ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ದಕ್ಷಿಣ ಭಾರತದ ಆಯೋಧ್ಯೆಯಂತೆ ಇಲ್ಲಿನ ಶ್ರೀರಾಮ ಮಂದಿರ ಕಂಗೊಳಿಸುತ್ತಿದೆ. ಶ್ರೀರಾಮನ ದೂತ ಹನುಮನಂತೆ ಇಲ್ಲಿನ ಸೇವಾ ಟ್ರಸ್ಟಿನ ಅಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ಟರು ಮಂದಿರ ಮತ್ತು ಸಮಸ್ತ ಹಿಂದೂ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಹನುಮನ ವಿಗ್ರಹ ಪ್ರತಿಷ್ಠಾಪನೆ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಈ ಮಂದಿರಕ್ಕೆ ಕಲ್ಲೆಸೆದ ಮತಾಂಧರಿಗೆ ಶಿಕ್ಷೆ ನೀಡುವ ಬದಲಾಗಿ ಐಜಿಪಿ ಹರಿಶೇಖರನ್ ಇಲ್ಲಿನ ಹಿಂದು ಯುವಕರಿಗೆ ಎನ್ಕೌಂಟರ್ ಮಾಡುವುದಾಗಿ ಬೆದರಿಸುತ್ತಿದ್ದಾರೆ. ಕಲ್ಲಡ್ಕದಲ್ಲಿ ಶಾಂತಿ ಮರು ಸ್ಥಾಪನೆಗೆ ಶ್ರಮಿಸುವ ಬದಲಾಗಿ ದೇಶಭಕ್ತ ಸಂಘಟನೆ ಆರ್ಎಸ್ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ಟರನ್ನು ಜೈಲಿಗಟ್ಟಲು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಪೊಲೀಸ್ ಅಧಿಕಾರಿಗಳಿಗೆ ಒತ್ತಡ ಹಾಕುತ್ತಿರುವುದು ತೀರಾ ವಿಪರ್ಯಾಸವಾಗಿದೆ ಎಂದು ಅವರು ಹೇಳಿದರು.

ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ ಮತ್ತಿತರರು ಶುಭ ಹಾರೈಸಿದರು.
ಕಲ್ಲಡ್ಕ ಶ್ರೀರಾಮಾಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಕೆ. ಪ್ರಭಾಕರ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಳೆದ ವರ್ಷ ಶ್ರೀರಾಮ ಮಂದಿರವನ್ನು ಶೋಷಿತ ಮತ್ತು ಕೆಳವರ್ಗದ ಜನತೆಯ ಪ್ರತೀಕವಾಗಿ ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮಿಜಿ ಲೋಕಾರ್ಪಣೆಗೊಳಿಸಿದ್ದರು. ಭಯೋತ್ಪಾದಕರೆಂಬ ರಾಕ್ಷಸರನ್ನು ಸಂಹರಿಸಲು ಧರ್ಮ ಸಂಸ್ಥಾಪನಾ ಕಾರ್ಯ ಆಗುತ್ತಿದೆ ಎಂದರು.
ಕಲ್ಲಡ್ಕದಲ್ಲಿ ಭಿನ್ನ ಸಮಾಜದ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಘರ್ಷಣೆಗೆ ಕೋಮು ಬಣ್ಣ ಹಚ್ಚಲಾಗಿದೆ. ಇಲ್ಲಿನ ಹಿಂದು -ಮುಸಲ್ಮಾನರಲ್ಲಿ ಬಿನ್ನಾಭಿಪ್ರಾಯವಿಲ್ಲ. ಇದ್ದರೂ ವಾನೇ ಬಗೆಹರಿಸಿಕೊಳ್ಳುತ್ತೇವೆಯೇ ವಿನಃ ಇದರಲ್ಲಿ ರಾಜಕಾರಣಿಗಳು ಬೇಳೆ ಬೇಯಿಸಿಕೊಳ್ಳುವುದು ಬೇಡ ಎಂದರು.
ಇದೇ ವೇಳೆ ಶಿಲ್ಪಿ ತ್ಯಾಗರಾಜ್ ಇವರÀನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಚೆನ್ನಪ್ಪ ಆರ್. ಕೋಟ್ಯಾನ್ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.
—
