ಬಿ.ಸಿ.ರೋಡು : ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾವiಗಾರಿಯ ಸಂದರ್ಭ ಬೈಪಾಸ್ – ಮೂಡಬಿದ್ರೆ ರಸ್ತೆಯನ್ನು ಅಗೆದು ಪೈಪ್ ಹಾಕಿದ ಪರಿಣಾಮ ಗುರುವಾರ ಸಂಜೆ ಸುರಿದ ಮಳೆಗೆ ರಸ್ತೆ ಇಡೀ ಕೆಸರಿನಿಂದ ಆವೃತವಾಗಿತ್ತು. ಮರಳು ಸಾಗಿಸುವ ಲಾರಿಯೊಂದು ಈ ಕೆಸರಿನಲ್ಲಿ ಹೂತು ಹೋದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಶಾಲೆ ಬಿಡುವ ಸಮಯವಾದುದರಿಂದ ವಾಹನಗಳ ಸರತಿ ಸಾಲು ರಸ್ತೆಯಲ್ಲಿ ಕಂಡು ಬಂತು. ಟ್ರಾಫಿಕ್ ಪೊಲೀಸರು ರಸ್ತೆ ಸಂಚಾರ ಸುಗಮಗೊಳಿಸಲು ಹರಸಾಹಸ ಪಟ್ಟರು. ಜೆಸಿಬಿ ಮೂಲಕ ಹೂತು ಹೋದ ಲಾರಿಯಲ್ಲಿದ್ದ ಮರಳನ್ನು ಇನ್ನೊಂದು ಲಾರಿಗೆ ವರ್ಗಾಯಿಸಿ ಸಮಸ್ಯೆಯನ್ನು ಬಗೆಹರಿಸಲಾಯಿತು. ಸಮಗ್ರ ಕುಡಿಯುವ ನೀರಿನ ಯೋಜನೆಯ ಇಂಜಿನಿಯರ್ ಶೋಭಾಲಕ್ಷ್ಮಿ ಖುದ್ದಾಗಿ ಸ್ಥಳಕ್ಕೆ ಬಂದು ಸಮಸ್ಯೆಯನ್ನು ಪರಿಹರಿಸುವಲ್ಲಿ ಶ್ರಮಿಸಿದರು.
