ಬಂಟ್ವಾಳ: ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ರದ್ದು ಹಾಗೂ ಒಂದ ರಿಂದ ಐದನೇ ತರಗತಿವರೆಗೆ ಆಂಗ್ಲ ಭಾಷ ಕಲಿಕೆ ನಿಷೇದಿಸುವಂತೆ ಶಿಕ್ಷಣ ಇಲಾಖೆಯ ಆದೇಶದ ವಿರುದ್ದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಸೋಮವರ ಪ್ರತಿಭಟನೆ ನಡೆಯಿತು. ಪ್ರತಿಭಟನೆಗೆ ಶಿಕ್ಷಣ ಇಲಾಖೆಯ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಪ್ರತಿಭಟನಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಗುವ ಮೂಲಕ ರಸ್ತೆ ತಡೆ ಮಾಡಿದದರು. ಸುಮಾರು ಒಂದುವರೆ ತಾಸುಗಳ ಕಾಲ ನಿರಂತರವಾಗಿ ರಾ. ಹೆದ್ದಾರಿ ಬಳಿ ಕುಳಿತು ಶಾಂತವಾಗಿ ಪ್ರತಿಭಟನೆ ನಡೆಸಿದರೂ ಶಿಕ್ಷಣ ಇಲಾಖೆಯ ಯಾವುದೇ ಒಬ್ಬ ಅಧಿಕಾರಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸದಿರುವುದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಸೇರಿಂದತೆ ಆರು ನೂರಕ್ಕಿಂತಲೂ ಅಧಿಕ ಮಂದಿ ಪ್ರತಿಭಟನಕಾರರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ರಸ್ತೆ ತಡೆ ನಡೆಸಿದರು. ಇದರಿಂದಾಗಿ ಕೆಲ ಹೊತ್ತುಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‍ಗೆ ಪ್ರತಿಭಟನಕಾರರು ಮನವಿ ಸಲ್ಲಿಸಿ ಶಿಕ್ಷಣಾಧಿಕಾರಿ ನೀಡಿರುವ ಆದೇಶವನ್ನು ಹಿಂಪಡೆಯಲು ಒಂದುವಾರಗಳ ಗಡುವು ನೀಡಿ ತಪ್ಪಿದ್ದಲ್ಲಿ ಮತ್ತೆ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಲಾಯಿತು.
ಬೆಳಿಗ್ಗೆ 9.30ಕ್ಕೆ ಬಿ.ಸಿ.ರೋಡು ಜಂಕ್ಷನ್‍ನಲ್ಲಿ ದುರ್ಗಾ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಧರಣಿ ಆರಂಭಗೊಂಡಿತ್ತು. ಶಿಕ್ಷಣ ಇಲಾಖೆಯ ವಿರುದ್ದ ಧಿಕ್ಕಾರ ಕೂಗಿದ ಪ್ರತಿಭಟನಕಾರರು ರದ್ದತಿ ಆದೇಶವನ್ನು ವಾಪಸು ಪಡೆದು ಎಲ್‍ಕೆಜಿ, ಯುಕೆಜಿ ಹಾಗೂ ಆಂಗ್ಲ ಭಾಷ ಕಲಿಕೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು. ದಡ್ಡಕಲಾಡು ಶಾಲೆಯ ಎಲ್‍ಕೆಜಿ ಹಾಗೂ ಯುಕೆಜಿ ತರಗತಿಯ ಪುಟಾಣಿಗಳು ಅವರ ಪೋಷಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮಂಗಳೂರು ಮತ್ತಿತರ ಕಡೆಗಳಿಂದ ಆಗಮಿಸಿದ್ದ ಶಿಕ್ಷಣ ಪ್ರೇಮಿಗಳು, ರದ್ದತಿ ಆದೇಶ ಪತ್ರ ಪಡೆದ ಶಾಲೆಗಳ ಎಸ್‍ಡಿಎಂಸಿ ಸದಸ್ಯರು, ಜನಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಚಿಕ್ಕ ಮಕ್ಕಳನ್ನು ಹಿಡಿದುಕೊಂಡು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದೃಶ್ಯ ಕಂಡು ಬಂತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಮಾತನಾಡಿ ಶಿಕ್ಷಣ ಇಲಾಖೆ ಎಲ್‍ಕೆಜಿ, ಯುಕೆಜಿ ನಿಷೇಧಿಸಿರುವುದು ದುರಾದೃಷ್ಟಕರ. ಸರಕಾರ ಖಾಸಗಿ ಆಂಗ್ಲ ಮಾಧ್ಯ ಶಾಲೆಗಳ ಬೆನ್ನುತಟ್ಟುತ್ತಿದೆಯೇ? ಎನ್ನುವ ಬಲವಾದ ಸಂಶಯ ಕಾಡುತ್ತಿದೆ ಎಂದರು. ಶಿಕ್ಷಣ ಸಚಿವರು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆಯಲ್ಲಿ
ಪ್ರಾಥಮಿಕ ಶಿಕ್ಷಣ ನೀಡುಲಾಗುತ್ತದೆ ಎಂದು ಹೇಳುತ್ತಾರೆ, ಇಲ್ಲಿನ ಶಿಕ್ಷಣಾಧಿಕಾರಿ ಎಲ್‍ಕೆಜಿ, ಯುಕೆಜಿ ರದ್ದು ಮಾಡಲು ಹೇಳುತ್ತಾರೆ. ಸಚಿವರ ಮಾತಿಗೂ ಈ ಆದೇಶಕ್ಕೂ ಏನು ಸಂಬಂಧ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದರು.

ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ ಎಲ್‍ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆಯೇ ಅನುಮತಿ ನೀಡಿ ಇಂದು ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದೆ. ಸರಕಾರಿ ಶಾಲೆಯನ್ನು ಉಳಿಸಲು ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‍ನ ಸದಸ್ಯರು ತಮ್ಮ ಎಲ್ಲಾ ಕೆಲಸಗಳನ್ನು ಬಿಟ್ಟು ರಾತ್ರಿ ಹಗಲೆನ್ನದೆ ದುಡಿದಿದ್ದಾರೆ. ಆದರೆ ಈ ಹಂತದಲ್ಲಿ ರಾಜಕೀಯ ಒತ್ತಡಕ್ಕೆ ಮಣಿದು ಇಂತಹ ಆದೇಶ ನೀಡುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು. ಬಡವರು ಬಡವರಾಗಿಯೇ ಉಳಿಯಬೇಕು, ಅವರು ಆಂಗ್ಲ ಭಾಷೆ ಕಲಿಯಬಾರದು ಎನ್ನುವುದು ಸಮಾನ ಶಿಕ್ಷಣವೇ? ಎಲ್‍ಕೆಜಿ, ಯುಕೆಜಿ ಆರಂಭಿಸದ ಬಳಿಕ ಖಾಸಗಿ ಶಾಲೆಗಳಲ್ಲಿ ಮಕ್ಕಳ ಕೊರತೆ ಕಂಡು ಬಂದಿರುವ ಹಿನ್ನಲೆಯಲ್ಲಿ ಖಾಸಗಿ ವಿದ್ಯಾ ಸಂಸ್ಥೆಗಳು ಈ ಲಾಬಿ ನಡೆಸಿದೆ ಎಂದು ಆರೋಪಿಸಿದರು.
ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಪ್ರಗತಿಪರ ಕೃಷಿಕ ರಾಜೇಶ್‍ನಾೈಕ್ ಉಳಿಪಾಡಿಗುತ್ತು, ಪುರಸಭಾ ಸದಸ್ಯ ದೇವದಾಸ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ಜಿತೇಂದ್ರ ಕೊಟ್ಟಾರಿ, ಜೆಸಿಐ ಅಧ್ಯಕ್ಷ ಡಾ. ಬಾಲಕೃಷ್ಣ ಅಗ್ರಬೈಲು, ತಾ.ಪಂ.ಸದಸ್ಯ ಗಣೇಶ್ ಸುವರ್ಣ, ವಿಶ್ವ ಹಿಂದೂ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ನುಳಿಯಾಲುಗುತ್ತು, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷೆ ಸುಮಿತ್ರ ಯೋಗೀಶ್, ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಗೌಡ, ಸದಸ್ಯ ಪೂವಪ್ಪ ಮೆಂಡನ್, ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ತಾ.ಪಂ.ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್, ದಾಮೋದರ ನೆತ್ತರಕೆರೆ, ಜಿ.ಆನಂದ, ಕೇಶವ ಡಿ, ಮಚ್ಚೇಂದ್ರ ಸಾಲ್ಯಾನ್, ಪುರುಷೋತ್ತಮ ಸಾಲ್ಯಾನ್ ಶಂಭೂರು, ಶರತ್‍ಕುಮಾರ್ ಮತ್ತಿತರರು ಹಾಜರಿದ್ದರು. ಬಂಟ್ವಾಳ ನಗರ ಪೊಲೀಸ್ ಠಾಣೆ ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿದ್ದರು. ತಹಶೀಲ್ದಾರ್ ಪುರಂದರ ಹೆಗ್ಡೆ ಮನವಿ ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.

By Suddi9

Leave a Reply

Your email address will not be published. Required fields are marked *