ಗುರುಪುರ : ರಾಜ್ಯ ಅಸೆಂಬ್ಲಿ ಚುನಾವಣಾ ಪೂರ್ವ ಕಾಂಗ್ರೆಸ್ `ಸಮಾಲೋಚನಾ ಸಭೆ’ ಜುಲೈ 16ರಂದು ಗುರುಪುರ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಆರ್ ಕೆ ಪೃಥ್ವಿರಾಜ್ ನೇತೃತ್ವದಲ್ಲಿ ಗುರುಪುರ ಜಂಗಮ ಮಠದ ಆವರಣದಲ್ಲಿ ನಡೆಯಿತು.ಕಳೆದ ನಾಲ್ಕೂವರೆ ವರ್ಷಗಳ ಆಡಳಿತಾವಧಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆಗಳ ಸವಿವರ ಮುಂದಿಟ್ಟ ಪೃಥ್ವಿರಾಜ್, ಪ್ರತಿ ಚುನಾವಣೆಯ ಸಂದರ್ಭದಲ್ಲಿ ವಿಪಕ್ಷಗಳು ಕೋಮು ವಿವಾದ ಹುಟ್ಟು ಹಾಕುತ್ತವೆ. ಈ ಬಾರಿಯೂ ಅಂತಹ ಚಟುವಟಿಕೆಗಳು ನಡೆಯುತ್ತಿವೆ. ಕೋಮುಶಕ್ತಿಗಳ ಮಟ್ಟಹಾಕುವ ನಿಟ್ಟಿನಲ್ಲಿ ಪಕ್ಷ ಕಾರ್ಯಕರ್ತರು ಜನತೆಗೆ ವಾಸ್ತವದ ಮನವರಿಕೆ ಮಾಡಬೇಕು ಎಂದರು.
ಕಾರ್ಯಕರ್ತರು ಗ್ರಾಮೀಣ ಹಾಗೂ ಇತರ ಪ್ರದೇಶಗಳ ಮನೆ-ಮನಗಳಿಗೆ ಸರ್ಕಾರದ ಕಾರ್ಯಕ್ರಮ ತಲುಪಿಸುವ ಕೆಲಸ ಮಾಡಬೇಕು. ಜೊತೆಗೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಂದು ಬಾರಿ ಜಯಭೇರಿ ಹೊಡೆಯುವಲ್ಲಿ ಕಾರ್ಯಕರ್ತರೆಲ್ಲರೂ ಒಮ್ಮನಸ್ಸಿನಿಂದ ಕೆಲಸ ಮಾಡಬೇಕೆಂದು ಜಿ ಪಂ ಸದಸ್ಯ ಯು ಪಿ ಇಬ್ರಾಹಿಂ ತಿಳಿಸಿದರು.
ಕಾಂಗ್ರೆಸ್ಸಿನ ಹಿರಿಯ ಕಾರ್ಯಕರ್ತ ಕೆ ಸದಾಶಿವ ಶೆಟ್ಟಿ ನೇತೃತ್ವದಲ್ಲಿ ಈ ಸಭೆ ಯಶಸ್ವಿಯಾಗಿ ಜರುಗಿತು.ತಾ ಪಂ ಸದಸ್ಯ ಸಚಿನ್ ಅಡಪ, ಗ್ರಾ ಪಂ ಮಾಜಿ ಸದಸ್ಯ ಪ್ರಶಾಂತ್ ಭಟ್, ಗ್ರಾ ಪಂ ಕಾಂಗ್ರೆಸ್ ಸದಸ್ಯರು, ಹಿರಿಯ ನಾಯಕರು ಮತ್ತು ನೂರಾರು ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದರು.

