ಮಂಗಳೂರು: ಬಿ.ಸಿ.ರೋಡ್ನಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಶುಕ್ರವಾರ ರಾತ್ರಿಕೊನೆಯುಸಿರೆಳೆದ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ (28) ಅವರ ಪಾರ್ಥೀವ ಶರೀರವನ್ನು ಮೆರವಣಿಗೆಯ ಮೂಲಕ ಸಜಿಪ ಮುನ್ನೂರು ನಿವಾಸಕ್ಕೆ ಕೊಂಡೊಯ್ಯಲಾಗಿದೆ.
ಆಸ್ಪತ್ರೆಯ ಸಿಬಂದಿಗಳು ಸಂಬಂಧಿಕರ ವಶಕ್ಕೆ ನೀಡಿದ ಮೃತದೇಹಕ್ಕೆ ಮೈಸೂರು ಪೇಟ ತೊಡಿಸಿ , ಕೇಸರಿ ಶಾಲು ಹೊದಿಸಿ ಹೂವಿನಿಂದ ಅಲಂಕೃತ ಅಂಬುಲೆನ್ಸ್ನಲ್ಲಿ ಇರಿಸಿ ಮನೆಗೆ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು.
ನೂರಾರು ಸಂಘಪರಿವಾರದ ಕಾರ್ಯಕರ್ತರು, ಮುಖಂಡರು ಆಸ್ಪತ್ರೆಯ ಬಳಿ ಜಮಾಯಿಸಿದ್ದರು.
ಬಂಟ್ವಾಳ ತಾಲೂಕಿನಾಧ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದು ಪರಿಸ್ಥಿತಿ ನಿಭಾಯಿಸಲು ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.
ಮೆರವಣಿಗೆ ಸಾಗಿದ ಬಳಿಕ ಕಿಡಿಗೇಡಿಗಳು ಕೈಕಂಬ ಬಳಿ ಕಲ್ಲುತೂರಾಟ ನಡೆಸಿದ ಘಟನೆ ನಡೆದಿದ್ದು, ಈ ವೇಳೆ ಪೊಲೀಸರು ಲಾಟಿ ಪ್ರಹಾರ ನಡೆಸಿ ಉದ್ರಿಕ್ತರನ್ನು ಚದುರಿಸಿದ್ದಾರೆ. ಕಲ್ಲು ತಗುಲಿ ಓರ್ವ ಯುವಕನಿಗೆ ಗಂಭೀರ ಗಾಯವಾಗಿದ್ದು, ಕೆಲ ವಾಹನಗಳ ಗಾಜುಗಳು ಪುಡಿಯಾಗಿರುವ ಬಗ್ಗೆ ವರದಿಯಾಗಿದೆ.
ಸಜೀಪ ನಿವಾಸದಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದ್ದು ಭಾರೀ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಈಗಾಗಲೇ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.




