ಬಂಟ್ವಾಳ : ಸಮಾಜವನ್ನು ಕಸಮುಕ್ತಗೊಳಿಸಿ ರಾಷ್ಟ್ರದ ಪ್ರಗತಿಯಲ್ಲಿ ಪಾಲುದಾರರಾಗಲು ವಿದ್ಯಾರ್ಥಿಗಳು ಸನ್ನದ್ಧರಾಗಬೇಕಾಗಿದೆ. ಸ್ವಚ್ಛ ಬದುಕು ಸ್ವಚ್ಛ ಪರಿಸರ ನಮ್ಮ ಮೂಲ ಮಂತ್ರವಾಗಬೇಕು. ದೇಶವನ್ನು ಕಟ್ಟುವ ಕಾಯಕವು ಏಕವ್ಯಕ್ತಿಯಿಂದ ಸಾಧ್ಯವಿಲ್ಲ. ದೇಶದ ಶ್ರೇಯೋಭಿವೃದ್ಧಿಯಲ್ಲಿ ಯುವ ಪಡೆಗಳ ತೊಡಗುವಿಕೆಯೂ ಮಹತ್ವಪೂರ್ಣವಾದುದು ಎಂದು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಪ್ರೊ.ಪ್ರೇಮಲತಾ ಪೈ ಅಭಿಪ್ರಾಯಪಟ್ಟರು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ-2017 ವತಿಯಿಂದ ನಡೆದ ‘ಸ್ವಚ್ಛ ಭಾರತ್ ಪಕ್ವಾಡ ಅಭಿಯಾನ’ ಉದ್ಘಾಟಿಸಿ ಮಾತನಾಡಿದ ಅವರು ಯುವ ಸಮುದಾಯ ದೇಶದ ಹಿತಚಿಂತನೆಯನ್ನು ಮಾಡುವುದಕ್ಕೆ ಪ್ರಾರಂಬಿಸುತ್ತದೋ ಆಗ ದೇಶ ಪ್ರಗತಿಯ ದಿಶೆಯಲ್ಲಿ ಮುನ್ನಡೆಯಲು ಸಾಧ್ಯ ಎಂದರು. ಸ್ವಚ್ಛ ಸುಂದರ ದೇಶವನ್ನು ರೂಪಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸ್ವಚ್ಛತಾ ಅಭಿಯಾನ ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ ಬದುಕಿನ ದಿನಚರಿಯಾದಾಗ ಮಾತ್ರ ಯಶಸ್ವಿಯಾಗಬಲ್ಲುದು. ದಿನ ಬಳಕೆಯ ವಸ್ತುಗಳ ಬಳಕೆ ಉಪಯೋಗದ ಮೇಲೆ ನಿಗಾ ವಹಿಸಿದಾಗ ನಮ್ಮ ಸುತ್ತಲಿನ ಪರಿಸರ ಮಲಿನಗೊಳ್ಳುವುದನ್ನು ತಪ್ಪಿಸಬಹುದು. ನಾವು ವಾಸಮಾಡುವ ಮನೆ, ಪರಿಸರ, ದುಡಿಯುವ ಸ್ಥಳ, ಶಾಲೆ, ಬಸ್ ನಿಲ್ದಾಣ ಮೊದಲಾದ ಕಡೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿದರೆ ಅದೇ ನಾವು ಸಮಾಜಕ್ಕೆ ಮಾಡುವ ದೊಡ್ಡ ಸೇವೆಯಾಗಿದೆ. ಪ್ಲಾಸ್ಟಿಕ್‍ನ ಯಥೇಚ್ಛವಾದ ಬಳಕೆಯು ಪ್ರಾಕೃತಿಕ ಸಂಪತ್ತಿನ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಜೀವ ಸಂಕುಲಗಳ ಉಳಿವಿಗೂ ತೊಂದರೆಯಾದೀತು ಎಂದು ತಿಳಿಸಿದರು.
ದೇಶದ ಭವಿಷ್ಯವು ಬೆಳೆಯುವ ಮಕ್ಕಳ ಕೈಯಲ್ಲಿದೆ. ಸುಂದರ ಭಾರತ ನಿರ್ಮಾಣ ಮಾಡಲು ಮೊದಲು ನಮ್ಮ ಮನಸ್ಥಿತಿ ಬದಲಾಗಬೇಕು. ಪ್ರತಿಯೊಬ್ಬರೂ ಸ್ವಚ್ಛತೆಯ ರಾಯಭಾರಿಗಳಾಗಬೇಕು. ಸಣ್ಣ ಸಣ್ಣ ಕೆಲಸಗಳೂ ಸಹ ದೇಶದ ಉನ್ನತಿಕೆಯಲ್ಲಿ ಮಹತ್ವಪೂರ್ಣವಾಗಿದೆ. ಸ್ವಸ್ಥ ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಾಣಮಾಡಲು ಯುವಕರು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ., ಅಧ್ಯಕ್ಷತೆ ವಹಿಸಿ ಮಾನವನ ಬಾಹ್ಯ ಪ್ರಕೃತಿ ಮತ್ತು ಆಂತರಿಕ ಪ್ರಕೃತಿ ಪರಿಶುದ್ಧವಾಗಬೇಕಾಗಿದೆ. ನಡೆನುಡಿ ಶುದ್ಧತೆಯು ಮಾನವನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.

ಕಾರ್ಯಕ್ರಮ ಸಂಯೋಜಕ ಎನ್ನೆಸ್ಸೆಸ್ ಯೋಜನಾಧಿಕಾರಿ ಚೇತನ್ ಮುಂಡಾಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಚ್ಛ ಭಾರತ್ ಪಕ್ವಾಡ ಅಭಿಯಾನದ ರೂಪುರೇಷೆಯನ್ನು ಮಂಡಿಸಿದರು.ಸಹಯೋಜನಾಧಿಕಾರಿ ಪ್ರದೀಪ್ ಪೂಜಾರಿ ಸ್ವಚ್ಛಭಾರತ್ ಅಭಿಯಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪನ್ಯಾಸಕರಾದ ಶಿವಪ್ರಸಾದ್ ನೀರಚಿಲುಮೆ, ದೀಪಿಕಾಪ್ರಿಯಾ, ವಿಜೇತಾ, ದಿವ್ಯಲಕ್ಷ್ಮಿ, ನಮಿತಾ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಸ್ವಯಂ ಸೇವಕ ಧನುಷ್ ಸ್ವಾಗತಿಸಿ, ದಿತೇಶ್ ವಂದಿಸಿದರು. ವಿದ್ಯಾರ್ಥಿಗಳಾದ ಭರತ್ ಕುಮಾರ್ ಮತ್ತು ವಿಕಾಸ್ ಎನ್ನೆಸ್ಸೆಸ್ ಆಶಯ ಗೀತೆ ಪ್ರಸ್ತುತ ಪಡಿಸಿದರು. ಸ್ವಯಂ ಸೇವಕ ಹರ್ಷಿತ್ ಕಾರ್ಯಕ್ರಮ ನಿರೂಪಿಸಿದರು. ಎನ್ನೆಸ್ಸೆಸ್ ಘಟಕ ನಾಯಕ ಭರತ್ ಹಾಗೂ ಘಟಕ ನಾಯಕಿ ಅನುಜ್ಞಾ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.
