ಬಂಟ್ವಾಳ: ಆರೆಸ್ಸೆಸ್ ಕಾರ್ಯಕರ್ತ ಶರತ್ ಶವಯಾತ್ರೆಯ ಸಂದರ್ಭ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದು ಬಿ.ಸಿ.ರೋಡಿನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದೆ. ಕಳೆದ ಜು.4 ರಂದು ಅಂಗಡಿಗೆ ನುಗ್ಗಿ ತಲವಾರು ದಾಳಿಗೊಳಗಾಗಿದ್ದ ಶರತ್ ಶುಕ್ರವಾರ ಸಂಜೆ ಕೊನೆಯ ಉಸಿರೆಳೆದಿದ್ದು, ಶನಿವಾರ ಅವರ ಪಾರ್ಥಿವ ಶರೀರವನ್ನು ಮಂಗಳೂರಿನ ಎಜೆ ಆಸ್ಪತ್ರೆಯಿಂದ ಸಜಿಪದ ಕಂದೂರಿನಲ್ಲಿರುವ ಮನೆಗೆ ಮೆರವಣಿಗೆ ಮೂಲಕ ತರಲಾಗುತ್ತಿತ್ತು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು ಅಲ್ಲದೆ ನೂರಾರು ಯುವಕರು ಬೈಕು, ಕಾರು ಸಹಿತ ಮತ್ತಿತರ ವಾಹನಗಳಲ್ಲಿ ಕರಿಪತಾಕೆಯನ್ನು ಹಾಕಿ ಸಾಗಿ ಬಂದಿದ್ದರು.10

ಮಂಗಳೂರಿನ ಎಜೆ ಆಸ್ಪತ್ರೆಯಿಂದ ಹೊರಟ ಶವಯಾತ್ರೆ ಬಿ.ಸಿ.ರೋಡಿನ ಕೈಕಂಬದವರೆಗೆ ಶಾಂತಿಯುತವಾಗಿಯೇ ಆಗಮಿಸಿತ್ತು. ಬಿ.ಸಿ.ರೋಡಿನ ಕೈಕಂಬ ತಲುಪುತ್ತಿದ್ದಂತೆಯೇ ಶವಯಾತ್ರೆಯ ಹಿಂಬದಿಯಿಂದ ಬೈಕಿನಲ್ಲಿ ಬರುತ್ತಿದ್ದ ಸವಾರನೊಬ್ಬನಿಗೆ ದುಷ್ಕರ್ಮಿಗಳು ಬಾಟಲಿ ಎಸೆದಿದ್ದರು. ಪರಿಣಾಮ ಆತ ತಲೆಯಭಾಗಕ್ಕೆ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು ಕಲ್ಲು ತೂರಾಟ ನಡೆಸಿದ ಮೂವರನ್ನು ಸ್ಥಳದಲ್ಲೇ ವಶಕ್ಕೆ ಪಡೆದುಕೊಂಡಿದ್ದರು.

14
ಇದಾದ ಬೆನ್ನಲ್ಲೇ ಶವಯಾತ್ರೆಯು ಶರತ್ ನ ಅಂಗಡಿ ಮುಂಭಾಗ ಸಾರ್ವಜನಿಕ ಅಂತಿಮದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಬಳಿಕ ಅಲ್ಲಿಂದ ಸಜಿಪದತ್ತ ತೆರಳುತ್ತಿದ್ದಂತೆಯೇ ಸೋಮಯಾಜಿ ಕಾಂಪ್ಲೆಕ್ಸ್‍ನಿಂದ ಮೆರವಣಿಗೆಯಲ್ಲಿದ್ದ ಯುವಕರ ಮೇಲೆ ಕಲ್ಲುತೂರಲಾಗಿತ್ತು. ತಕ್ಷಣ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿದ್ದು. ಸ್ಥಳೀಯ ಯುವಕರು ಕಲ್ಲು ತೂರಾಟ ನಡೆಸಿದರೆನ್ನಲಾದ ಶಂಕಿತ ಮೂವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.ಇದಾಗುತ್ತಿದ್ದಂತೆಯೇ ಪರಿಸ್ಥಿತಿ ಬಿಗಡಾಯಿಸಿತು. ಉದ್ರಿಕ್ತಗೊಂಡ ಗುಂಪೊಂದು ಕೈಕಂಬದಲ್ಲಿ ನಿಲ್ಲಿಸಲಾಗಿದ್ದ ಕಾರು, ರಿಕ್ಷಾ, ಜೀಪು, ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಲಾಠಿಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.

