ಬಂಟ್ವಾಳ; ಸರ್ಕಾ ರಿ ಜಮೀನಿನಲ್ಲಿ ಜೋಪಡಿ ನಿರ್ಮಿಸಿದ್ದಾರೆಂದು ಆರೋಪಿಸಿ ಕಂದಾಯ ಇಲಾಖಾ ಅಧಿಕಾರಿಗಳು ಬಡ ದಂಪತಿಯ ಜೋಪಡಿಯನ್ನೇ ಕೆಡವಿ ಹಾಕಿದ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಲೊರೆಟ್ಟೋ ಪದವು ಸಮೀಪದ ಮಾದರಿಗುಡ್ಡೆಯ ಕಾಂಜಿಲಕೋಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ರಘು ಪೂಜಾರಿ-ಸೌಮ್ಯ ದಂಪತಿಯೇ ಜೋಪಡಿಯನ್ನು ಕಳೆದುಕೊಂಡ ನಿರ್ಗತಿಕರು.
ಈ ದಂಪತಿ ಕಳೆದ ಕೆಲವು ಸಮಯದ ಹಿಂದೆ ಕಾಂಜಿಲಕೋಡಿಯ ಸಕರ್ಾರಿ ಜಮೀನಿನಲ್ಲಿ ಜೋಪಡಿ ಕಟ್ಟಿಕೊಂಡು ವಾಸ್ತವ್ಯ ಹೊಂದಿದ್ದರು. ಆದರೆ ಈ ದಂಪತಿ ಸರ್ಕಾರಿ ಜಮೀನಿನನ್ನು ಅತಿಕ್ರಮಿಸಿದ್ದಾರೆಂಬ ಆರೋಪದಲ್ಲಿ ಕಂದಾಯನಿರೀಕ್ಷಕ ಸಾಧು ಹಾಗೂ ಬಂಟ್ವಾಳ ಗ್ರಾಮಕರಣಿಕ ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ರಘುಪೂಜಾರಿ ಹಾಗೂ ಸೌಮ್ಯ ದಂಪತಿ ಬಡವರಾಗಿದ್ದು, ಬಂಟ್ವಾಳದ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದಾರೆ. ಈ ದಂಪತಿ ಬುಧವಾರ ಕೆಲಸಕ್ಕೆ ತೆರಳಿದ್ದ ವೇಳೆ ಕಂದಾಯ ಅಧಿಕಾರಿಗಳು ಜೋಪಡಿಯನ್ನು ಕೆಡವಿಹಾಕಿದ್ದಾರೆ, ಸಂಜೆ ಕೆಲಸ ಮುಗಿಸಿವಾಪಾಸು ಬಂದಾಗಲಷ್ಟೇ ಜೋಪಡಿ ಕೆಡವಿರುವುದು ಗೊತ್ತಾಗಿದೆ. ಈ ಮಧ್ಯೆ ಬಡ ದಂಪತಿಯ ಜೋಪಡಿಯನ್ನು ಕೆಡವಿರುವ ಕಂದಾಯ ಇಲಾಖಾ ಅಧಿಕಾರಿಗಳ ಕ್ರಮದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯ ಯುವಕರ ತಂಡ ತಡರಾತ್ರಿಯೇ ಸದ್ರಿ ಸ್ಥಳದಲ್ಲಿ ಜೋಪಡಿಯನ್ನು ಮರು ನಿರ್ಮಿ ಸಿದ್ದಾರೆ. ಗುರುವಾರ ಬೆಳಿಗ್ಗೆ ಮತ್ತೆ ಸ್ಥಳಕ್ಕೆ ಬಂದ ಅಧಿಕಾರಿಗಳು ಜೋಪಡಿ ಕೆಡವಲು ಮುಂದಾದಾಗ ಸ್ಥಳೀಯರೇ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯವಾಗಿ ಇರುವ ಹಲವು ಅಕ್ರಮ ಜೋಪಡಿಗಳನ್ನು ತೆರವು ಗೊಳಿಸಿ ಬಳಿಕ ಇಲ್ಲಿಗೆ ಬನ್ನಿ ಎಂದು ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಫೋಟೋವನ್ನಷ್ಟೇ ತೆಗೆದು ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪುರಸಭಾ ಸದಸ್ಯ ಗೋವಿಂದ ಪ್ರಭು, ನಿಕಟಪೂರ್ವ ಪುರಸಭಾ ಅಧ್ಯಕ್ಷ ದಿನೇಶ್ ಭಂಡಾರಿ, ಬಿಜೆಪಿ ಮುಖಂಡ ಜಿ.ಆನಂದ ಮೊದಲಾದವರು ಬೇಟಿ ನೀಡಿ ಬಡಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ
