ಕಂಬಳ ಎಂದಾಕ್ಷಣ ತಟ್ಟನೆ ನೆನಪಾಗುವುದು ಕರಾವಳಿಯ ಜನರ ಜನಪ್ರಿಯ ಜಾನಪದ ಕ್ರೀಡೆಯೆಂದು. ಏನಪ್ಪಾ ಇದು ಅಂತೀರಾ..? ಕಂಬಳಕ್ಕೆ ವಿಶೇಷವಾಗಿ ಸಿದ್ಧಪಡಿಸಲಾದ ಬಲಿಷ್ಟ ಕೋಣಗಳನ್ನು ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ನಿರ್ದಿಷ್ಟ ಮಟ್ಟಕ್ಕೆ ನೀರನ್ನು ತುಂಬಿ ಅದರಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ.ಕಂಬಳ ವಿಶೇಷವಾಗಿ ಪ್ರಚಲಿತದಲ್ಲಿರುವುದು ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ. ಇದು ಈ ಭಾಗದಲ್ಲಿ ಇತಿಹಾಸ ಪ್ರಸಿದ್ಧವಾದ ಕ್ರೀಡೆಯಾಗಿದ್ದು, ಇದನ್ನು ಹಲವಾರು ತಲೆಮಾರುಗಳಿಂದ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಲಾಗುತ್ತಿದೆ

ವಿಶೇಷವಾಗಿ ಕರಾವಳಿಯ ರೈತರು ಇಲ್ಲಿನ ಪ್ರಮುಖ ಆಹಾರ ಬೆಳೆಯಾದ ಭತ್ತ್ತದ ಕೊಯ್ಲಿನ ನಂತರ ಮತ್ತು ಭತ್ತದ ಗದ್ದೆಯ ಉಳುಮೆಯ ನಂತರ ಬಿತ್ತನೆಯನ್ನು ನಡೆಸುವ ಪೂರ್ವದಲ್ಲಿ ಉಳುಮೆಯಲ್ಲಿ ಭಾಗವಹಿಸಿದ ಎತ್ತು ಅಥವಾ ಕೋಣಗಳನ್ನು ಮನೋರಂಜನೆಗಾಗಿ ಏರ್ಪಡಿಸುತ್ತಿದ್ದ ಕ್ರೀಡೆಯಾಗಿದೆ.ಹಾಗೂ ತುಳುನಾಡಿನಲ್ಲಿ ಭೂತಾರಾಧನೆಗೆ ಪ್ರಮುಖ ಪ್ರಾಶಸ್ತ್ಯವಿದ್ದು, ಹಳೆಯ ತಲೆಮಾರಿನ ಮನೆತನದ ಗುತ್ತಿನ ಮನೆಗಳ ಸುಪರ್ದಿಯಲ್ಲಿ ಇಂದಿಗೂ ಭೂತದ ಗದ್ದೆಗಳಿದ್ದು, ಈ ಗದ್ದೆಯ ಉಳುಮೆಯ ಅಂತ್ಯದಲ್ಲಿ ಉಳುಮೆಗೆ ಬಳಸಲಾದ ಕೋಣಗಳನ್ನು ಮತ್ತು ಎತ್ತುಗಳನ್ನು ಮನೋರಂಜನೆ ಮತ್ತು ಸಂಪ್ರದಾಯಕ್ಕಾಗಿ ಓಡಿಸುತ್ತಿದ್ದರು. ಈ ಪದ್ದತಿಯು ಇಂದು ಜನಪದ ಕ್ರೀಡೆಯಾಗಿ ಮಾರ್ಪಾಡುಗೊಂಡಿದ್ದು, ಕರಾವಳಿಯ ಬಲಿಷ್ಠ ಸಂಘಟನೆಯ ಸ್ವರೂಪದೊಂದಿಗೆ ಬೆಳೆದಿದೆ ಎಂದರೆ ತಪ್ಪಾಗಲಾರದು.