ಭೂಮಿಯಲ್ಲಿ ಬದುಕುವ ಸಕಲ ಜೀವ ರಾಶಿಗಳಿಗೂ ನೀರೇ ಜೀವ ಜಲ. ನೀರೇ ಇಂದಿನ ದಿನದಲ್ಲಿ ಭೂ ಲೋಕದ ಅಮೃತ ಎಂದು ಕರೆಯಲ್ಪಡುತ್ತದೆ. ನೀರಿಲ್ಲದೆ ಒಂದು ಕ್ಷಣವನ್ನೂ ಊಹಿಸಲು ಸಾಧ್ಯವಿಲ್ಲ. ಪರಿಸರ ಮತ್ತು ಅರಣ್ಯ ನಾಶದ ಮುಂದುವರಿದ ಭಾಗವೇ ದೇಶಕ್ಕೆ ತಟ್ಟಿದ ಭೀಕರ ಬರಗಾಲ. ಪ್ರಾಣಿ-ಪಕ್ಷಿಗಳು ಜನರು ಕುಡಿಯುವ ನೀರಿಗಾಗಿ ತಾತ್ವಾರ(ಅಧ್ವಾನ) ಪಡುತ್ತಿರುವುದು ಸುಳ್ಳಲ್ಲ. ದುಡ್ಡೊಂದಿದ್ದರೆ ಇಂದಿನ ದಿನದಲ್ಲಿ ಏನನ್ನಾದರೂ ಕೊಂಡುಕೊಳ್ಳಬಹುದೆಂಬ ಗರ್ವ ಜನಸಾಮಾನ್ಯರಲ್ಲಿರುವುದು ಸುಳ್ಳಲ್ಲ. ಹೌದು ದುಡ್ಡು ಕೊಟ್ಟು ಏನನ್ನಾದರೂ ಕೊಂಡುಕೊಳ್ಳಬಹುದು, ಅದೇ ರೀತಿ ಜೀವಜಲವನ್ನೂ ಎಷ್ಟೇ ಬೆಲೆ ತೆತ್ತಾದರೂ ಕೊಂಡುಕೊಳ್ಳುತ್ತೇವೆ ಎನ್ನುವ ಯೋಚನೆಯೆನೋ ಸರಿ. ಆದರೆ ನೀರಿನ ಲಭ್ಯತೆಯೇ ಇಲ್ಲದ ಇಂದಿನ ದಿನದಲ್ಲಿ ದುಬಾರಿ ದುಡ್ಡನ್ನು ಕೊಟ್ಟು ನೀರನ್ನು ಕೊಳ್ಳುವ ಮಾತೆಲ್ಲಿ? ಕುಡಿಯುವ ಗುಟುಕು ನೀರಿಗಾಗಿ ಪ್ರಾಣಿ ಪಕ್ಷಿಗಳು, ಜಲಚರಗಳು ಹಾಗೂ ಮನುಷ್ಯ ಏನೆಲ್ಲಾ ಕಸರತ್ತುಗಳನ್ನು ಮಾಡುತ್ತಿದ್ದಾನೆಂದರೆ ಪ್ರಾಣಿ ಪಕ್ಷಿಗಳು ನಾಡಿಗೆ ಬಂದು ಇಲ್ಲಿನ ಕೆಸರಿನ ಹೊಂಡಗಳಲ್ಲಿ ಸಿಕ್ಕಿ ಪ್ರಾಣ ತೆತ್ತಿವೆ. ಪಕ್ಷಿಗಳು ನೀರಿಲ್ಲದೆ ಬಿಸಿಲಿನ ಬೇಗೆಯಲ್ಲಿ ಜೀವ ಬಿಡುತ್ತಿದ್ದು, ವಾತಾವರಣವಂತೂ ಬೆಂಕಿಯುಂಡೆಯಂತಾಗಿದೆ. ಮಾನವನಂತೂ ಜೀವಜಲವನ್ನು ಪಡೆಯಲೋಸುಗ ಏನೇನೋ ಕಸರತ್ತುಗಳನ್ನು ಮಾಡುತ್ತಿದ್ದಾನೆ ಅದರಲ್ಲೂ ಸರಕಾರವಂತೂ ವಿದೇಶೀ ತಂತ್ರಜ್ಞಾನವಾದ ‘ಪಾತಾಳಗಂಗೆ’ ಯೋಜನೆಯ ಮೂಲಕ ಭೂಗರ್ಭದ ಶಿಲಾಪದರದೊಳಗಿನಿಂದ ಜೀವ ಜಲವನ್ನು ಹೊರತರುವ ಬಹುಕೋಟಿ ಯೋಜನೆಯನ್ನು ಅನುಷ್ಠಾನ ಮಾಡ ಹೊರಟಿದೆ. ಇಂತಹ ಕೃತ್ರಿಮ ವಿಧಾನದಿಂದಾಗಿ ಭೂಗರ್ಭಕ್ಕೆ ಶಾಶ್ವತ ಹಾನಿಯಾಗುವ ಸಾಧ್ಯತೆಯೂ ಇದೆ. ಪ್ರಜ್ಞಾವಂತ ಜನತೆ ನೀರಿನ ಮೂಲವನ್ನು ವರ್ಧಿಸುವ ಹಾಗೂ ಇರುವ ನೀರಿನ ಕೆರೆ-ಕಟ್ಟೆ, ಹಳ್ಳ-ಕೊಳ್ಳ, ಕಲ್ಯಾಣಿಗಳನ್ನು ಸ್ವಚ್ಚಗೊಳಿಸಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡುವ ಪ್ರಯತ್ನವನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಬಹುಕೋಟಿ ಮೊತ್ತದ ಪರಿಣಾಮಕಾರಿಯಲ್ಲದ ಯೋಜನೆಯನ್ನು ರೂಪಿಸುವ ಬದಲು ಇರುವ ನೀರಿನಮೂಲಗಳನ್ನು ಉಳಿಸುವ ಮತ್ತು ಕುಡಿಯುವ ನೀರಿನ ಜಾಗೃತಿಯನ್ನು ಮಾಡಿಸುವಂತಹ ಹಲವಾರು ಕಾರ್ಯಕ್ರಮಗಳನ್ನು ವಿವಿಧ ಸಂಘ ಸಂಸ್ಥೆಗಳು ಮತ್ತು ಸಂಘಟನೆಗಳು ಹಮ್ಮಿಕೊಂಡಿವೆ. ಕರ್ನಾಟಕದಲ್ಲೇ ಅತ್ಯಂತ ಕಡಿಮೆ ಮಳೆ ಬೀಳುವ ಹಾಗೂ ಸದಾ ನೀರಿನ ಸಮಸ್ಯೆಯಲ್ಲಿ ಬೇಯುತ್ತಿರುವ ಹಲವು ಬರ ಪೀಡಿತ ಜಿಲ್ಲೆಗಳ ಪೈಕಿ ತುಮಕೂರು ಜಿಲ್ಲೆಯ ಪಾವಗಡತಾಲೂಕಿನಲ್ಲಿ ಮಳೆ ಎನ್ನುವುದು ಮರಳುಗಾಡಿನಲ್ಲಿ ಓಯಸಿಸ್‍ನಂತಾಗಿದ್ದು, ಈ ತಾಲೂಕಿನ ಜನತೆಯ ನಿತ್ಯ ನೀರಿನ ಭವಣೆಯನ್ನು ದೇವರೇ ಬಲ್ಲ. ಇಲ್ಲಿನ ಕುಡಿಯುವ ನೀರಿನ ಮೂಲದ ಸಂವರ್ಧನೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು“ನಮ್ಮೂರು ನಮ್ಮ ಕೆರೆಯೋಜನೆಯ” ಮೂಲಕ ಕೆರೆಗಳ ಪುನಶ್ಚೇತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.IMG_20170531_142147


ಪಾವಗಡ ತಾಲೂಕಿನ ಲಿಂಗದಹಳ್ಳಿ ಹೋಬಳಿಯವಡಕಲ್ ಗ್ರಾಮದಲ್ಲೊಂದು ಪಕ್ಕದ ನಾಲ್ಕು ಹಳ್ಳಿಗಳಿಗೆ ನಿತ್ಯ ನೀರುಣಿಸುವ “ರೆಡ್ಡಯ್ಯನ ಕಟ್ಟೆ” (ನಾಗಮ್ಮನ ಕೆರೆ) ಯೊಂದಿದ್ದು, ಇದು ನಿತ್ಯ ನೀರಿನಿಂದ ತುಂಬಿ ತುಳುಕಿ ಹೆಚ್ಚಿನ ನೀರು ಇಲ್ಲಿನ ತೋಬುಗಳ ಮೂಲಕ ಹೊರ ಹರಿಯುತಿತ್ತು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಈ ಕೆರೆಯನ್ನು ಅವಲಂಬಿಸಿ ಮೂರು ಸಾವಿರ ಮನೆಗಳ ಸುಮಾರು ಹತ್ತು ಸಾವಿರ ಮಂದಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಇಂದು ಕೆರೆಯೇ ಮಾಯವಾಗಿ ಇಲ್ಲಿ ಕೇವಲ ಕುರುಚಲು ಬಳ್ಳಾರಿ ಜಾಲಿ ಗಿಡಗಳ ಪೊದೆಗಳು ಆಳೆತ್ತರಕ್ಕೆ ಬೆಳೆದು ಕಾಡಾಗಿ ಮಾರ್ಪಟ್ಟಿದೆ. ಕೆರೆ ತುಂಬಾ ಹೂಳು ತುಂಬಿದ್ದು, ಇಲ್ಲಿ ಮಳೆಯೇನಾದರೂ ಅಪರೂಪಕ್ಕೆ ಬಿದ್ದಲ್ಲಿ ನೀರು ತುಂಬಲು ಜಾಗವೇ ಇಲ್ಲದಂತಾಗಿದೆ. ಇಲ್ಲಿಯ ಕೆರೆಯ ನೀರನ್ನು ಎರಡು ತೂಬಿನ ಮೂಲಕ ಪಕ್ಕದ ರೈತರ ನೂರ ಇಪ್ಪತ್ತು ಎಕರೆ ಕೃಷಿಜಮೀನಿಗೆ ಹರಿಸಿ ವ್ಯವಸಾಯವನ್ನು ಮಾಡಲಾಗುತಿತ್ತು. ಜಾನುವಾರುಗಳ ಕುಡಿಯುವ ನೀರಿನ ಮೂಲ ಇದೇ ಕೆರೆ ಎಂದರೆ ತಪ್ಪಾಗಲಾರದು. ಈ ಕೆರೆಯಿಂದ ಸುಮಾರು ಒಂದರಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಎರಡು ಗುಡ್ಡಗಳಿದ್ದು ಗುಡ್ಡಕ್ಕೆ ಮಳೆ ಬಿದ್ದಾಗ ಮಳೆಯ ನೀರು ಸರಾಗವಾಗಿ ಹರಿದುಕೊಂಡು ಬಂದು ರೆಡ್ಡೆಯ್ಯನ ಕಟ್ಟೆಯನ್ನು ಸೇರಲು ಎರಡು ಪ್ರಮುಖ ರಾಜಕಾಲುವೆಗಳ ಸಂಪರ್ಕಗಳಿರುವುದು ಈ ಕೆರೆಯ ವಿಶೇಷತೆಯಾಗಿದೆ. ಆದರೆ ಇಂದು ಈ ಕೆರೆಯ ತುಂಬಾ ಗಿಡಗಂಟಿಗಳು ತುಂಬಿ ಸಂಪೂರ್ಣ ಕೆರೆಯೇ ಮಾಯವಾಗಿದೆಯೆನ್ನಬಹುದು. ಈ ಕೆರೆಗೆ ಪಾರಂಪರಿಕ ಹಿನ್ನೆಲೆಯಿದ್ದು ರೆಡ್ಡೆಯ್ಯ ಎಂಬ ರಾಜನ ಪತ್ನಿ ನಾಗಮ್ಮ ಎಂಬ ರಾಣಿಯು ತನ್ನ ಅರಮನೆಯ ಅಸಂಖ್ಯ ಜಾನುವಾರಗಳಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲು ತನ್ನ ರಾಜ ರೆಡ್ಡೆಯ್ಯನ ಮೂಲಕ ಈ ಕೆರೆಯನ್ನು ನಿರ್ಮಿಸಿದಳೆಂದು ಇತಿಹಾಸದಿಂದ ತಿಳಿದು ಬರುತ್ತದೆ.
