ಬಂಟ್ವಾಳ: ಇಲ್ಲಿನ ಸಮುದಾಯ ಆರೋಗ್ಯ ಆಸ್ಪತ್ರೆಯಲ್ಲಿ ಫೋಸ್ಟ್ಮಾರ್ಟನ್ ಮಾಡಲು ಸಿಬ್ಬಂದಿ ಇಲ್ಲದೆ ಹಲವು ವರ್ಷಗಳೇ ಸಂದವು. ಹಲವು ಮನವಿ, ಹೋರಾಟದ ಬಳಿಕ ತರಬೇತಿ ಪಡೆದ ಒಬ್ಬ ಸಿಬ್ಬಂದಿಯನ್ನು ಇಲ್ಲಿಗೆ ನೇಮಕ ಮಾಡಲಾಗಿದೆಯಾದರೂ ಅವರು ಇನ್ನೂ ಕೆಲಸಕ್ಕೆ ಹಾಜರಾಗಿಲ್ಲ. ಬಂಟ್ವಾಳ ಸಮುದಾಯ ಆರೋಗ್ಯ ಆಸ್ಪತ್ರೆಯನ್ನು 100 ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ತಾಲೂಕಿನ ಯಾವುದೇ ಭಾಗದಲ್ಲಿ ಅವಘಡದಿಂದ ಮೃತಪಟ್ಟವರ ಮೃತದೇಹದ ಪೋಸ್ಟ್ಮಾರ್ಟಮ್ಗಾಗಿ ಇಲ್ಲಿಗೆ ತರಲಾಗುತ್ತದೆ. ಆದರೆ ಇಲ್ಲಿ ಪೋಸ್ಟ್ಮಾರ್ಟಮ್ಗೆಂದು ಖಾಯಂ ಸಿಬ್ಬಂದಿ ಇಲ್ಲದಿರುವುದರಿಂದ ಮೃತಪಟ್ಟವರ ಕುಟುಂಬಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಸಮುದಾಯ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಪೋಸ್ಟ್ಮಾರ್ಟಮ್ಗೆ ಸಿಬ್ಬಂದಿ ಇಲ್ಲದಿರುವುದರಿಂದ ತಾಲೂಕಿನ ದಲಿತ ಸಂಘರ್ಷ ಸಮಿತಿ ಸಹಿತ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಜಿಲ್ಲಾ, ತಾಲೂಕು ಆರೋಗ್ಯಾಧಿಕಾರಿ ಮತ್ತು ತಹಶೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ. ಪರಿಣಾಮ ಬಿ.ಸಿ.ರೋಡ್ ಕೈಕಂಬ ಸಂಚಾರಿ ಆಸ್ಪತ್ರೆಯ ಡಿ ಗ್ರೂಪ್ನ ನೌಕರ ಕೇಶವ ಎಂಬವರಿಗೆ ಯು.ಟಿ.ಖಾದರ್ ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪೋಸ್ಟ್ಮಾರ್ಟಮ್ ತರಬೇತಿ ನೀಡಲಾಗಿತ್ತು. ಪೋಸ್ಟ್ಮಾರ್ಟಮ್ ತರಬೇತಿ ಪಡೆದ ಬಳಿಕ ಕೇಶವ ಅವರನ್ನು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಪೋಸ್ಟ್ಮಾರ್ಟಮ್ ಸಿಬ್ಬಂದಿಯಾಗಿ ಬಂಟ್ವಾಳ ಸಮುದಾಯ ಆಸ್ಪತ್ರೆಗೆ ವರ್ಗಾಹಿಸಲಾಗಿದೆ. ವರ್ಗಾವಣೆಗೊಂಡು ಆರು ತಿಂಗಳಾದರೂ ಈವರೆಗೆ ಕೇಶವ ಅವರು ಸಮುದಾಯ ಆಸ್ಪತ್ರೆಯಲ್ಲಿ ಕೆಲಸಕ್ಕೆ ಹಾಜರಾಗದೆ ಕೈಕಂಬ ಸಂಚಾರಿ ಆಸ್ಪತ್ರೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ.
