ಬಂಟ್ವಾಳ: ಬಿಜೆಪಿ ಯುವ ಮೋರ್ಚಾ ವತಿಯಿಂದ ಸೆ.7ರಂದು ನಡೆಯುವ ಮಂಗಳೂರು ಚಲೋ ಬೈಕ್ ರ್ಯಾಲಿ ಮತ್ತು ಪ್ರತಿಭಟನೆಗೆ ಬಂಟ್ವಾಳ ಕ್ಷೇತ್ರ ವತಿಯಿಂದ 2 ಸಾವಿರ ಬೈಕುಗಳಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಹೇಳಿದ್ದಾರೆ.

ಸೋಮವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಚಿಕ್ಕಮಂಗಳೂರು ಮತ್ತು ಮೈಸೂರು ಕಡೆಗಳಿಂದ ಬೈಕ್ ರ್ಯಾಲಿ ಸೆ.5ರಿಂದ ಆರಂಭಗೊಳ್ಳಲಿದ್ದು, ಸೆ.7ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಮಧ್ಯಾಹ್ನ 12ರಂದು ಸೇರಲಿದೆ ಎಂದರು. ಬಂಟ್ವಾಳ ಕ್ಷೇತ್ರದ ಕಾರ್ಯಕರ್ತರು ವಿವಿಧ ಜಿಲ್ಲೆಯಿಂದ ಆಗಮಿಸುವ ಬೈಕ್ ರ್ಯಾಲಿಯ ಕಾರ್ಯಕರ್ತರ ಜತೆಗೂಡಿ ಮಂಗಳೂರಿಗೆ ತೆರಳಲಿದ್ದಾರೆ.
ಈ ಸಂದರ್ಭ ಬೃಹತ್ ಪ್ರತಿಭಟನೆ ಮಂಗಳೂರು ಚಲೋ ನಡೆಯಲಿದ್ದು, ಪಿಎಫ್ಐ, ಕೆಎಫ್ಡಿ, ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು ಹಾಗೂ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ಗಳ ಎದುರು ಪ್ರತಿಭಟನೆ ನಡೆಸಲಾಗಿದ್ದು, ಬಂಟ್ವಾಳ ಕ್ಷೇತ್ರದ 37 ಗ್ರಾಮ ಪಂಚಾಯತ್ ಸಹಿತ ಬಂಟ್ವಾಳ ಪುರಸಭೆಯ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆದಿದ್ದು ಕಾರ್ಯದರ್ಶಿ, ಪಿಡಿಒ, ಮುಖ್ಯಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ ಎಂದ ಅವರು ರ್ಯಾಲಿಯ ಯಶಸ್ಸಿಗೆ ತಯಾರಿ ನಡೆಸಲಾಗಿದ್ದು, ಕ್ಷೇತ್ರಕ್ಕೆ ಆಗಮಿಸುವ ಕಾರ್ಯಕರ್ತರಿಗೆ ವಾಸ್ತವ್ಯಕ್ಕೆ ಮಾಣಿ ಶ್ರೀ ರಾಮಚಂದ್ರಾಪುರ ಮಠದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಆವರು ಮಾಹಿತಿ ನೀಡಿದರು.
