ಮೂಡುಬಿದಿರೆ: ಏಳರ ಹರೆಯದಶಾಲಾ  ಬಾಲಕಿಗೆ 16ರ ಹರೆಯದ ಅಪ್ರಾಪ್ತ ಹುಡುಗನೊಬ್ಬ ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಒಡ್ಡಿದ ಘಟನೆ ಪುತ್ತಿಗೆ ಗ್ರಾಮದ ನಡಿಗುತ್ತು ಎಂಬಲ್ಲಿ ಶನಿವಾರ ಸಂಜೆ ನಡೆದಿದೆ. 
ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿರುವ ಮೂಡುಬಿದಿರೆ ಪೊಲೀಸರು ಆತನ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಪರಿಶಿಷ್ಟ ಜಾತಿ ದೌರ್ಜನ್ಯ ನಿಯಂತ್ರಣ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಪುತ್ತಿಗೆ ಗ್ರಾಮದ ದೇವಸ್ಥಾನವೊಂದರ ಬಳಿಯ ನಿವಾಸಿ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಶನಿವಾರ ಮಧ್ಯಾಹ್ನ ಶಾಲೆ ಬಿಟ್ಟು ಮನೆಗೆ ಬಂದ ಬಾಲಕಿ ತಾಯಿ ಬಳಿ ವಿಷಯ ತಿಳಿಸಿದ್ದು, ಬಳಿಕ ಊರವರ ಸಹಾಯದಿಂದ ತಾಯಿ ದೂರು ಸಲ್ಲಿಸಿದ್ದಾರೆ.

ಘಟನೆ ವಿವರ: ಮಧ್ಯಾಹ್ನ ಶಾಲೆ ಬಿಟ್ಟ ಬಳಿಕ ಸ್ವಲ್ಪ ದೂರದಲ್ಲಿರುವ ತನ್ನ ಮಾವನ ಅಂಗಡಿಗೆ ಬಾಲಕಿ ತೆರಳಿದ್ದಳು. ಅದೇ ಸಮಯದಲ್ಲಿ ಸ್ಥಳೀಯರಾದ ಪ್ರಕಾಶ್ ಭಂಡಾರಿ ಎಂಬವರ ಪುತ್ರ, ಆರೋಪಿ ಅದೇ ಅಂಗಡಿಗೆ ಬಂದಿದ್ದ. ಸ್ವಲ್ಪ ಹೊತ್ತಿನ ಬಳಿಕ ಬಾಲಕಿ ಅರ್ಧ ಕಿ.ಮೀ.ದೂರದಲ್ಲಿರುವ ತನ್ನ ಅಜ್ಜಿ ಮನೆಗೆ ಏಕಾಂಗಿಯಾಗಿ ಹೊರಟಾಗ ಆರೋಪಿ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನೆಲ್ಲಿಗುಡ್ಡೆ ಕೊಲಕಾಡಿ ನಡಿಗುತ್ತು ಎಂಬ ನಿರ್ಜನ ಪ್ರದೇಶ ಸಮೀಪಿಸುತ್ತಿದ್ದಂತೆ ಹಿಂಬದಿಯಿಂದ ಬಾಲಕಿಯ ಬ್ಯಾಗನ್ನು ಎಳೆದ ಆರೋಪಿ ಆಕೆಯನ್ನು ತನ್ನ ಹತ್ತಿರ ಬರುವಂತೆ ಆತ ಕರೆದಿದ್ದ. ಆಕೆ ನಿರಾಕರಿಸಿದಾಗ ಆಕೆಯನ್ನು ಹಿಡಿದೆಳೆದು ಹಲ್ಲೆ ನಡೆಸಿ ತನ್ನ ತೊಡೆಯ ಮೇಲೆ ಕುಳ್ಳಿರಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ತಾಯಿ ನೀಡಿದ ದೂರನ್ನು ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಭಾನುವಾರ ಮಂಗಳೂರಿನ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಶಾಲೆ ಬಿಟ್ಟಿದ್ದ ಆರೋಪಿ: ಆರೋಪಿಯು ಎಂಟನೇ ತರಗತಿಯಲ್ಲಿ ಅನುತ್ತೀರ್ಣನಾದ ಬಳಿಕ ಶಾಲೆ ಬಿಟ್ಟಿದ್ದು ಈಗ ಖಾಸಗಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದನೆನ್ನಲಾಗಿದೆ. ಎಸಿಪಿ ರವಿಕುಮಾರ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *