ಮಂಗಳೂರು:ಪ್ರದರ್ಶನ ಕಾಣುವ ಹೆಚ್ಚಿನ ನಾಟಕ ಕೃತಿಗಳು ದಾಖಲಾಗದೆ ಇರುವುದರಿಂದ ಅವುಗಳು ಜನ ಮಾನಸದಿಂದ ದೂರ ಸರಿಯುತ್ತದೆ ಎಂದು ರಂಗ ತಜ್ಞ ಜಗನ್ ಪವಾರ್ ಬೇಕಲ್ ಹೇಳಿದರು.
ನಗರದ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಸಾಹಿತಿ ರಘು ಇಡ್ಕಿದು ರಚಿತ “ನಾಗಿ ಮತ್ತು ಇತರ ನಾಟಕ ಕೃತಿ”ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕರಾವಳಿ ರಂಗಭೂಮಿ ಬೆಳೆದಿದೆ. ಆದರೆ ಅನೇಕ ನಾಟಕ ಶಿಬಿರಗಳಲ್ಲಿ ದಾಖಲಾಗದ ನಾಟಕ ಕೃತಿಗಳು ಪ್ರದರ್ಶನ ಕಾಣುತ್ತದೆ. ನಿರ್ದೇಶಕನು ರಚಿತ ಕೃತಿಯ ಪ್ರದರ್ಶನಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ಹೊಸ ನಾಟಕ ರಚನೆಕಾರ ಮತ್ತು ನಾಟಕ ಬದುಕುತ್ತದೆ ಎಂದರು.

ಕೃತಿ ಪರಿಚಯ ಮಾಡಿದ ಗೋವಿಂದದಾಸ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ರಘು ಅವರ ಕೃತಿಗಳಲ್ಲಿ ಸಾಮಾಜಿಕ ಕಳಕಳಿ ಇದೆ. ಸಂವೇದನಯುಕ್ತ ಸೂಕ್ಷ್ಮ ಬರಹಗಳ ಮಕ್ಕಳ ನಾಟಕ ಕೃತಿ ಗಮನಸೆಳೆಯುತ್ತದೆ ಎಂದರು.
ನಂದಗೋಕುಲ ಪ್ರಕಾಶನ, ಅರೆಹೊಳೆ ಪ್ರತಿಷ್ಠಾನ ಮತ್ತು ಮಂಗಳೂರು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಕೃತಿಕಾರ ರಘು ಇಡ್ಕಿದುರನ್ನು ಸನ್ಮಾನಿಸಲಾಯಿತು.
ಉದಯವಾಣಿ ಉಪಸಂಪಾದಕ ಗಣೇಶ್ ಪ್ರಸಾದ್ ಪಾಂಡೇಲು ಅಧ್ಯಕ್ಷತೆ ವಹಿಸಿದ್ದರು. ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಸದಾಶಿವ ರಾವ್, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಾಲತಿ ಶೆಟ್ಟಿ ಮಾಣೂರು, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಸರಗೋಡು ಅಶೋಕ್ ಕುಮಾರ್, ಸಾಹಿತಿ ಸುಬ್ರಾಯ ಭಟ್, ಮಹೇಶ್ ಕುಮಾರ್ ಇದ್ದರು.