ಕಳೆದ ಎರಡು ವರ್ಷಗಳಲ್ಲಿ ವಿಶ್ವನಾಥ್, ಪ್ರಶಾಂತ್ ಪೂಜಾರಿ, ಕುಟ್ಟಪ್ಪ, ರಾಜು, ಪ್ರವೀಣ್ ಪೂಜಾರಿ, ರುದ್ರೇಶ್, ಮಾಗಳಿ ರವಿ, ಶ್ರೀನಿವಾಸ ಪ್ರಸಾದ್, ಹರೀಶ್, ಬಂಡಿ ರಮೇಶ್ ಹಾಗೂ ಶರತ್ ಮಡಿವಾಳ ಮೊದಲಾದವರ ಹಿಂದು ಕಾರ್ಯಕರ್ತರ ಹತ್ಯೆಗಳು, ಹಲ್ಲೆ ಪ್ರಕರಣಗಳು ನಡೆದಿವೆ. ಇಂತಹ ಸಮಾಜದ್ರೋಹಿ ಕೃತ್ಯದಲ್ಲಿ ಭಾಗಿಯಾದವರನ್ನು ರಾಜ್ಯದಲ್ಲಿ ನಿಷೇಧಿಸಬೇಕು. ರಾಜ್ಯದಲ್ಲಿ ಹಿಂದುಗಳ ಮೇಲಾಗಿರುವ ಎಲ್ಲ ಹತ್ಯೆ, ಹಲ್ಲೆ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದ ಅವರು, ಇತ್ತೀಚಿನ ಸಮಾಜಘಾತುಕ ಸಂಘಟನೆಗಳಿಗೆ ಕೋಮು ಹಿಂಸೆಗೆ ಸಚಿವ ರಮಾನಾಥ ರೈಗಳು ಕುಮ್ಮಕ್ಕು ನೀಡುತ್ತಿದ್ದು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಸಚಿವರಿಗೆ ನೈತಿಕತೆ ಇಲ್ಲ…
ಬೈಕ್ ರ್ಯಾಲಿಯನ್ನು ತಡೆಯಲು ಸರಕಾರ ತನ್ನಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇಂತಹ ಯಾವುದೇ ಪ್ರಯತ್ನ ನಡೆಸಿದರೂ ಬಿಜೆಪಿ ಕಾರ್ಯಕರ್ತರು ಬಗ್ಗುವುದಿಲ್ಲ, ಪಕ್ಷದ ರಾಜ್ಯ ನಾಯಕರ ಸೂಚನೆಯಂತೆ ಶಾಂತಯುತವಾಗಿ ಬೈಕ್ ರ್ಯಾಲಿಯನ್ನು ನಡೆಸಲಾಗುತ್ತಿದೆ ಎಂದರು. ಸೆ. 12 ರಂದು `ಸಾಮರಸ್ಯ ನಡಿಗೆ` ಆಯೋಜಿಸಲು ಸಚಿವ ರಮಾನಾಥ ರೈ ಅವರಿಗೆ ನೈತಿಕತೆ ಇಲ್ಲ ಎಂದು ಟೀಕಿಸಿದರು.
ಸರಕಾರ, ಕಾನೂನು ,ಪೊಲೀಸ್ ವ್ಯವಸ್ಥೆ ಎಲ್ಲವೂ ಅವರಲ್ಲೇ ಇದ್ದು, ಕಾಂಗ್ರೆಸಿಗರಿಗೆ ಮತ್ತು ಅವರ ಬೆಂಬಲಿಗರಿಗೆ ಮಾತ್ರ ಅವಕಾಶ ಕಲ್ಪಿಸಿ ಇತರ ಸಂಘಟನೆಗಳನ್ನು ಈ ನಡಿಗೆಯಿಂದ ದೂರವಿರಿಸಲಾಗಿದ್ದು ಹಿಂದೂ ಕಾಂರ್ಯಕರ್ತರ ಹತ್ಯೆ , ಹಲ್ಲೆ ಪ್ರಕರಣದಲ್ಲಿ ಕಾಂಗ್ರೆಸಿಗರ ಪರೋಕ್ಷ ಕೈವಾಡವಿದ್ದು ಇದೀಗ ಅವರೇ ಸಾಮರಸ್ಯದ ನಡಿಗೆಗೆ ಮುಂದಾಗಿರುವುದು ವಿಪರ್ಯಾಸ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು, ಕೆ.ಪದ್ಮನಾಭ ಕೊಟ್ಟಾರಿ, ಜಿ.ಆನಂದ, ವಿಕಾಸ್ ಪುತ್ತೂರು, ದಿನೇಶ್ ಅಮ್ಟೂರು, ದಿನೇಶ್ ಭಂಡಾರಿ, ಚೆನ್ನಪ್ಪ ಕೋಟ್ಯಾನ್, ರಾಮದಾಸ ಬಂಟ್ವಾಳ, ಮಚ್ಚೇಂದ್ರ ಸಾಲ್ಯಾನ್, ವಜ್ರನಾಥ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.
