ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ರಾಜ ರಸ್ತೆ ಕೈಕಂಬ ಮತ್ತು ಬಿ.ಸಿ.ರೋಡಿನ ಇಕ್ಕೆಲೆಗಳಲ್ಲಿ ಅಗೆದು ಅರ್ಧದಲ್ಲಿ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪೂರ್ತಿಗೊಳಿಸುವಂತೆ ಆಗ್ರಹಿಸಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ಗುರುವಾರ ಮನವಿ ಸಲ್ಲಿಸಿದ ಎಸ್‍ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ 15 ದಿನಗಳ ಗಡುವು ವಿಧಿಸಿದೆ.
ಕೈಕಂಬದಲ್ಲಿ ಬಸ್‍ಬೇ ಹಾಗೂ ಅಗಲೀಕರಣದ ನೆಪದಲ್ಲಿ ರಸ್ತೆಯ ಎರಡೂ ಬದಿಯನ್ನು ಅಗೆದು ಹಾಕಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ನು ಕೂಡಾ ಅಗೆದ ಹೊಂಡವನ್ನು ತುಂಬಿಸಿ ಸುಸ್ಥಿತಿಗೆ ತರುವ ಕೆಲಸ ಮಾಡಿರುವುದಿಲ್ಲ. ಪರಿಣಾಮ ಸಾರ್ವಜನಿಕರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಸರಿಸುಮಾರು ಒಂದು ವರ್ಷ ಸಮೀಪಿಸುತ್ತಿದೆ. ಬುಧವಾರ ಸುರಿದ ಮಳೆಗೆ ಇಲ್ಲಿನ ಅಂಗಡಿಗಳಿಗೆ ನೀರು ನುಗ್ಗಿ ಮತ್ತೊಂದು ಸಮಸ್ಯೆ ಉಂಟಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.IMAG2344

ಹಾಗೆಯೇ ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿ ಚರಂಡಿ ಕಾಮಗಾರಿಗಾಗಿ ಅಗೆದು ಹಾಕಲಾಗಿದ್ದು ಇದರ ಕಾಮಗಾರಿ ಕೂಡಾ ಆಮೆಗತಿಯಲ್ಲಿ ಸಾಗುತ್ತಿದ್ದು ಪಾದಾಚಾರಿಗಳು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಈ ಎರಡೂ ಕಾಮಗಾರಿಯನ್ನು 15 ದಿನಗಳ ಒಳಗಾಗಿ ಪೂರ್ಣಗೊಳಿಸದಿದ್ದಲ್ಲಿ ಎಸ್‍ಡಿಪಿಐ ಸಾರ್ವಜನಿಕರನ್ನು ಒಟ್ಟುಗೂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಕೆಲವು ಸಮಯದ ಹಿಂದೆ ಕೈಕಂಬದಲ್ಲಿ ಅಗೆದು ಹಾಕಲಾಗಿದ್ದ ರಸ್ತೆಯನ್ನು ಸುಸ್ಥಿತಿಗೆ ತಾರದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಸಂದರ್ಭದಲ್ಲಿ ತೆಗೆದ ಹೊಂಡಕ್ಕೆ ಮಣ್ಣು ತುಂಬಿಸಿದ್ದರೂ ಕಾಮಗಾರಿ ಇನ್ನೂ ಪೂರ್ತಿಗೊಂಡಿಲ್ಲ. ಇದೀಗ ಮಳೆಯಿಂದಾಗಿ ಮತ್ತೆ ಸಮಸ್ಯೆ ಉದ್ಭವಿಸಿದೆ.

By Suddi9

Leave a Reply

Your email address will not be published. Required fields are marked *