ಕೆರೆಗೆ ಕಾಯಕಲ್ಪ:

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ದಿನಬಳಕೆಯ ಕೆರೆಗೆ ಕಾಯಕಲ್ಪವನ್ನು ನೀಡುವ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಹಮ್ಮಿಕೊಂಡಿದ್ದು, ಈ ಮೂಲಕ ರೆಡ್ಡಯ್ಯನ ಕಟ್ಟೆಗೂ ಕಾಯಕಲ್ಪದ ಭಾಗ್ಯ ದೊರೆತಿರುತ್ತದೆ. ಇಲ್ಲಿನ ಹತ್ತು ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯ ಕಾಯಕಲ್ಪಕ್ಕಾಗಿ ಧರ್ಮಸ್ಥಳದಿಂದ ಐದು ಲಕ್ಷರೂಪಾಯಿಗಳ ನೆರವು ದೊರೆತಿದ್ದು, ಕೆರೆಯಲ್ಲಿ ತುಂಬಿದ್ದ 5.5 ಅಡಿಯಿಂದ 6 ಅಡಿಯಷ್ಟು ಆಳಕ್ಕೆ ಹೂಳನ್ನು ಸಂಪೂರ್ಣವಾಗಿ ತೆಗೆಯಲಾಗಿದೆ. ಇಲ್ಲಿನ ಕೆಲಸ ನಿರ್ವಹಣೆಗಾಗಿ ಸಂಸ್ಥೆಯು ಗ್ರಾಮಸ್ಥರ ಸಹಯೋಗದೊಂದಿಗೆ ಸಮಿತಿಯನ್ನು ರಚಿಸಿ ಆ ಮೂಲಕ ನಿರ್ವಹಿಸಿರುವುದು ವಿಶೇಷ.IMG_20170531_135221


ಈ ಕಾರ್ಯಕ್ರಮವನ್ನು ಅತ್ಯಂತ ವಿಶಿಷ್ಟವಾಗಿ ರೂಪಿಸಲಾಗಿದ್ದು ಕೆರೆಯಲ್ಲಿ ತುಂಬಿದ್ದ ಅತ್ಯಂತ ಫಲವತ್ತಾದ ಸುಮಾರು ಐದು ಸಾವಿರ ಟ್ರಾಕ್ಟರ್ ಲೋಡ್ ಮಣ್ಣನ್ನು ಆಸುಪಾಸಿನ ಸುಮಾರು ಎಂಬತ್ತಮೂರು ಮಂದಿ ರೈತರ ಕೃಷಿ ಭೂಮಿಗಳಿಗೆ ವಿತರಿಸಿಕೃಷಿಗೂ ಪೂರಕವಾಗಿ ಕಾರ್ಯಕ್ರಮವನ್ನಾಗಿ ಅನುಷ್ಠಾನಗೊಳಿಸಲಾಗಿದೆ. ನೀಡಲಾದಐದು ಲಕ್ಷ ಅನುದಾನದ ಬಳಕೆಗಾಗಿ ಮತ್ತು ಕೆರೆಯ ಪುನಶ್ಚೇತನಕ್ಕಾಗಿ ಇದೇ ಗ್ರಾಮದಹತ್ತು ಮಂದಿ ಸದಸ್ಯರ ಅಭಿವೃದ್ದಿ ಸಮಿತಿಯನ್ನು ರಚಿಸಿ ಆ ಸಮಿತಿಯೇ ಎಲ್ಲಾ ಕೆಲಸ ಕಾರ್ಯಗಳನ್ನು ಪಾರದರ್ಶಕವಾಗಿ ಮತ್ತು ಯಾವುದೇ ರೀತಿಯಲ್ಲೂ ಮೊತ್ತ ಪೋಲಾಗದಂತೆ ನಿರ್ವಹಿಸಿರುವುದು ವಿಶೇಷ. ಸಮಿತಿಯ ಅಧ್ಯಕ್ಷರಾಗಿ ಶ್ರೀ ತಿಪ್ಪೇಸ್ವಾಮಿ, ಕಾರ್ಯದರ್ಶಿಯಾಗಿ ಯೋಜನಾಧಿಕಾರಿಗಳಾದ ಶ್ರೀ ದಿನೇಶ್, ಗೌರವ ಸಲಹೆಗಾರರಾಗಿ ನಿರ್ದೇಶಕರಾದಶ್ರೀ ದಿನೇಶ್, ಕೋಶಾಧಿಕಾರಿಗಳಾಗಿ ಶ್ರೀ ರವಿಶಾಸ್ತ್ರಿ ಇವರು ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸಿರುವುದು ಅಚ್ಚುಕಟ್ಟುತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಐವತ್ತು ಲಕ್ಷ ಮೊತ್ತದಲ್ಲಿ ಹಿಟಾಚಿ ಮತ್ತು ಜೆ.ಸಿ.ಬಿಗಳ ಮೂಲಕಏಳುನೂರು ಗಂಟೆಗಳ ಕಾಲ ಕೆಲಸವನ್ನು ಮಾಡಿಸಿ ಕೆರೆಯಲ್ಲಿ 5.5 ಅಡಿಯಿಂದ 6 ಅಡಿಯಷ್ಟು ಆಳಕ್ಕೆ ಬಳ್ಳಾರಿ ಜಾಲಿ ಗಿಡ ಗಂಟೆ ಮತ್ತು ಹೂಳನ್ನು ಮೇಲೆತ್ತಲಾಗಿದೆ. ಹಾಗೂ ಈ ಫÀಲವತ್ತಾದ ಮಣ್ಣನ್ನು ರೈತರ ಜಮೀನಿಗೆ ಬಳಸಿಕೊಂಡು ಎರಡೆರಡು ರೀತಿಯ ಪ್ರಯೋಜನವನ್ನು ರೈತರಿಗೆ ನೀಡಲಾಗಿದೆ. ಮಣ್ಣನ್ನು ಮಣ್ಣಿನ ಅವಶ್ಯಕತೆ ಇದ್ದ ರೈತರೇ ಅದಾಗಲೇ ನಿಯೋಜಿಸಲಾಗಿದ್ದ ಸುಮಾರು ಹದಿನೈದು ಟ್ರಾಕ್ಟರ್‍ಗಳ ಮೂಲಕ ಕೆರೆಯಿಂದ ತಮ್ಮ ಜಮೀನಿಗಿರುವ ದೂರದ ಆದಾರದ ಮೇಲೆ ನಿರ್ಧರಿಸಲಾದ ಬಾಡಿಗೆ ಮೊತ್ತವನ್ನು ಪಾವತಿಸುವ ಮೂಲಕ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಸುಮಾರು 3.91 ಲಕ್ಷ ರೂಪಾಯಿ ಮೊತ್ತದ ಸಾಗಾಟದ ಮೊತ್ತವನ್ನು ರೈತರೇ ಭರಿಸಿರುವುದು ಈ ಕಾರ್ಯಕ್ರಮದ ಮತ್ತೊಂದು ಹೆಚ್ಚುಗಾರಿಕೆ. ಈ ಎಲ್ಲಾ ಮಣ್ಣಿನ ಹಂಚಿಕೆ, ಸಾಗಾಟದ ಬಾಡಿಗೆ ಪಾವತಿ, ದೂರಕ್ಕನುಗುಣವಾಗು ಟ್ರಾಕ್ಟರ್ ಬಾಡಿಗೆ ಮೊತ್ತದ ನಿರ್ಧಾರ ಇವೆಲ್ಲವೂ ಹತ್ತು ಮಂದಿ ಸದಸ್ಯಸಮಿತಿಯ ನಿಯಂತ್ರಣದಲ್ಲೇ ಯಾವುದೇ ರೀತಿಯ ತಕರಾರಿಲ್ಲದೆ ಪಾರದರ್ಶಕವಾಗಿ ನಡೆದಿರುವುದು ವಿಶೇಷ. ಹೂಳೆತ್ತುವ ಕೆಲಸವು ಸಮಿತಿಯ ಹತ್ತು ಮಂದಿಯಲ್ಲಿ ಕಡ್ಡಾಯವಾಗಿ ಇಬ್ಬರು ಸದಸ್ಯರ ಉಪಸ್ಥಿತಿಯಲ್ಲೇ ನಡೆದಿದ್ದು ಎಲ್ಲಾ ಸದಸ್ಯರು ಗ್ರಾಮದ ಸಮಸ್ಯೆಯ ನಿವಾರಣೆಗಾಗಿ ಗೌರವಯುತವಾಗಿ ಯಾವುದೇ ವೇತನವನ್ನು ಪಡೆಯದೇ ಕರ್ತವ್ಯ ನಿರ್ವಹಿಸಿದ್ದಾರೆ.
