Published On: Fri, May 19th, 2023

ಕಂಬಳಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಜಿಲ್ಲಾ ಕಂಬಳ ಸಮಿತಿ ಹರ್ಷ

ಮೂಡುಬಿದಿರೆ: ರಾಜ್ಯದಲ್ಲಿ ಪ್ರಾಣಿ ಹಿಂಸಾ ತಡೆ ಕಾಯ್ದೆಗೆ ತಿದ್ದುಪಡಿ ತಂದು ಕರಾವಳಿ ಕರ್ನಾಟಕದಲ್ಲಿ ನಡೆಯುವ ಕಂಬಳಕ್ಕೆ ಮಾನ್ಯತೆ ನೀಡಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಪ್ರಾಣಿ ದಯಾ ಸಂಘಗಳು ಸಲ್ಲಿಸಿದ ರಿಟ್ ಅರ್ಜಿಯನ್ನು ವಜಾಗೊಳಿಸಿರುವುದಕ್ಕೆ ಕಂಬಳ ಸಮಿತಿ ಸಂತಸ ವ್ಯಕ್ತಪಡಿಸಿದೆ.ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಜೈನ್, ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್, ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ, ಸಂಚಾಲಕ ಸುರೇಶ್ ಕೆ ಪೂಜಾರಿ, ಮಾಜಿ ಸಂಚಾಲಕ ಸೀತಾರಾಮ ಶೆಟ್ಟಿಯವರು ನ್ಯಾ. ಮೂ. ಕೆ. ಎಂ. ಜೋಸೆಫ್ ನೇತೃತ್ವದ ಪಂಚಪೀಠದ ತೀರ್ಪನ್ನು ಅಭಿನಂದಿಸುವುದಾಗಿ ಹೇಳಿದರು.


ಕರ್ನಾಟಕ ಸರ್ಕಾರ 2018ರಲ್ಲಿ ಕಂಬಳ ಕೋಣಗಳ ಮಾಲಕರ ಹೋರಾಟದ ಫಲವಾಗಿ ಪ್ರಾಣಿ ಹಿಂಸಾ ತಡೆ ಕಾಯ್ದೆಗೆ ತಂದ ತಿದ್ದುಪಡಿಗೆ ಅಂದಿನ ರಾಷ್ಟ್ರಪತಿ ಅನುಮೋದಿಸಿದ್ದರು. ನಂತರ ಈ ತಿದ್ದುಪಡಿ ಸಂವಿಧಾನದ ಆಶಯಕ್ಕೆ ವಿರುದ್ದ ಎಂದು ಪ್ರಾಣಿ ದಯಾ ಸಂಘಗಳು ಸುಪ್ರೀಂ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಪಂಚಪೀಠ ಸಮಿತಿಯು ಸೂಕ್ತವಾದ ಪ್ರತಿವಾದ ಆಲಿಸಿ ರಿಟ್ ಅರ್ಜಿಯನ್ನು ವಜಾಗೊಳಿಸಿದೆ. ಈ ದಿನ ಕಂಬಳ ಕ್ಷೇತ್ರದಲ್ಲಿ ಐತಿಹಾಸಿಕ ದಿನ ಎಂದು ಕಂಬಳ ಸಮಿತಿ ಬಣ್ಣಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎರ್ಮಾಳ್ ರೋಹಿತ್ ಹೆಗ್ಡೆ, ಕಳೆದ 20 ವರ್ಷಗಳಿಂದ ಕಂಬಳ ಅಡಚಣೆಗೆ ಇದ್ದ ಅಡ್ಡಿ ಆತಂಕಕ್ಕೆ ಕೊನೆಗೂ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದಿಂದ ಶಾಶ್ವತ ಪರಿಹಾರ ಲಭಿಸಿದೆ. 2014ರಿಂದ ಕರಾವಳಿ ಕರ್ನಾಟಕದ ಸಾಂಪ್ರದಾಯಿತಿ, ಧಾರ್ಮಿಕ ಹಾಗೂ ಜಾನಪದ ಆಚರಣೆಯಾದ ಕಂಬಳವನ್ನು ಆಯೋಜಿಸಲು ಪ್ರಾಣಿದಯಾ ಸಂಘಗಳು ವಿವಿಧ ರೀತಿಯ ಯೊಂದರೆಗಳನ್ನು ನೀಡುತ್ತಿದ್ದು, ಈ ಬಗ್ಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಅನೇಕ ಬಾರಿ ಹೋರಾಟ ನಡೆದಿದೆ. ಪ್ರಾಣಿದಯಾ ಸಂಘದವರು ರಿಟ್ ಅರ್ಜಿಯಂತೆ 2016ರಲ್ಲಿ ಕಂಬಳವೇ ನಿಂತುಹೋಗಿತ್ತು. ಈ ಸಂದರ್ಭದಲ್ಲಿ ಮತ್ತೆ ಕಂಬಳ ಸಂಘಟಿಸಲು ಈ ಕ್ಷೇತ್ರದ ಹಿರಿಯರಾದ ಭಾಸ್ಕರ್ ಕೋಟ್ಯಾನ್ ನೇತೃತ್ವದಲ್ಲಿ ನ್ಯಾಯಾಲಯದಲ್ಲಿ ಮತ್ತು ಹೊರಗಡೆಯೂ ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದೆ.2018ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪ್ರಾಣಿ ಹಿಂಸಾ ತಡೆ ಕಾಯ್ದೆಗೆ ತಿದ್ದುಪಡಿ ತಂದು, ಸದ್ರಿ ತಿದ್ದುಪಡೆ ಕಾಯ್ದೆಗೆ ರಾಷ್ಟçಪತಿಗಳು ಅಂಕಿತ ಹಾಕಿದರು. ಕಂಬಳ ಸಮಿತಿ ಹೋರಾಟಕ್ಕೆ ಶ್ರಮಿಸಿದ ಜಿಲ್ಲಾ ಕಂಬಳ ಸಮಿತಿ ಸಹಿತ ವಿವಿಧ ಕಂಬಳ ಸಮಿತಿಯ ಪದಾಧಿಕಾರಿಗಳು, ಕೋಣಗಳ ಯಜಮಾನರು, ಓಟಗಾರರು ಹಾಗೂ ಕ್ಷೇತ್ರದ ವಿವಿಧ ವರ್ಗಗಳ ಜನರನ್ನು, ಅಭಿಮಾನಿಗಳಿಗೆ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದು ರೋಹಿತ್ ಹೆಗ್ಡೆ ತಿಳಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter