ಬಂಟ್ವಾಳ :ಬೆಂಜನಪದವಿನಲ್ಲಿ ಬುಧವಾರ ರಿಕ್ಷಾಚಾಲಕ ಅಶ್ರಫ್ ಹತ್ಯೆ ಬಳಿಕ ಬಂಟ್ವಾಳ ಸುತ್ತಮುತ್ತ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣ ಗುರುವಾರ ಸಂಪೂರ್ಣ ಸಹಜಸ್ಥಿತಿಗೆ ಮರಳಿದೆ. ಬುಧವಾರದಂದು ಬಿ.ಸಿ.ರೋಡು, ಕೈಕಂಬ, ಪರಂಗಿಪೇಟೆ, ತುಂಬೆ, ಮೆಲ್ಕಾರ್, ಕಲ್ಲಡ್ಕ, ಮಾಣಿ ಮೊದಲಾದೆಡೆ ಆತಂಕದ ವಾತಾವರಣ ಉಂಟಾಗಿತ್ತಲ್ಲದೆ, ಅಂಗಡಿ ಮುಂಗ್ಗಟ್ಟುಗಳು ಸ್ವಯಂ ಪ್ರೇರಿತ ವಾಗಿ ಬಂದ್ ಆಗಿತ್ತು. ಕಲ್ಲಡ್ಕದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರೇ ಅಂಗಡಿ ಮುಂಗಟ್ಟನ್ನು ಮುಚ್ಚಿಸಿದ್ದರು.20170622_190757

ಗುರುವಾರದಂದು ಈ ಭಾಗದಲ್ಲೆಲ್ಲಾ ಎಲ್ಲಾ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದು ವ್ಯವಹಾರ ನಡೆಸಿದೆಯಲ್ಲದೆ, ವಾಹನ ಸಂಚಾರ ಮಾಮೂಲಿಯಾಗಿತ್ತು. ಆದರೆ ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಐಜಿಪಿ ಹರಿಹರನ್ ಸಹಿತ ಬೆಳಿಗ್ಗೆಯಷ್ಟೇ ಅಧಿಕಾರ ಸ್ವೀಕರಿಸಿದ ನೂತನ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ನಿರ್ಗಮನ ಎಸ್ಪಿ ಭೂಷಣ್ ಜಿ ಬೊರಸೆ, ಚಿಕ್ಕಮಗಳೂರು ಎಸ್ಪಿ ಅಣ್ಣಾ ಮಲೈ ಯವರ ಬಂಟ್ವಾಳ ನಗರ ಠಾಣೆಯಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ.

ವಿಶೇಷ ಭದ್ರತಾ ಕರ್ತವ್ಯದ ಹಿನ್ನೆಲೆಯಲ್ಲಿ ಎಸ್ಪಿ ಅಣ್ಣಾ ಮಲೈ ಯವರನ್ನು ನಿಯೋಜಿಸಲಾಗಿದ್ದು, ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ನಂತರದ ಸಮಯದಿಂದ ಪರಿಸ್ಥಿತಿ ಸಂಪೂರ್ಣ ಹದ್ದುಬಸ್ತಿಗೆ ಬಂದಿದೆ. ಸಂಜೆಯ ವೇಳೆಗೆ ಎಡಿಜಿಪಿ ಅಲೋಕ್ ಮೋಹನ್ ಕೂಡ ತುರ್ತಾಗಿ ಬಂಟ್ವಾಳ ನಗರ ಠಾಣೆಗೆ ಆಗಮಿಸಿದ್ದು, ಪೊಲೀಸ್ ಅಧಿಕಾರಿಗಳೊಂದಿಗೆ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿ ಮಾರ್ಗದರ್ಶನ ನೀಡಿದರು.