11
ಇದೇ ವೇಳೆ ತೆರೆದುಕೊಂಡಿದ್ದ ಎಲ್ಲಾ ಅಂಗಡಿಮುಗ್ಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದರಿಂದ ಬಿ.ಸಿ.ರೋಡು ಹಾಗೂ ಕೈಕಂಬ ಪರಿಸರ ಅಘೋಷಿತ ಬಂದ್ ಆಯಿತು.ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತು. ಸಾವಿರಾರು ಪೊಲೀಸರು ಬಂದೋಬಸ್ತ್ ನಲ್ಲಿದ್ದರೂ ಎರಡು ಕಟ್ಟಡಗಳ ಮೇಲಿನಿಂದ ದುಷ್ಕರ್ಮಿಗಳು ಕಲ್ಲೆಸೆದು ಅಶಾಂತಿಯನ್ನು ಕದಡಿದ್ದಾರೆ.ಇದೇ ವೇಳೆ ಹಿಂದೂಜಾಗರಣಾ ವೇದಿಕೆಯ ಮುಖಂಡ ಸತ್ಯಜಿತ್ ಸುರತ್ಕಲ್ ಅವರು ಸ್ಥಳದಲ್ಲಿದ್ದ ಎಲ್ಲಾ ಜನರನ್ನು ಮನೆಗೆ ತೆರಳುವಂತೆ ಮನವಿ ಮಾಡಿಕೊಡುವ ಮೂಲಕ ಕಳುಹಿಸಿಕೊಟ್ಟರು.ಪಾರ್ಥಿವ ಶರೀರವನ್ನು ನೋಡಲು ಹೆದ್ದಾರಿ ಪಕ್ಕದಲ್ಲಿ ಜಮಾಯಿಸಿದ್ದ ಸಾವಿರಾರು ಸಾರ್ವಜನಿಕರು ದಿಕ್ಕುಪಾಲಾಗಿ ಓಡಿದರು.ಒಟ್ಟಾರೆಯಾಗಿ ಬಿ.ಸಿ.ರೋಡು ಪರಿಸರದಲ್ಲಿ ಗೊಂದಲದ ಗೂಟಾಗಿ ಪರಿಣಮಿಸಿತು.
*ಕಿಡಿಗೇಡಿಗಳಿಂದ ದಾಂಧಲೆ;
ಇತ್ತ ಶವಯಾತೆ ಮೆಲ್ಕಾರ್ ನತ್ತ ತೆರಳುತ್ತಿದ್ದಂತೆಯೇ ಬಿ.ಸಿ.ರೋಡ್ ನಲ್ಲಿ ಉದ್ರಿಕ್ತಗುಂಪೊಂದು ದಾಂಧಲೆ ನಡೆಸಿದ್ದು, ಮೇಲ್ಸೇತುವೆ ಅಡಿಭಾಗದಲ್ಲಿರಿಸಿದ್ದ ಬೈಕ್ ಗಳನ್ನು ಜಖಂಗೊಳಿಸಿದರು. ಇದೇ ವೇಳೆ ಖಾಸಗಿ ಚಾನೆಲ್ ವೊಂದರ ಕ್ಯಾಮೆರಾಮೆನ್ ಗೂ ಹಲ್ಲೆ ನಡೆಸಿ ಕ್ಯಾಮೆರಾ ಕಿತ್ತು ಹಾನಿಗೊಳಿಸಿದ್ದಾರೆ. ಅಲ್ಲದೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾ, ಕಾರು , ಬೈಕ್ ಗಳನ್ನು ಕೂಡ ಉದ್ರಿಕ್ತರು ಜಖಂಗೊಳಿಸಿದ್ದಾರೆ. ಈ ಹಂತದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಣಗಾಡಬೇಕಾಯಿತು. ಸಿಕ್ಕಸಿಕ್ಕವರೆನ್ನಲಾ ಲಾಠಿ ತೋರಿಸಿ ಸ್ಥಳದಿಂದ ತೆರಳುವಂತೆ ಸೂಚಿಸಿದರು. ಈ ಹಂತದಲ್ಲಿ ಬಸ್ಸಿಗೆ ಕಾಯುತ್ತಿದ್ದ, ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಪ್ರಯಾಣಿಕರು ಭಯಭೀತರಾಗಿದ್ದರು.ಸುಮಾರು ಒಂದು ತಾಸುಗಳ ಕಾಲ ಬಿ.ಸಿ.ರೋಡು ಪರಿಸರ ಉದ್ವಿಗ್ನತೆಯನ್ನು ಸೃಷ್ಟಿಸಿತ್ತು.ಹೆಚ್ಚುವರಿ ಪೊಲೀಸರು ಹಾಗೂ ಅರೆ ಸೇನಾಪಡೆ ಸ್ಥಳಕ್ಕಾಗಮಿಸಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