ಕೇವಲ ಒಂದೂವರೆ ತಿಂಗಳಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸ ಕಾರ್ಯಗಳು ಸಂಪೂರ್ಣಗೊಂಡಿದ್ದು, ರೂ.60 ರಿಂದ ರೂ.180/- ವರೆಗೆ ವಿವಿಧ ದೂರದ ರೈತರ ಜಮೀನಿಗೆ ಮಣ್ಣು ಸಾಗಾಟದ ಬಾಡಿಗೆ ದರವನ್ನು ಸಮಿತಿಯೇ ನಿರ್ಧರಿಸಿ ಸದ್ರಿ ಮೊತ್ತವನ್ನು ಅಚ್ಚುಕಟ್ಟಾಗಿ ಟ್ರಾಕ್ಟರ್ ಮಾಲೀಕರಿಗೆ ನೀಡುವ ಮೂಲಕ ಟ್ರಾಕ್ಟರ್‍ಗಳಿಗೂ ಉತ್ತಮ ವ್ಯವಹಾರವನ್ನು ನೀಡಿದ ಹೆಗ್ಗಳಿಕೆ ಈ ಕಾರ್ಯಕ್ರಮದ್ದು. ಎಲ್ಲಾ ವ್ಯವಹಾರಗಳನ್ನೂ ಪಾರದರ್ಶಕವಾಗಿ ಸಮರ್ಪಕವಾದ ದಾಖಲೆಗಳೊಂದಿಗೆ ನಿರ್ವಹಿಸಲಾಗಿದೆ. ಕೃಷಿ ಮೇಲ್ವಿಚಾರಕರಾದ ಸಂತೋಷ್, ವಲಯ ಮೇಲ್ವಿಚಾರಕರಾದ ರಾಜೇಶ್ ಹಾಗೂ ಸೇವಾಪ್ರತಿನಿಧಿ ನಾರಾಯಣ ಇವರು ಮೇಲುಸ್ತುವಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ.
ಈಗಾಗಲೇ ಬಿದ್ದಿರುವ ಒಂದೆರಡು ಮಳೆಯಿಂದಾಗಿ ಸ್ವಲ್ಪ ನೀರು ಕೆರೆಯ ಒಡಲಲ್ಲಿ ಇನ್ನೊಂದೆಡೆ ನಾಲ್ಕೈದು ಇಂಚಿನಷ್ಟು ನೀರು ಕೆರೆಯಲ್ಲಿ ನಿಂತಿದೆ. ಕೆರೆಯೊಳಗೇ ಸುಮಾರುಮೂರು ಅಡಿ ಆಳದ ಸಣ್ಣ ಹೊಂಡವನ್ನುತೋಡಲಾಗಿದ್ದು, ಅದು ಸಂಪೂರ್ಣವಾಗಿ ನೀರಿನಿಂದ ತುಂಬಿದೆ. ಈ ಕೆರೆಯ ಅಭಿವೃದ್ದಿಗೆ ಇನ್ನೂ ಒಂದಷ್ಟು ಅನುದಾನದ ಅವಶ್ಯಕತೆಯಿದ್ದು ಸಮುದಾಯದ ಜನರ, ಸರಕಾರದ, ಜನಪ್ರತಿನಿಧಿಗಳ ಸಹಕಾರದಿಂದ ಇನ್ನಷ್ಟು ಅಭಿವೃದ್ದಿಗೊಳಿಸಿದಲ್ಲಿ ಕುಡಿಯುವ ನೀರಿನ ಸಮಸ್ಯೆಗೆಶಾಶ್ವತ ಪರಿಹಾರ ದೊರೆತು ಜಲಸಂರಕ್ಷಣೆಯ ಕನಸನ್ನು ನನಸಾಗಿಸಬಹುದು. ಈ ಕಾರ್ಯಕ್ರಮವು ಇಲ್ಲಿನ ಸಮುದಾಯದ ಜನರು, ರೈತರು, ಹಾಗೂ ಇತರ ವಿವಿಧ ವ್ಯವಹಾರಸ್ಥರನ್ನು ತೊಡಗಿಸಿಕೊಂಡು ಸಮರ್ಪಕವಾಗಿ ನಿರ್ವಹಿಸಿದ ರೀತಿ ಎಲ್ಲಾ ವ್ಯವಸ್ಥೆಗಳಿಗೂ ಹಾಗೂ ಇತರರಿಗೂ ಮಾದರಿಯಾಗುವಂತಿದೆ.
ಲೇಖನ:
ಸಂತೋಷ್ ರಾವ್ ಪೆರ್ಮುಡ |
ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ದ.ಕ ಜಿಲ್ಲೆ.
ದೂ: 9742884160

 

By suddi9

Leave a Reply

Your email address will not be published. Required fields are marked *