ಬಂಟ್ವಾಳ: ಸರಪಾಡಿ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ 4ನೇ ವರ್ಷದ ಕೊನೆ ದಿನದ ಸೇವೆಯಾಟ, ಪತ್ತನಾಜೆ ಪ್ರಯುಕ್ತ ಮಾವಿನಕಟ್ಟೆ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಬಾಚಕೆರೆ ಸಂಭ್ರಮ ಪುರಸ್ಕಾರ, ಬಾಚಕೆರೆ ಗೌರವ ಪುರಸ್ಕಾರ ಹಾಗೂ ಕ್ಷೇತ್ರದ ಭಕ್ತಿಗೀತೆಗಳ ಧ್ವನಿಸುರಳಿ ಬಿಡುಗಡೆ ಸಮಾರಂಭವು ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಅಧ್ಯಕ್ಷತೆಯಲ್ಲಿ ನಡೆಯಿತು. ಕ್ಷೇತ್ರವು ಊರಪರವೂರ ಭಕ್ತಾದಿಗಳ ಸಹಕಾರದಿಂದ ಅಭಿವೃದ್ಧಿಗೊಂಡಿದ್ದು ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಸಂಕಲ್ಪಿಸಲಾಗಿದೆ. ಇದಕ್ಕೆ ಸರ್ವಜನತೆಯ ಸಹಕಾರ ಅಗತ್ಯ ಎಂದು ದೇಜಪ್ಪ ಬಾಚಕೆರೆ ಹೇಳಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣರು ಕಾರ್ಯಕ್ರಮ ಉದ್ಘಾಟಿಸಿ, ಸಾಧಕರನ್ನು ಸನ್ಮಾನಿಸಿದರು. ಕ್ಷೇತ್ರವು ವಿವಿಧ ರಂಗಗಳ ಸಾಧಕರನ್ನು ಗುರುತಿಸುವುದರೊಂದಿಗೆ ಯಕ್ಷಗಾನ ಹಾಗೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಅಂಶವಾಗಿದೆ. ಈ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ತನ್ನಿಂದಾಗುವ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಮೋಹನದಾಸ ಸ್ವಾಮೀಜಿ ಹೇಳಿದರು.

ಕಮಲಾದೇವಿ ಪ್ರಸಾದ ಅಸ್ರಣ್ಣರು ಮಾತನಾಡಿ ಯಕ್ಷಗಾನ ಮನುಷ್ಯನನ್ನು ಸಂಸ್ಕಾರವಂತನನ್ನಾಗಿ, ಜ್ಞಾನವಂತನನ್ನಾಗಿ ರೂಪಿಸುತ್ತದೆ. ವಿದ್ಯೆ ಕಡಿಮೆ ಇದ್ದರೂ ತನ್ನ ವಿಚಾರಧಾರೆಗಳಿಂದ ಯಕ್ಷಗಾನ ಕಲಾವಿದರು ವಿದ್ವಾಂಸರಂತೆ ಮಾತನಾಡಬಲ್ಲವರಾಗಿದ್ದಾರೆ. ಯಾರನ್ನೂ ನೋಯಿಸದೇ ಎಲ್ಲರಲ್ಲೂ ದೇವರನ್ನು ಕಾಣುವ ಮನೋಭಾವನೆ ಬೆಳೆದಾಗ ಸ್ವಚ್ಚ ಸಮಾಜ ರೂಪುಗೊಳ್ಳುತ್ತದೆ ಎಂದರು.
ಜಿಲ್ಲಾ ಪಂಚಾಯತು ಸದಸ್ಯ ಬಿ.ಪದ್ಮಶೇಖರ ಜೈನ್, ತಾಲೂಕು ಪಂಚಾಯತು ಮಾಜಿ ಸದಸ್ಯ ಸಂಪತ್ ಕುಮಾರ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ಬಾಸ್ ಕುಂಡೇವು, ಮುಖ್ಯ ಶಿಕ್ಷಕಿ ಕಸ್ತೂರಿ, ಮೇಳದ ಪ್ರತಿನಿಧಿ ಶಶಿಧರ ಬಾಚಕೆರೆ ಉಪಸ್ಥಿತರಿದ್ದರು. ಮೇಳದ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಪ್ರ್ರಾಸ್ತಾವಿಕ ಮಾತುಗಳನ್ನಾಡಿದರು. ವಿಶ್ವನಾಥ ಪೂಜಾರಿ ಕುಂಟಾಲಪಲ್ಕೆ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ವರ್ಷಾವಧಿ ಉತ್ಸವ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ರೈ ಕೊಟ್ಟಿಂಜ ವಂದಿಸಿದರು.
ಪುರಸ್ಕಾರ: ದೈವರಾಧನೆಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅಣ್ಣು ಶೆಟ್ಟಿ ಮೂಡಬಿದ್ರೆ, ಅಣ್ಣಿ ಪೂಜಾರಿ ಸಿದ್ಧಕಟ್ಟೆ, ಲೋಕಯ ಸೇರಾ, ತನಿಯ ಕಲ್ಲೇರಿ, ಮೋನಪ್ಪ ಮಡಿವಾಳ, ಜರ್ನಾಧನ ಸಾಲ್ಯಾನ್ ಅವರಿಗೆ “ಬಾಚಕೆರೆ ಸಂಭ್ರಮ ಪುರಸ್ಕಾರ” ಹಾಗೂ ಚಂದ್ರಹಾಸ ಶೆಟ್ಟಿ ಹೊಳ್ಳಾರಗುತ್ತು, ರಮೇಶ ಕೊಕ್ರಾಡಿ, ಹರೀಶ್ ಸುರಕ್ಯ ಕನ್ಯಾಡಿ, ಡೀಕಯ ಪೂಜಾರಿ ಕಾಜಲಚ್ಚಿಲ್, ಅಶೋಕ ಅಜ್ಜೊಟ್ಟು, ಮಂಜಪ್ಪ ಬಾಂಬಿಲ, ರಮೇಶ ಅಜ್ಜೊಟ್ಟು ಅವರಿಗೆ “ಬಾಚಕೆರೆ ಗೌರವ ಪುರಸ್ಕಾರ” ಪ್ರದಾನ ಮಾಡಲಾಯಿತು.
ವರದಿ: ಗೋಪಾಲ ಅಂಚನ್