ಶವ ದಫನ: ಹಲವರು ವಶಕ್ಕೆ
ರಿಕ್ಷಾ ಚಾಲಕ ಅಶ್ರಫ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ರಾಷ್ಟ್ರೀಯ ಹೆದ್ದಾರಿ 75ರ ಕಣ್ಣೂರು ಕೇಂದ್ರ ಮಸೀದಿ ಯಲ್ಲಿ ಸ್ನಾನ ಮಾಡಿಸಿ, ನಂತರ ಕಲಾಯಿ ಜುಮ್ಮಾ ಮಸೀದಿಯಲ್ಲಿ ಧಫನ ತಡರಾತ್ರಿ ವೇಳೆ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದು, ಬಿಗುಬಂದೋಬಸ್ತ್ ಒದಗಿಸಲಾಗಿತ್ತು.
ಮೃತದೇಹವನ್ನು ಕಣ್ಣೂರಿನಿಂದ ಕಲಾಯಿಗೆ ತರುವ ಸಂದರ್ಭದಲ್ಲಿ ಬ್ರಹ್ಮರ ಕೂಟ್ಲುವಿನ ಟೋಲ್ ಗೇಟ್ ಸಿಬ್ಬಂದಿಗಳಿಗೆ ಕಲ್ಲು ತೂರಾಟದಿಂದ ಗಾಯಗಳಾಗಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆ ಕಾರ್ಯಕ್ಕೆ ಈಗಾಗಲೇ ಡಿಸಿಐಬಿ ಸೇರಿದಂತೆ ಐದು ವಿಶೇಷ ತಂಡವನ್ನು ರಚಿಸಲಾಗಿದೆ. ಕೃತ್ಯಕ್ಕೆ ಅಶ್ರಫ್ ಅವರ ವೈಯುಕ್ತಿಕ ಸೇರಿದಂತೆ ವಿವಿಧ ಮಗ್ಗುಲಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಗುರಿಪಡಿಸಿ, ಮಹತ್ವದ ಮಾಹಿತಿಯನ್ನು ಕಲೆಹಾಕಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆಬೀಸಿದ್ದಾರೆ.
ಈನಡುವೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿದ್ದು, ಜೂ.27 ರವರೆಗೆ ಮುಂದುವರಿಸಲಾಗಿದೆ.

ಬಂಟ್ವಾಳದ ಗಲಭೆ ಪೀಡಿತ ಪ್ರದೇಶಗಳಿಗೆ ಗುರುವಾರ ಮತ್ತೆ ಭೇಟಿ ನೀಡಿದ್ದೇನೆ, ಇದೀಗ ಎಲ್ಲೆಡೆ ಪರಿಸ್ಥಿತಿ ಸಂಪೂರ್ಣ ಶಾಂತವಾಗಿದೆ ಎಂದು ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.
ಗುರುವಾರ ಸಂಜೆ ಬಂಟ್ವಾಳ ನಗರ ಠಾಣೆಗೆ ಭೇಟಿ ನೀಡಿದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಜನಪದವಿನಲ್ಲಿ ನಡೆದ ಕೊಲೆಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪ್ರಗತಿಯಲ್ಲಿದ್ದು, ಘಟನೆಗೆ ಸಂಬಂಧಿಸಿ ಕೆಲವೊಂದು ಮಹತ್ವದ ಮಾಹಿತಿಯನ್ನು ನಮ್ಮ ಪೊಲೀಸರು ಕಲೆಹಾಕಿದ್ದಾರೆ, ಅತೀಶೀಘ್ರದಲ್ಲಿ ಆರೋಪಿಗಳ ಬಂಧನವಾಗಲಿದೆ ಎಂದವರು ವಿಶ್ವಾಸವ್ಯಕ್ತಪಡಿಸಿದರು.

* ಪ್ರತಿಭಟನೆಗೆ ಅನುಮತಿ ಇಲ್ಲ
ಜೂ.27 ರವರೆಗೆ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಐದಕ್ಕಿಂತ ಹೆಚ್ಚುಮಂದಿ ಗುಂಪು ಸೇರುವಂತಿಲ್ಲ, ಹಾಗಾಗಿ ಜೂ.24 ರಂದು ಬಿ.ಸಿ.ರೋಡಿನಲ್ಲಿ ನಡೆಯಲುದ್ದೇಶಿಸಿದ ಪ್ರತಿಭಟನೆಗೂ ಈವರೆಗೆ ಅನುಮತಿ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ, ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕೆಲವೊಂದು ಮಾರ್ಗದರ್ಶನ ನೀಡಿದರು. ಐಜಿಪಿ ಹರಿಶೇಖರನ್, ನೂತನ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ನಿರ್ಗಮನ ಎಸ್ಪಿ ಭೂಷಣ್ ಜಿ ಬೊರಸೆ, ಚಿಕ್ಕಮಗಳೂರು ಎಸ್ಪಿ ಅಣ್ಣಾ ಮಲೈ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ, ಡಿವೈಎಸ್ಪಿ ರವೀಶ್ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *