ಬಂಟ್ವಾಳ:ಭೂಮಿ ಕಳೆದುಕೊಂಡ ದಲಿತ ದಂಪತಿಗೆ ಪರಿಹಾರ ನೀಡಬೇಕೆಂದು 2001ರಲ್ಲಿ ಆದೇಶವಾಗಿದ್ದರೂ ಈವರೆಗೆ ಅವರಿಗೆ ಪರಿಹಾರ ನೀಡದೆ ಅಧಿಕಾರಿಗಳು ಷೋಷಣೆ ಮಾಡುತ್ತಿದ್ದಾರೆ ಎಂದು ತಾಲೂಕು ಮಟ್ಟದ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್ ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ಬಿ.ಸಿ.ರೋಡ್ ಎಸ್‍ಜಿಎಸ್‍ವೈ ಸಭಾಂಗಣದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜನಾರ್ದನ ಚೆಂಡ್ತಿಮಾರ್, ಮೂಡನಡುಗೋಡು ಗ್ರಾಮದ ಅಪ್ಪಿ ಪೆರ್ನೆ ದಲಿತ ದಂಪತಿಗೆ 1964ರಲ್ಲಿ ಮಂಜೂರಾದ 2 ಎಕರೆ ಭೂಮಿಯನ್ನು 1974ರಲ್ಲಿ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದಿತ್ತು. ಈ ಬಗ್ಗೆ ಸಲ್ಲಿಸಿದ್ದ ದೂರನ್ನು ವಿಚಾರಣೆ ನಡೆಸಿದ ಸಹಾಯಕ ಕಮಿಷನರ್ ದಲಿತ ದಂಪತಿಗೆ 4 ಎಕರೆ ಭೂಮಿ ಹಾಗೂ ಪರಿಹಾರ ನೀಡಬೇಕೆಂದು 2001ರಲ್ಲಿ ಆದೇಶಿದ್ದರು. ಆದರೆ 17 ವರ್ಷ ಕಳೆದರೂ ಭೂಮಿಯಾಗಲೇ ಪರಿಹಾರವಾಗಲೀ ಈವರೆಗೆ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.2

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಪುರಂದರ ಹೆಗ್ಡೆ ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ ಎಂದರು. ಡಿಸಿಗೆ ಪತ್ರ ಬರೆದು ಎರಡು ತಿಂಗಳು ಕಳೆದರೂ ಅಲ್ಲಿಂದ ಪ್ರತಿಕ್ರಿಯೆ ಬಂದಿಲ್ಲ ಎಂದರೆ ಏನು ಅರ್ಥ ಎಂದು ತರಾಟೆಗೆ ತೆಗೆದುಕೊಂಡ ಸಂದರ್ಭದಲ್ಲಿ ತಹಶೀಲ್ದಾರ್ ಮತ್ತು ಜನಾರ್ದನ ಚೆಂಡ್ತಿಮಾರ್ ನಡುವೆ ಕೆಲಹೊತ್ತು ವಾಕ್ಸಮರ ನಡೆಯಿತು. ಇದರಿಂದ ಇನ್ನಷ್ಟು ಆಕ್ರೋಶಗೊಂಡ ಚೆಂಡ್ತಿಮಾರ್ ನಮಗೆ ನ್ಯಾಯ ಬೇಡ. ತಹಶೀಲ್ದಾರ್ ಹೆಸರಿನಲ್ಲಿ ಭಿಕ್ಷೆ ಬೇಡುತ್ತೇವೆ. ದಲಿತರಿಗೆ ಸರಕಾರದಿಂದ ಮಂಜೂರಾದ ಭೂಮಿಯನ್ನು ಇಲಾಖೆಗಳಿಗೆ ಬಳಸುವ ಮೂಲಕ ವಿವಿಧ ಅಧಿಕಾರಿಗಳೇ ದಲಿತರಿಗೆ ದೌರ್ಜನ್ಯ ನಡೆಸುತ್ತಿದ್ದಾರೆ. ಚೆನ್ನೈತ್ತೋಡಿ ಗ್ರಾಮದ ಡಿಸಿ ಮನ್ನಾ ಜಾಗದಲ್ಲಿ ಶಾಲೆ ನಿರ್ಮಾಣ, ಗ್ರಾಪಂ ಕಚೇರಿಗಳನ್ನು ನಿರ್ಮಿಸಲಾಗಿದೆ ಎಂದ ಅವರು ಅಕ್ರಮ ಸಕ್ರಮ ಯೋಜನೆಯಲ್ಲಿ ಭೂಮಿ ರಹಿತ ದಲಿತರಿಗೆ 5 ಸೆಂಟ್ಸ್ ಭೂಮಿ ಕೊಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಆದರೆ ಎಕರೆಗಟ್ಟಲೆ ಜಮೀನು ಇರುವ ಶ್ರೀಮಂತರಿಗೆ ಎಕರೆಗಟ್ಟಲೆ ಭೂಮಿ ಮಂಜೂರಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಉಳ್ಳವನಿಗೆ ಭೂಮಿ ಕಾನೂನು ಜಾರಿಯಲ್ಲಿದೆ ಎಂದು ವ್ಯಂಗ್ಯ ಮಾಡಿದರು.4

