ಉಡುಪಿ: ಶ್ರೀಕೃಷ್ಣಮಠದಲ್ಲಿ ಮುಸ್ಲಿಂ ಸಮುದಾಯದವರಿಗೆ ಇಫ್ತಾರ್ ಕೂಟ ಆಯೋಜಿಸಿದ್ದಕ್ಕೆ ವಿವಾದ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಚಿಂತಕ ಹಾಗೂ ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು.ಈ ವೇಳೆ ಪೇಜಾವರ ಶ್ರೀ ಅವರನ್ನು ಭೇಟಿ ಮಾಡಿದ ಸೂಲಿಬೆಲೆ ನಿಮ್ಮ ನಿರ್ಧಾರಕ್ಕೆ ನಮ್ಮ ಸಹಮತವಿದೆ ಎಂದು ಶ್ರೀಗಳಿಗೆ ಬೆಂಬಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೇಜಾವರ ಶ್ರೀಗಳ ಅನೇಕ ವರ್ಷಗಳ ಹಿಂದುತ್ವದ ಹೋರಾಟ ಮತ್ತು ಹಿಂದುತ್ವದ ಸುಧಾರಣೆಯ ಹೋರಾಟದ ಬಗ್ಗೆ ಯಾರಿಗೂ ಅನುಮಾನ ಇಲ್ಲ.
ಪೇಜಾವರ ಶ್ರೀಗಳು ಯಾವುದೇ ಕೆಲಸ ಮಾಡಿದ್ರು ದೂರದೃಷ್ಟಿತ್ವ ಇರುತ್ತೆ. ಈ ಕಾರಣದಿಂದ ನಾವು ಯಾವತ್ತು ಅವರ ಜೊತೆಗೆ ಇದ್ದೇವೆ ಎಂದು ತಿಳಿಸಲು ನಾನು ಇಲ್ಲಿಗೆ ಬಂದಿದ್ದೇನೆ ಎಂದರು.ಪ್ರಧಾನಿಯವರ ‘ ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವ ಕಲ್ಪನೆಗೆ ಇವರು ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಮುಸಲ್ಮಾನರು ಕೂಡ ಈ ಕಲ್ಪನೆಯನ್ನು ತೀವ್ರವಾಗಿ ಸ್ವೀಕರಿಸಿ ಮುಂದೆ ಬರಬೇಕು. ನಾವು ಹುಟ್ಟುವುದಕ್ಕೂ ಮುಂಚೆಯೇ ಶ್ರೀಗಳು ಹಿಂದೂ ಸಮಾಜದ ಏಳಿಗೆಗೋಸ್ಕರ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ ಎಂದರು.ಈ ಹಿಂದೆಯೂ ಮಠದಲ್ಲಿ ಸೌಹಾರ್ದದ ಕೆಲಸ ನಡೆದಿತ್ತು. ಪ್ರತಿಭಟನೆ ಮಾಡುವವರು ತಮ್ಮ ಪ್ರತಿಭಟನೆಯ ಒಲವು ಬಿಟ್ಟು ಸ್ವಾಮೀಜಿಗಳಿಗೆ ಬೆಂಬಲ ನೀಡುವಂತೆ ವಿನಂತಿಸುತ್ತಿದ್ದೇನೆ. ಪ್ರತಿಭಟನೆ ಮಾಡುವವರೂ ಹಿಂದೂಗಳು ನಾವು ಹಿಂದೂಗಳೇ ಎಂದು ಉಡುಪಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಹೇಳಿದರು

