ಕೈಕಂಬ: ಪ್ರಧಾನಿ ನರೇಂದ್ರ ಮೋದಿಯ ಜನ ವಿರೋಧಿ ಕುರುಡು ನೀತಿಗಳು ಈಗ ಅವರಿಗೆಯೇ ತಿರುಗೇಟು ನೀಡಲಾರಂಭಿಸಿವೆ. ಖಾಸಗಿ ಟೀವಿ ಚಾನೆಲ್ಲುಗಳಲ್ಲಿ ಈಗ ಜಿಎಸ್ಟಿ, ಜೆಡಿಪಿ ವಿಷಯ ಚರ್ಚೆಯಾಗುತ್ತಿದೆ. ಹಿಂದೆ ಶೇ 12 ಜಿಡಿಪಿ ಇದ್ದರೆ, ಮೋದಿಯ ಆಡಳಿತಾವಧಿಯಲ್ಲಿ ದೇಶದ ಜಿಡಿಪಿ ಶೇ 5.94ಕ್ಕೆ ಕುಸಿದಿದೆ ಎಂದು ಅರ್ಥಶಾಸ್ತ್ರಜ್ಞರು ವಿಶ್ಲೇಷಿಸುತ್ತಿದ್ದಾರೆ. ಅಸಲಿ ಎಂದಿರುವ ಯೋಜನೆಗಳ `ನಕಲಿ’ ಬಣ್ಣ ಬಯಲಾಗುತ್ತಿದೆ ಎಂದು ಕೊಡಗು ಎಂಎಲ್‍ಸಿ ಅರುಣ್ ಮಾಚಯ್ಯ ಟೀಕಿಸಿದರು.

ಗುರುಪುರ ಕೈಕಂಬದ ಮೆಗಾ ಪ್ಲಾಜಾದಲ್ಲಿ ಇಂದು(ಸೆ.2) ನಡೆದ ಗುರುಪುರ ಬ್ಲಾಕ್ ಮಟ್ಟದ `ಪಕ್ಷ ಬಲವರ್ಧನೆ’ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ದ ಕ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಮಾಚಯ್ಯ, ಮೋದಿ ಸರ್ಕಾರದ ಹುಳುಕುಗಳು ಒಂದೊಂದಾಗಿಯೇ ಹೊರ ಬೀಳಲಾರಂಭಿಸಿವೆ. ಮುಂದಿನ ತಿಂಗಳುಗಳಲ್ಲಿ “ಮೋದಿ ಬಯಲಾಗಲಿದ್ದಾರೆ”. ಅದಕ್ಕಾಗಿ ಕಾಯೋಣ, ಮೇ ತಿಂಗಳಲ್ಲೇ ಅಸೆಂಬ್ಲಿ ಚುನಾವಣೆ ನಡೆಯಲಿ. ಸಿದ್ದರಾಮಯ್ಯ ಸರ್ಕಾರದ ಜನಪರ ಯೋಜನೆಗಳ ಮಾಹಿತಿಯನ್ನು ಮನೆಮನಗಳಿಗೆ ತಲುಪಿಸುವಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಒಗ್ಗೂಡಿ ಶ್ರಮಿಸಬೇಕು. ಸಾಕಷ್ಟು ಕೆಲಸ ಮಾಡಿದ್ದೇವೆ ಎಂದು ಹೇಳಿಕೊಂಡರೆ ಸಾಲದು, ಅವುಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಬೇಕು ಎಂದರು.

ಚುನಾವಣೆ ವೇಳೆ ಸಿದ್ದರಾಮಯ್ಯ ನೀಡಿರುವ ಆಶ್ವಾಸನೆಗಳಲ್ಲಿ ಶೇ 95 ಜಾರಿಗೊಂಡಿವೆ. ಆದರೂ ಕೇಂದ್ರ ಸರ್ಕಾರ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ನಡೆಸುತ್ತಿದೆ. ಬಿಜೆಪಿ ಮತಪಟ್ಟಿಯಿಂದ ಹೆಸರು ಡಿಲೀಟ್ ಮಾಡುವ ಸಂವಿಧಾನಬಾಹಿರ ಕೆಲಸ ಮಾಡುತ್ತಿದೆ. ಇದನ್ನು ತಡೆಯಬೇಕು. ಹಕ್ಕುಪತ್ರ ಕಾಂಗ್ರೆಸ್ ನೀಡುತ್ತಿದ್ದರೂ, ಇದು ಮೋದಿಯ ಯೋಜನೆ ಎಂದು ಬಿಂಬಿಸಲಾಗುತ್ತಿದೆ. ಪಕ್ಷೀಯರು ಬೂತ್ ಮಟ್ಟದಿಂದ ಕೆಲಸ ಮಾಡಬೇಕು ಎಂದು ಮಂಗಳೂರು ಉತ್ತರ ಶಾಸಕ ಮೊಹಿಯುದ್ದೀನ್ ಬಾವಾ ಮನವಿ ಮಾಡಿಕೊಂಡರು.
ಕಾಂಗ್ರೆಸ್ ಮುಖಂಡ ಗಣೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಬ್ಲಾಕ್, ವಾರ್ಡ್ ಮಟ್ಟದ ಪದಾಧಿಕಾರಿಗಳ ಪಟ್ಟಿ ವಾಚಿಸಲಾಯಿತು. ಕಾಂಗ್ರೆಸ್ ಮುಖಂಡ ರವಿಶಂಕರ್ ಕೊಳಂಬೆ ಸಂದರ್ಭೋಚಿತ ಮಾತನಾಡಿದರು. ವೇದಿಕೆಯಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಕೃಷ್ಣ ಅಮೀನ್, ದಿನೇಶ್, ಜಾಕಿರ್, ಸಚಿನ್ ಅಡಪ, ಪೂರ್ಣಿಮಾ ಗಣೇಶ್ ಶೆಟ್ಟಿ, ವಿಜಯಾ ಸುವರ್ಣ, ಇಸ್ಮತ್, ಸುನಿಲ್, ಕೇಶವ ಸನಿಲ್, ಯು ಪಿ ಇಬ್ರಾಹಿಂ, ಮೊಹಮ್ಮದ್ ಉಂಞ, ಸದಾಶಿವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
