ಬಂಟ್ವಾಳ: ಇಲ್ಲಿನ ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರು ಯೋಜನೆಯು ರೂ 36ಕೋಟಿ ವೆಚ್ಚದಲ್ಲಿ ಶೇ 90ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಇದೇ ಫಲ್ಗುಣಿ ಹೊಳೆಗೆ ಮುಲ್ಲಾರಪಟ್ನ ಸಮೀಪದಲ್ಲಿ ರೂ 40ಲಕ್ಷ ವೆಚ್ಚದಲ್ಲಿ ಮತ್ತೆ ಹೊಸ ಅಣೆಕಟ್ಟೆ ನಿರ್ಮಿಸಲು ಸರ್ಕಾರದಿಂದ ಅನುಮತಿ ದೊರೆತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ತಾಲ್ಲೂಕಿನ ಸಿದ್ಧಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಮಂಗಳೂರು ವಿಶೇಷ ಆರ್ಥಿಕ ವಲಯ ವತಿಯಿಂದ ರೂ 6 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಬಾಲಕಿಯರ ಶೌಚಾಲಯ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಾಜಶೇಖರ್ ಪುರಾಣಿಕ್ ಮಾತನಾಡಿ, ಜಿಲ್ಲೆಯಲ್ಲಿ ಗರಿಷ್ಟ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದ್ದು ಗ್ರಾಮೀಣ ಭಾಗದಲ್ಲಿ ಶೌಚಾಲಯ ಮತ್ತು ಕುಡಿಯುವ ನೀರು ಮತ್ತಿತರ ಮೂಲಸೌಕರ್ಯಕ್ಕೆ ಮಂಡಳಿ ಆದ್ಯತೆ ನೀಡುತ್ತಿದೆ ಎಂದರು. ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು, ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಸುಂದರ ಶಾಂತಿ, ಮಂಗಳೂರು ವಿಶೇಷ ಆರ್ಥಿಕ ವಲಯ ಮಹಾಪ್ರಬಂಧಕ ಇಟಾ ಶ್ರೀನಿವಾಸಲು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಸತ್ಯನಾರಾಯಣ ಭಟ್, ಪದವಿಪೂರ್ವ ಕಾಲೇಜು ಉಪಪ್ರಾಂಶುಪಾಲ ರಮಾನಂದ, ನಿವೃತ್ತ ಪಾಂಶುಪಾಲ ಪದ್ಮನಾಭ ಎನ್., ಸೀತಾರಾಮ ಶಾಂತಿ ಮತ್ತಿತರರು ಇದ್ದರು. ಪ್ರಾಂಶುಪಾಲ ಶ್ರೀನಿವಾಸ ನಾಯಕ್ ಸ್ವಾಗತಿಸಿ, ಉಪನ್ಯಾಸಕಿ ಶಾರದಾ ವಂದಿಸಿದರು. ಉಪನ್ಯಾಸಕ ಸಂಜಯ್ ಕಾರ್ಯಕ್ರಮ ನಿರೂಪಿಸಿದರು.