ಡಿಗ್ರೂಪ್ ನೌಕರ ಕೇಶವ ಬಂಟ್ವಾಳ ಸಮುದಾಯ ಆಸ್ಪತ್ರೆಗೆ ವರ್ಗಾವಣೆಗೊಂಡರೂ ಒಂದೇ ಒಂದು ದಿನ ಅಲ್ಲಿ ಕೆಲಸ ನಿರ್ವಹಿಸಿಲ್ಲ. ಆದರೆ ಅವರು ಬಂಟ್ವಾಳ ಸಮುದಾಯ ಆಸ್ಪತ್ರೆಯ ಹಾಜರಿ ಪುಸ್ತಕದಲ್ಲಿ ಕೆಲಸ ನಿರ್ವಹಿಸಿದ ಬಗ್ಗೆ ಸಹಿ ಹಾಕಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ತೆಗೆದ ದಾಖಲೆಯಲ್ಲಿ ತಿಳಿದು ಬಂದಿದೆ ಎಂದು ಬಂಟ್ವಾಳ ದಲಿತ ಸಂಘರ್ಷ ಸಮಿತಿ ಮುಖಂಡ ವಿಶ್ವನಾಥ ಚೆಂಡ್ತಿಮಾರ್ ತಿಳಿಸಿದ್ದಾರೆ.

ಬಂಟ್ವಾಳ ಸಮುದಾಯ ಆಸ್ಪತ್ರೆಯನ್ನು 100 ಬೆಡ್ನ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಇಲ್ಲಿ ಹಲವು ವರ್ಷದಿಂದ ಪೋಸ್ಟ್ಮಾರ್ಟಮ್ಗೆ ಸಿಬ್ಬಂದಿ ಇಲ್ಲ. ತಾಲೂಕಿನಲ್ಲಿ ಯಾರಾದರೂ ಅವಘಡದಿಂದ ಮೃತಪಟ್ಟರೆ ಅವರ ಪೋಸ್ಟ್ಮಾರ್ಟಮ್ಗಾಗಿ ಮಂಗಳೂರು, ಮೂಡಬಿದ್ರೆ, ಬಜ್ಪೆಯಿಂದ ಜನ ಕರೆಸಬೇಕಿದೆ. ಅವರು ದೂರದಿಂದ ಬರುವುದರಿಂದ ಬೆಳಗ್ಗೆ ಮೃತಪಟ್ಟವರ ಪೋಸ್ಟ್ಮಾರ್ಟಮ್ ಆಗುವಾಗ ಸಂಜೆಯಾಗುತ್ತದೆ. ಅಲ್ಲದೆ ಪೋಸ್ಟ್ಮಾರ್ಟಮ್ಗೆಂದು ಬಂದವರಿಗೆ 1500 ರೂಪಾಯಿ ಮೊದಲೇ ನೀಡಬೇಕು. ಇಲ್ಲದಿದ್ದರೆ ಪೋಸ್ಟ್ಮಾರ್ಟಮ್ ಮಾಡಲು ಅವರು ಒಪ್ಪುವುದಿಲ್ಲ. ಇದು ಇಲ್ಲಿ ಹಲವು ವರ್ಷದಿಂದ ನಡೆಯುತ್ತಿದೆ. ಮೃತಪಟ್ಟವರ ಕುಟುಂಬಸ್ಥರು ಬೇರೆ ದಾರಿ ಇಲ್ಲದೆ ಹಣ ನೀಡುತ್ತಾರೆ ಎಂದು ವಿಶ್ವನಾಥ್ ಚೆಂಡ್ತಿಮಾರ್ ಆರೋಪಿಸಿದ್ದಾರೆ. ಇನ್ನಾದರೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಇಲ್ಲಿಗೆ ವಾರ್ಗಾವಣೆಗೊಂಡ ಡಿ ಗ್ರೂಪ್ನ ಸಿಬ್ಬಂದಿಯಲ್ಲಿ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗುವಂತೆ ಮಾಡಬೇಕು. ಇಲ್ಲವಾದರೆ ಅವರನ್ನು ಕೆಲಸದಿಂದ ವಜಾಗೊಳಿಸಿ ಬೇರೆ ಸಿಬ್ಬಂದಿಯನ್ನು ಕೂಡಲೇ ನೇಮಕ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