ತುಳುನಾಡಿನೆಲ್ಲೆಡೆ ನಡೆಯುವ ಎಲ್ಲಾ ಕಂಬಳಗಳೂ ಜಿಲ್ಲಾ ಕಂಬಳ ಸಮಿತಿಯ ವ್ಯಾಪ್ತಿಯೊಳಗಡೆ ಬರುತ್ತಿದ್ದು ಇದರ ನಿರ್ದೇಶನದಂತೆಯೇ ಕಂಬಳಗಳನ್ನು ಆಯೋಜಿಸಲಾಗುತ್ತದೆ.ಒಂದು ಜೊತೆ ಕೋಣಗಳ ಕತ್ತಿಗೆ ನೊಗವನ್ನು ಕಟ್ಟಿ ಅವುಗಳನ್ನು ವೇಗವಾಗಿ ಗದ್ದೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಓಡಿಸುವ ಈ ಕ್ರೀಡೆಯಲ್ಲಿ ಕೋಣಗಳನ್ನು ಓಡಿಸುವಾತನೂ ಬಹುಮುಖ್ಯ ಪಾತ್ರವನ್ನು ವಹಿಸುತ್ತಾನೆ ಎಂದರೆ ತಪ್ಪಾಗಲಾರದು.
ಕಂಬಳದ ಹಿನ್ನೆಲೆ ಏನು..?
ಕೋಣಗಳ ಕಂಬಳವು ತುಳುನಾಡಿನ ಪ್ರತೀ ಮನೆ ಮನೆಗಳಲ್ಲೂ ಹಾಸು ಹೊಕ್ಕಾಗಿದ್ದು ಇದಕ್ಕೆ ಹಲವು ತಲೆಮಾರುಗಳ ಇತಿಹಾಸವೇ ಇದೆ. ಹಿಂದಿನ ಕಾಲದಲ್ಲಿ ಕಂಬಳವು ರಾಜರ ಮತ್ತು ವಿವಿಧ ರಾಜ ಮನೆತನಗಳ ವಿಶೇಷ ಬೆಂಬಲ ಹಾಗೂ ಪ್ರೋತ್ಸಾಹದೊಂದಿಗೆ ನಡೆಯುತ್ತಿದ್ದವು. ಬಯಲು ಸೀಮೆಯಲ್ಲಿ ಕೃಷಿ ಭೂಮಿಯ ಉಳುಮೆಗಾಗಿ ಸಾಮಾನ್ಯ ಎತ್ತುಗಳನ್ನು ಬಳಸುವುದು ಸರ್ವೇ ಸಾಮಾನ್ಯ. ಏಕೆಂದರೆ ಇಲ್ಲಿನ ಕೃಷಿ ಜಮೀನು ಉಳುಮೆಗೆ ಅಷ್ಟೊಂದು ಸವಾಲಾಗಿಲ್ಲ; ಆದರೆ ಕರಾವಳಿ ಕೃಷಿ ಜಮೀನು ವಿಭಿನ್ನವಾಗಿದ್ದು ಉಳುಮೆಗೆ ಅತ್ಯಂತ ಕಠಿಣ.ಈ ಕಾರಣದಿಂದಲೇ ಇಲ್ಲಿನ ಉಳುಮೆಗಾಗಿ ಬಲಿಷ್ಠವಾದ ಕೋಣಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಒಂದು ಊರು ಅಥವಾ ಹಳ್ಳಿಯಲ್ಲಿರುವ ಅಷ್ಟೂ ಕೋಣಗಳ ಪೈಕಿ ಅತ್ಯಂತ ಸಮರ್ಥ ಹಾಗೂ ಬಲಿಷ್ಠವಾದವುಗಳನ್ನು ಆಯ್ಕೆ ಮಾಡಿ ಅವುಗಳ ಮಧ್ಯೆ ನಿರ್ದಿಷ್ಟವಾದ ಗದ್ದೆಯಲ್ಲಿ ಓಟದ ಸ್ಪಧೆರ್Éಯನ್ನು ಏರ್ಪಡಿಸಿ ವಿಜೇತವಾದ ಕೋಣಗಳನ್ನು ಮತ್ತು ಮಾಲೀಕರನ್ನು ಸನ್ಮಾನಿಸುವುದರ ಹಿಂದೆ ಕೃಷಿಗೆ ಉತ್ತೇಜನ ನೀಡುವ ಎಲೆಮರೆಯ ಉದ್ದೇಶ ಮತ್ತು ಕೃಷಿಕರ ಕ್ರೀಡಾ ಮನೋಭಾವವಿರುವುದೂ ಸುಳ್ಳಲ್ಲ.
ಉಳುಮೆಗೆ ಬಳಸುವ ಕೋಣಗಳನ್ನು ಕೇವಲ ಉಳುಮೆಗಷ್ಟೇ ಬಳಸಿಕೊಳ್ಳದೇ ಅವುಗಳನ್ನು ಸಮರ್ಪಕವಾಗಿ ಸಾಕಿ ಸಲಹುವ ಇನ್ನೊಂದು ಮುಖ್ಯ ಉದ್ದೇಶವಿರುವುದೂ ಸ್ಪಷ್ಟ.ವರ್ಷದ ಪ್ರಥಮ ಬೆಳೆಯ ಕೊಯ್ಲು (ಕಟಾವು) ಮುಗಿದ ಕೂಡಲೇ ಮತ್ತು ಎರಡನೇ ಭತ್ತದ ಬೆಳೆಯ ಉಳುಮೆಯ ಕೆಲಸ ಮುಗಿದ ಕೂಡಲೇ ಈ ವಿಶೇಷ ಜನಪದ ಕ್ರೀಡೆಯನ್ನು ನಡೆಸಲಾಗುತ್ತದೆ.ನವೆಂಬರ್-ಡಿಸೆಂಬರ್‍ನ ಚಳಿಗಾಲದಲ್ಲಿ ಪ್ರಾರಂಭವಾಗುವ ಕಂಬಳವು ಬಿಸಿಲಿನ ಝಳ ಏರುವ ಮೊದಲೇ ಫೆಬ್ರವರಿ ಮಾರ್ಚ್ ತಿಂಗಳಲ್ಲಿಸಾಮಾನ್ಯವಾಗಿ ಮುಕ್ತಾಯಗೊಳ್ಳುತ್ತದೆ.ಕಂಬಳ ಸ್ಪಧೆರ್Éಯು ಕರಾವಳಿ ರೈತರನ್ನು ಕೃಷಿಯೆಡೆಗೆ ಇನ್ನಷ್ಟು ಉತ್ತೇಜನ ನೀಡುವ ಮತ್ತು ಮನೋರಂಜನೆಯನ್ನು ಒದಗಿಸುವ ಕ್ರೀಡೆಯಾಗಿ ಬೆಳೆದಿರುವುದೂ ವಿಶೇಷ. ಕಂಬಳದ ಕೋಣಗಳನ್ನು ಖರೀದಿಸುವುದು, ಅವುಗಳ ಲಾಲನೆ ಪಾಲನೆ ಮಾಡುವುದು, ಸ್ಪರ್ದಿಸುವುದು ಮತ್ತು ವಿಜಯಿಯಾಗುವುದು ರೈತರಿಗೆ ಮತ್ತು ಕೋಣಗಳ ಮಾಲೀಕರಿಗೆ ಪ್ರತಿಷ್ಠೆಯ ಸಂಕೇತವಾಗಿಯೂ ಬೆಳೆದಿರುವುದು ವಿಶೇಷ.
ಕಂಬಳದ ಗದ್ದೆ ಹೇಗಿರುತ್ತದೆ..?