ಪೋಸ್ಟ್‍ಮಾರ್ಟಮ್‍ಗೆ ಸಿಬ್ಬಂದಿ ಇಲ್ಲ: ಬಂಟ್ವಾಳ ಸಮುದಾಯ ಆಸ್ಪತ್ರೆಯಲ್ಲಿ ಪೋಸ್ಟ್‍ಮಾರ್ಟಮ್ ಮಾಡಲು ಸಿಬ್ಬಂದಿ ಇಲ್ಲದೆ ಹಲವು ವರ್ಷಗಳು ಕಳೆಯಿತು. ಹಲವು ಹೋರಾಟದ ಬಳಿಕ ತರಬೇತಿ ಪಡೆದಿರುವ ಸಂಚಯಗಿರಿ ಆಸ್ಪತ್ರೆಯಲ್ಲಿರುವ ಕೇಶವ ಎಂಬವರನ್ನು ಸಮುದಾಯ ಆಸ್ಪತ್ರೆಗೆ ವರ್ಗಾಹಿಸಲಾಗಿದೆ. ಡಿಸೆಂಬರ್‍ನಲ್ಲಿ ವರ್ಗಾವಣೆಯಾದರೂ ಅವರು ಇನ್ನೂ ಇಲ್ಲಿ ಕೆಲಸಕ್ಕೆ ಹಾಜರಾಗಿಲ್ಲ. ಆದರೆ ಅವರು ಸಮುದಾಯ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿರುವ ಬಗ್ಗೆ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿರುವುದು ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆಯಲ್ಲಿ ತಿಳಿದು ಬಂದಿದೆ ಎಂದು ಸಭೆಗೆ ತಿಳಿಸಿದ ದಲಿತ ಮುಖಂಡ ವಿಶ್ವನಾಥ ಚೆಂಡ್ತಿಮಾರ್, ಪ್ರಸ್ತುತ ಪೋಸ್ಟ್‍ಮಾರ್ಟಮ್ ಮಾಡಲು ಮೂಡಬಿದ್ರೆ, ಬಜ್ಪೆ, ಮಂಗಳೂರಿನಿಂದ ಬರುವವರಿಗೆ 1500 ರೂಪಾಯಿ ನೀಡಬೇಕಾಗಿದೆ. ಹಣ ನೀಡಿದ ಬಳಿಕವೇ ಪೋಸ್ಟ್‍ಮಾರ್ಟನ್ ಮಾಡುವುದರಿಂದ ಹಣ ನೀಡುವುದು ಅನಿವಾರ್ಯವಾಗಿದೆ ಎಂದು ಅವರು ಆರೋಪಿಸಿದರು.

3
ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು, ಸಂಚಯಗಿರಿ ಆಸ್ಪತ್ರೆಯಿಂದ ವರ್ಗಾವಣೆಗೊಂಡಿರುವ ಡಿ ಗ್ರೂಪ್ ನೌಕರ ಕೇಶವರನ್ನು ಕೂಡಲೇ ಸಮುದಾಯ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವಂತೆ ಮಾಡಲಾಗುವುದು. ಒಂದು ವೇಳೆ ಅವರು ಕೆಲಸಕ್ಕೆ ಹಾಜರಾಗದಿದ್ದಲ್ಲಿ ಅವರ ವೇತನ ತಡೆಹಿಡಿಯಲಾಗುವುದು ಎಂದು ಅವರು ಹೇಳಿ ಚರ್ಚೆಗೆ ತೆರೆ ಎಳೆದರು. ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾ ಮಿರಾಂದ ಸ್ವಾಗತಿಸಿದರು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಮುಖಂಡರು ಚರ್ಚೆಯಲ್ಲಿ ಭಾಗವಹಿಸಿದರು.

By Suddi9

Leave a Reply

Your email address will not be published. Required fields are marked *