಾಯಿ ವೆಚ್ಚದ ಕಂದೂರು- ಮಡಿವಾಳ ಪಡ್ಪು ರಸ್ತೆ ಡಾಮಾರೀಕರಣ ಉದ್ಘಾಟನೆ, 9ಲಕ್ಷ ರುಪಾಯಿ ವೆಚ್ಚದ ಶಾಂತಿನಗರದಿಂದ ಮರ್ತಾಜೆ ಗಡಿವರೆಗಿನ ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ, 6ಲಕ್ಷ ವೆಚ್ಚದ ಶಾಂತಿನಗರ ಅಂತರ ಅಗರ್‍ಪಾಲು ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ, 15 ಲಕ್ಷ ವೆಚ್ಚದ ಬೊಕ್ಕಸ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದರು. ರಾಷ್ಟ್ರೀಯ ಸಹಾಯಧನ ಯೋಜನೆಯಡಿ 6 ಕುಟುಂಬಗಳಿಗೆ ತಲಾ 20 ಸಾವಿರದಂತೆ ಸಹಾಯಧನ ಚೆಕ್ ವಿತರಿಸಿದರು. 90 ಕುಟುಂಬಗಳಿಗೆ 94ಸಿಸಿ ಹಕ್ಕು ಪತ್ರ ವಿತರಿಸಲಾಯಿತು.
