ಬಂಟ್ವಾಳ : ಬಿ.ಮೂಡ ಗ್ರಾಮದ ಕಾಮಾಜೆಯ ರುಕ್ಮಿಣಿ ಭಂಡಾರಿ ಎಂಬವರ ಮನೆಯ ಆವರಣ ಗೋಡೆ ಕುಸಿದು ಬಿದ್ದ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ. ಮುಂಜಾನೆಯ ವೇಳೆ ಮಿಂಚು , ಸಿಡಿಲಿನ ಅಬ್ಬರದ ಜೊತೆಗೆ ಧಾರಕಾರ ಮಳೆ ಸುರಿದ ಪರಿಣಾಮವಾಗಿ ಇಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಲು ತೋಡಲಾದ ಹೊಂಡವನ್ನು ಸಮರ್ಪಕವಾಗಿ ಮುಚ್ಚದ ಕಾರಣ ಮಳೆ ನೀರು ಹರಿದು ಹೋಗದೆ ಅಲ್ಲಿಯೇ ನಿಂತಿದ್ದರಿಂದ ಮಣ್ಣು ಸಡಿಲಗೊಂಡು ಈ ತಡೆ ಗೋಡೆ ಕುಸಿತ ಉಂಟಾಗಲು ಕಾರಣವೆಂದು ದೂರಲಾಗಿದೆ. ಇದರಿಂದಾಗಿ ಸುಮಾರು 50,000 ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಮನೆಯೊಡತಿ ವೃದ್ಧೆಯಾಗಿದ್ದು ಅಂಗವಿಕಲ ಮಗಳನ್ನು ಹೊಂದಿದ್ದಾರೆ. ಆವರಣ ಗೋಡೆಯ ಕಲ್ಲುಗಳ ರಾಶಿ ಮನೆಯೆದುರೆ ರಾಶಿ ಬಿದ್ದಿದ್ದು ತಡೆಗೋಡೆಯನ್ನು ದುರಸ್ತಿಪಡಿಸುವುದೇ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಸುದ್ದಿ ತಿಳಿದ ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಪುರಸಭಾ ಸದಸ್ಯ ಭಾಸ್ಕರ ಟೈಲರ್ ಮತ್ತು ಊರಿನ ಮುಖಂಡರು ರುಕ್ಮೀಣಿ ಭಂಡಾರಿಯವರ ಮನೆಗೆ ಭೇಟಿ ನೀಡಿ ನೆರವಿನ ಭರವಸೆ ನೀಡಿದ್ದಾರೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯ 2ನೇ ಹಂತದ ಬೃಹತ್ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪ್ರಗತಿ ಹಂತದಲ್ಲಿದ್ದು ಪೈಪ್ ಲೈನ್ ಅಳವಡಿಕೆ ಕಾಮಗಾರಿಯು ಭರದಿಂದ ಸಾಗುತ್ತಿದೆ . ಮೈರಾನ್ಪಾದೆ-ಕಾಮಾಜೆಯಲ್ಲಿ ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆಯನ್ನು ಕೆಯುಡಬ್ಲೂ ಎಸ್ ಸಂಸ್ಥೆ ಅಗೆದು ಹಾಕಿದ್ದು ಪೈಪ್ ಲೈನ್ ಜೋಡಣೆÉಯ ಬಳಿಕ ಸಮರ್ಪಕವಾಘಿ ಮುಚ್ಚದ ಇರುವದರ ಪರಣಾಮ ರಸ್ತೆಯಿಡೀ ಕೆಸರುಮಯವಾಗಿದೆ , ಹಾಗೆಯೇ ಈ ರಸ್ತೆಯ ಡಾಮರು ಕೂಡಾ ಎದ್ದು ಹೋಗಿರುವುದರಿಂದ ಸಾರ್ವಜನಿಕರಿಗೆ ನಡೆದಾಡಲು ಅಸಾಧ್ಯವಾಗಿದೆ ವಾಹನ ಸಂಚಾರಕ್ಕೂ ತೊಡಕುಂಟಾಗಿದೆ. ಕಾಮಗಾರಿಯಿಂದ ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡುವವರು ಯಾರೆಂಬ ಯಕ್ಷ ಪ್ರಶ್ನೆ ಸ್ಥಳಿಯರನ್ನು ಕಾಡಿದೆ. ಶುಕ್ರವಾರ ಮುಂಜಾನೆ ಸುರಿದ ಮೊದಲ ಮಳೆಗೆ ಈ ರಸ್ತೆ ಕೆಸರಿನಿಂದ ತುಂಬಿ ಹೋಗಿದ್ದು ಇಲ್ಲಿನ ನಾಗರಿಕರು ಸಂಚಾರಕ್ಕೆ ಪರದಾಡಬೇಕಾಯಿತು . ಸುಮಾರು ಆರು ಮಿಲಿ ಮೀಟರ್ ನಷ್ಟು ಮಳೆ ಸುರಿದಿದ್ದು ತುಂಬೆ ಬಳಿ ನಡೆಯುತ್ತಿದ್ದ ಕಟೀಲು ಮೇಳದ ಯಕ್ಷಗಾನ ಪ್ರೇಕ್ಷಕರಿಗೆ ರಸಭಂಗವಾಯಿತು. ಮತ್ತೆ ಪರ್ಯಾಯ ವ್ಯವಸ್ಥೆ ಮಾಡಿ ಯಕ್ಷಗಾನವನ್ನು ಮುಂದುವರಿಸಲಾಯಿತು. ಕಳೆದ ಹಲವು ದಿನಗಳಿಂದ ಬಿಸಿಲಿನ ಧಗೆಯಿಂದ ಬಳಲುತ್ತಿದ್ದ ನಾಗರಿಕರಿಗೆ ಕೊಂಚ ರೀಲೀಫ್ ಸಿಕ್ಕಿತು.


