ಸುದ್ಡಿ9ಮೂಡಬಿದರೆ: ದೇವಾಡಿಗರ ಸಂಘ, ಮಹಿಳಾ ವೇದಿಕೆ ಹಾಗೂ ಯುವವೇದಿಕೆ ಆಶ್ರಯದಲ್ಲಿ ಗೌರಿಕೆರೆ ಶ್ರೀರಾಮಪುರದಲ್ಲಿರುವ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ 4ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮಹಿಳೆಯರನ್ನು ಸನ್ಮಾನಿಸಲಾಯಿತು.
ಕಮಲಾ, ಅಪ್ಪಿ ದೇವಾಡಿಗ, ರೇವತಿ ದೇವಾಡಿಗ, ಅಪ್ಪಿ.ಟಿ.ಮೊಲಿ,ಗುಲಾಬಿ ಅಣ್ಣಿ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಸಚಿವ ಅಭಯಚಂದ್ರ ಜೈನ್ ಸನ್ಮಾನ ನೆರವೇರಿಸಿ ಮಾತನಾಡುತ್ತಾ, ದೇವಾಡಿಗ ಸಮಾಜದ ಹಿರಿಯರ ತ್ಯಾಗ, ಸಂಕಲ್ಪದ ಫಲವಾಗಿ ದೇವಾಡಿಗರ ಸಂಘ ಬಲಿಷ್ಠಗೊಳ್ಳುತ್ತಿದೆ. ವಿದ್ಯೆಯ ಮುಖಾಂತರ ಸಮಾಜವನ್ನು ಬಲಿಷ್ಠಗೊಳಿಸಬಹುದು. ತುಳುನಾಡಿನ ವಿಶೇಷತೆಗಳನ್ನು ಸಾರುವ ಆಟಿಡೊಂಜಿ ದಿನ ಮಹಿಳೆಯರಲ್ಲಿ ನಮ್ಮ ಸಂಪ್ರದಾಯ ಬಗ್ಗೆ ಅರಿವು ಮೂಡುಸುತ್ತದೆ ಎಂದರು.
ಸಂಘದ ಅಧ್ಯಕ್ಷ ರತ್ನಾಕರ ಸಿ.ಮೊಲಿ ಅಧ್ಯಕ್ಷತೆ ವಹಿಸಿದರು., ಸಂಘದ ಉಪಾಧ್ಯಕ್ಷ ಶ್ರೀನಿವಾಸ ದೇವಾಡಿಗ, ಪುರಸಭಾ ಸದಸ್ಯ ರತ್ನಾಕರ ದೇವಾಡಿಗ , ಯುವ ವೇದಿಕೆಯ ಅಧ್ಯಕ್ಷ ಧರ್ಮವೀರ್ ಮೊಲಿ ಉಪಸ್ಥಿತರಿದ್ದರು. ಸತೀಶ್ ಬೆಟ್ಕೇರಿ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವೇದಿಕೆಯ ಅಧ್ಯಕ್ಷೆ ತೇಜಸ್ವಿ ಸಂಪತ್ ವಂದಿಸಿದರು.
ಆಟಿಯ ಕೂಟದಲ್ಲಿ ವಿಶೇಷವಾಗಿ ಹಲಸಿನ ಕಾಯಿಯ ಬಿರಿಯಾನಿ, ಹಲಸಿನ ಕಾಯಿ ಲಡ್ಡು, ಮಾವಿನಕಾಯಿಯ ಇಡ್ಲಿ ಸಹಿತ ಒಟ್ಟು 88 ಬಗೆಯ ವಿಶೇಷ ತಿನಿಸುಗಳನ್ನು ಪ್ರದರ್ಶನದಲ್ಲಿಟ್ಟು ನಂತರ ಎಲ್ಲರಿಗೂ ಸವಿಯಲು ಅವಕಾಶವನ್ನು ನೀಡಲಾಯಿತು.

