ಗುರುಪುರ: ಉತ್ತಮ ಕೆಲಸ ಮಾಡುತ್ತಿರುವಾಗ ವಿಪಕ್ಷಗಳಿಂದ ಟೀಕೆಗಳು ಬರುವುದು ಸಹಜ. ಟೀಕೆಗಳಿಗೆ ಕಿವಿಗೊಡುತ್ತ ಹೋದರೆ ಅಭಿವೃದ್ಧಿ ಕೆಲಸ ಕುಂಠಿತವಾಗಲಿದೆ. ಕಾಂಗ್ರೆಸ್ ಶಾಸಕನಾಗಿ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕೆಲವು ಕಾಮಗಾರಿ ಪ್ರಗತಿಯಲ್ಲಿವೆ. ಕ್ಷೇತ್ರದ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಜಾತಿ-ಧರ್ಮ ಹೊರತುಪಡಿಸಿ ಸರ್ಕಾರದಿಂದ ಸಾಧ್ಯವಿರುವ ಎಲ್ಲ ರೀತಿಯ ಅನುದಾನ ತರಲು ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ಮೊೈದಿನ್ ಬಾವಾ ಅಭಿಪ್ರಾಯಪಟ್ಟರು.
ಗುರುಪುರ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸರ್ಕಾರದ ವತಿಯಿಂದ ಪೂರೈಕೆಯಾಗಿರುವ ಉಚಿತ ಸೈಕಲ್, ಸಮವಸ್ತ್ರ, ಶೂ ವಿತರಿಸಿ ಮಾತನಾಡುತ್ತಿದ್ದ ಬಾವಾ, ಸರ್ಕಾರದಿಂದ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಮೀಸಲಿರುವ ಕಾರ್ಯಕ್ರಮಗಳ ಮಾಹಿತಿ ನೀಡಿ, ಇವುಗಳ ಪ್ರಯೋಜನ ಪಡೆಯಬೇಕೆಂದರು.
ಅಸೆಂಬ್ಲಿ ಚುನಾವಣೆ ಹತ್ತಿರ ಬರುತ್ತಲೇ ವಿಪಕ್ಷಗಳು ಸರ್ಕಾರದ ವಿರುದ್ಧ ಹೆಚ್ಚೆಚ್ಚು ಆರೋಪ ಹೊರಿಸುವುದರಲ್ಲಿ ನಿರತವಾಗಿದ್ದು, ಎಲ್ಲವನ್ನೂ ತಮ್ಮ ಸಾಧನೆ ಎಂದು ಬಿಂಬಿಸಲು ಪ್ರಯತ್ನಿಸುವೆ. ವಿಪಕ್ಷಗಳಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಜಿ ಪಂ ಸದಸ್ಯ ಯು ಪಿ ಇಬ್ರಾಹಿಂ, ತಾ ಪಂ ಸದಸ್ಯ ಸಚಿನ್ ಅಡಪ, ಗ್ರಾ ಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ಗುರುಪುರ ಕಾಲೇಜು ಪ್ರಾಂಶುಪಾಲ, ಸದಸ್ಯರಾದ ಸದಾಶಿವ ಶೆಟ್ಟಿ, ಯಶವಂತ ಶೆಟ್ಟಿ ಉಪಸ್ಥಿತರಿದ್ದರು. ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ರೂಪಾ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕಿ ರೀಟಾ ವಂದನಾರ್ಪನೆಗೈದರು.
“ನನ್ನ ಕ್ಷೇತ್ರದ ಶಾಲೆಗಳ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ವಿತರಣೆ ದೊಡ್ಡ ವಿವಾದ ಸೃಷ್ಟಿಸಿತ್ತು. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿರಲಿಲ್ಲ. ಬೆರಳೆಣಿಕೆ ಮಂದಿ ಟೀಕಿಸಿದರೆ, ಬಹುತೇಕ ಮಂದಿ ಅಭಿನಂದಿಸಿದ್ದಾರೆ. ಮಕ್ಕಳು ಎಲ್ಲಾದರೂ ಕ್ವಿಝ್ ಅಥವಾ ಟೀವಿ ಶೋಗಳಿಗೆ ಹೋದಾಗ ಅಲ್ಲಿ ನಿಮ್ಮ ಕ್ಷೇತ್ರದ ಶಾಸಕ ಯಾರೆಂದು ಪ್ರಶ್ನಿಸಿದರೆ ಉತ್ತರಿಸಲು ಸುಲಭವಾಗಲೆಂಬ ಉದ್ದೇಶದಿಂದ ನನ್ನ ಭಾವಚಿತ್ರ ಮುದ್ರಿಸಲಾಗಿದೆ. ಪುಸ್ತಕದಲ್ಲಿ ಪಕ್ಷದ ಚಿಹ್ನೆ ಅಥವಾ ನಾಯಕರ ಚಿತ್ರ ಮುದ್ರಿಸಿಲ್ಲ” ಎಂದು ಬಾವಾ ಸ್ಪಷ್ಟಪಡಿಸಿದರು.