12
*ಹದಿನಾಲ್ಕು ಮಂದಿ ವಶಕ್ಕೆ..!
ಕಲ್ಲು ತೂರಾಟ ಹಾಗೂ ದಾಂಧಲೆ ಘಟನೆಗೆ ಸಂಬಂಧಿಸಿ ಪೊಲೀಸರು 14 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಮೂವರು ಅಮಾಯಕ ಹಿಂದೂ ಯುವಕರನ್ನು ಬಂಧಿಸಿ ಅರೆನಗ್ನಸ್ಥಿತಿಯಲ್ಲಿರಿಸಿದ್ದಾರೆಂಬ ಮಾಹಿತಿಯನ್ವಯ ಹಿಂದೂ ಸಂಘಟನೆಗಳ ಕಾರ್ಯಕರ್ತರು ಠಾಣೆಗೆ ದೌಡಾಯಿಸಿದ ಘಟನೆಯೂ ನಡೆಯಿತು. ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ , ಭಜರಂಗದಳದ ಪ್ರಮುಖರಾದ ಶರಣ್ ಪಂಪ್ ವೆಲ್, ಪ್ರಮುಖರಾದ ಜಗದೀಶ ಶೇಣವ, ಸತ್ಯಜಿತ್ ಸುರತ್ಕಲ್, ಜಿತೇಂದ್ರ ಕೊಟ್ಟಾರಿ, ಪದ್ಮನಾಭ ಕೊಟ್ಟಾರಿ, ರುಕ್ಮಯಪೂಜಾರಿ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಜಿ.ಆನಂದ, ಸುಲೋಚನಾ ಜಿ ಕೆ ಭಟ್ ಮೊದಲಾದವರು ಠಾಣೆಗೆ ಬೇಟಿ ನೀಡಿ ಮೊಕ್ಕಾಂ ಹೂಡಿದ್ದ ಎಸ್ಪಿಯವರೊಂದಿಗೆ ಮಾತುಕತೆ ನಡೆಸಿದರು. ಹಾಗೆಯೇ ಪೊಲೀಸರ ವಶದಲ್ಲಿದ್ದ ಇನ್ನೊಂದು ಕೋಮಿನ ಅಮಾಯಕ ಯುವಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಎಂದು ಕೆಲ ಪೋಷಕರು ಠಾಣೆಯಲ್ಲಿ ಅವಲತ್ತು ತೋಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.ಅಪರಾಹ್ನದ ಬಳಿಕ ಬಿ.ಸಿ.ರೋಡು ಪರಿಸರ ಸಂಪೂರ್ಣ ಸಹಜಸ್ಥಿತಿಗೆ ಮರುಕಳಿಸಿತು. ಆದರೆ ಸಂಜೆವರೆಗೂ ಯಾವುದೇ ಅಂಗಡಿಮುಂಗಟ್ಟುಗಳು ತೆರೆಯಲಿಲ್ಲ. ಕೆಲವು ಖಾಸಗಿ ವಾಹನಗಳು ಮಾತ್ರ ಸಂಚಾರ ನಡೆಸಿದವು. ಸರ್ಕಾರಿ ಕಛೇರಿಗಳಿಗೂ ರಜೆ ಇದ್ದ ಹಿನ್ನೆಲೆಯಲ್ಲಿ ಬಿ.ಸಿ.ರೋಡು ಸಂಪೂರ್ಣ ಸ್ತಬ್ಧವಾಗಿತ್ತು.

By Suddi9

Leave a Reply

Your email address will not be published. Required fields are marked *