ಬಂಟ್ವಾಳ: ತಾಲೂಕಿನ ಅಮ್ಟೂರು ಗ್ರಾಮದ ಕಟ್ಟೆಮಾರು ಕುಟುಂಬದ ಆರಾಧನಾ ದೈವಗಳಾದ ಶ್ರೀ ಧೂಮಾವತಿ ನಾಗದೇವರು, ಚಾಮುಂಡಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಹಾಗೂ ತರವಾಡು ಮನೆಯ ಗೃಹ ಪ್ರವೇಶವೂ ವೇದಮೂರ್ತಿ ಪಳನೀರು ಶ್ರೀಪತಿ ಭಟ್ ಅವರ ನೇತೃತ್ವದಲ್ಲಿ ಮೇ 5ರಿಂದ 7ರವರಗೆ ನಡೆಯಲಿದೆ ಎಂದು ಜೀರ್ನೋಧರ ಸಮಿತಿಯ ಅಧ್ಯಕ್ಷ ಯೋಗೇಶ್ ಪೂಜಾರಿ ಕಡ್ತಿಲ ತಿಳಿಸಿದ್ದಾರೆ.
ಗುರುವಾರ ಸಂಜೆ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಕಲಶೋತ್ಸವದ ಈ ಸಂದರ್ಭದಲ್ಲಿ ಮೂರು ದಿನಗಳ ಕಾಲ ವೈದಿಕ ವಿಧಿ ವಿಧಾನಗಳ ಜೊತೆಗೆ ಧಾರ್ಮಿಕ ಹಾಗೂ ಸಾಂಸ್ಕೃ ತಿಕ ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಳ್ಳಲಾಗಿದೆ. ಭಜನೆ, ಲಲಿತ ಸಹಸ್ರ ನಾಮ ಪಠಣ ಹಾಗೂ ಮೇ 7ರಂದು ತರವಾಡು ಮನೆಯ ಗೃಹ ಪ್ರವೇಶ, ದೈವಗಳ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು.
ಹಿಂದಿನ ಸಂಪ್ರದಾಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೈವಸ್ಥಾನವನ್ನು ಕೆಂಪು ಕಲ್ಲಿನಲ್ಲಿ ನಿರ್ಮಿಸಿ ಅದರ ಮೇಲೆ ಮರದ ಛಾವಣಿಯನ್ನು ಹಾಕಲಾಗುತ್ತಿದೆ. ಹಾಗೆಯೇ ದೈವಗಳಿಗೆ ಸಾತ್ವಿಕ ಆಹಾರದ ಪರ್ವ ಸಂಪ್ರದಾಯವನ್ನು ಅಳವಡಿಸಿಕೊಂಡಿದ್ದೇವೆ. ನೆಟ್ಲದ ಶ್ರೀ ನಿಟಿಲಾಕ್ಷ ದೇವರ ಜಾತ್ರ ಸಂದರ್ಭದಲ್ಲಿ ಅವಭ್ರತ ಸ್ನಾನಕ್ಕೆ ತೆರಳುವಾಗ ಗದ್ದೆಯಲ್ಲಿ ವಿಶ್ರಾಂತಿ ಪಡೆದು ಮುಂದಕ್ಕೆ ಸಾಗುತ್ತಿದ್ದರು. ಕಾಲ ಕ್ರಮೇಣ ಆ ಸ್ಥಳದಲ್ಲಿ ಕಟ್ಟೆ ನಿರ್ಮಿಸಿ ಪೂಜಾ ಕೈಂಕರಿಯವನ್ನು ನಡೆಸುತ್ತಿದ್ದರಿಂದ ಈ ಪ್ರದೇಶವನ್ನು ಕಟ್ಟೆಮಾರು ಎಂದು ಕರೆಯಲಾಗುತ್ತಿದೆ ಎಂದರು.
ಅಮ್ಟೂರು ಗ್ರಾಮದ ಬಿಲ್ಲವ ಮನೆತನದ ಕುಟುಂಬಸ್ಥರು ವಿವಿಧ ಭಾಗಗಳಲ್ಲಿ ನೆಲೆಸಿದ್ದರು. ಇತ್ತೀಚೆಗೆ ಕುಟುಂಬಸ್ಥರು ಸೇರಿ ಅಷ್ಠಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಇದೀಗ ತರವಾಡು ಮನೆ ಸೇರಿದಂತೆ ದೈವಸ್ಥಾನವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಲೋಕಾನಂಧ ಕಲ್ಲಕಟ್ಟ, ಸಂದೀಪ್ ಬೆಳ್ತಂಗಡಿ, ಮೋಹನ್ ಕಟ್ಟೆಮಾರ್, ಜಯರಾಮ್ ಪೂಜಾರಿ, ಶಿವಪ್ಪ ಪೂಜಾರಿ ಉಪಸ್ಥಿತರಿದ್ದರು.