ಭತ್ತದ ಕಟಾವು ನಡೆದ ನಂತರ ಖಾಲಿ ಗದ್ದೆ ಅಥವಾ ಬಳಸದೇ ಬಿಟ್ಟ ಗದ್ದೆಗಳಲ್ಲಿ (ಹಡೀಲು ಗದ್ದೆ ತುಳುವಿನಲ್ಲಿ, ಪಡೀಲ್ ಕಂಡ) ಕಂಬಳವನ್ನು ಬಹುವಾಗಿ ಏರ್ಪಡಿಸಲಾಗುತ್ತಿತ್ತು.ಆದರೆ ಇಂದು ಕಂಬಳಕ್ಕಾಗಿಯೇ ವಿಶೇಷವಾಗಿ ಕಂಬಳದ ಗದ್ದೆಗಳನ್ನು ಶಾಶ್ವತವಾಗಿ ನಿರ್ಮಿಸಲಾಗಿರುತ್ತದೆ.ಕಂಬಳದ ಅಂಕಣ ಆಯಾ ಕಂಬಳದ ಸ್ವರೂಪಕ್ಕನುಗುಣವಾಗಿ ನೂರೈವತ್ತರಿಂದ ಇನ್ನೂರೈವತ್ತು ಮೀಟರ್ ದೂರವಿರುತ್ತದೆ. ಹದ ಮಾಡಲಾದ ಗದ್ದೆಯ ಮಣ್ಣಿಗೆ ಅದು ಜಿಗುಟಾಗದಿರುವಂತೆ ಸೂಕ್ತ ಪ್ರಮಾಣದಲ್ಲಿ ಮರಳನ್ನು ಸೇರಿಸಿ ಅದರ ಮೇಲೆ ನಿಗದಿತ ಪ್ರಮಾಣದ ನೀರನ್ನು ತುಂಬಿಸಿ ಸಿದ್ಧ ಪಡಿಸಿದ ಗದ್ದೆಯೇ ಕಂಬಳದ ಅಂಕಣ. ಸಾಮಾನ್ಯವಾಗಿ ಕಂಬಳದ ಅಂಕಣ ಭೂಮಿಯ ಮಟ್ಟಕ್ಕಿಂತ 4 ರಿಂದ 5 ಅಡಿಗಳಷ್ಟು ಆಳದಲ್ಲಿದ್ದು, ಕಂಬಳದ ಓಟಪ್ರಾರಂಭವಾಗುವ ಪ್ರದೇಶ ಇಳಿಜಾರಾಗಿದ್ದು ಕೋಣಗಳನ್ನು ಸಲೀಸಾಗಿ ಅಂಕಣದೊಳಗೆ ಇಳಿಸಲು ಸಾಧ್ಯವಾಗುವಂತೆ ನಿರ್ಮಿಸಲಾಗಿರುತ್ತದೆ. ಕಂಬಳದ ಆರಂಭದ ಮತ್ತು ಅಂತ್ಯದ ಗೆರೆಗಳನ್ನು ಮಾವಿನ ತೋರಣವನ್ನು ಕಟ್ಟುವ ಮೂಲಕ ನಿರ್ಮಿಸಲಾಗಿರುತ್ತದೆ.ಕಂಬಳ ಅಂಕಣ ಮುಕ್ತಾಯದ ಭಾಗವನ್ನು ಸ್ವಲ್ಪ ಏರು ರೀತಿಯಲ್ಲಿ ನಿರ್ಮಿಸುತ್ತಿದ್ದು, ಈ ಪ್ರದೇಶವನ್ನು “ಮಂಜೋಟ್ಟಿ” ಎಂದು ಕರೆಯಲಾಗುತ್ತದೆ.ಏಕೆಂದರೆ ಅತ್ಯಂತ ವೇಗವಾಗಿ ಓಡಿಕೊಂಡು ಬರುವ ಬಲಿಷ್ಠಕೋಣಗಳು ಎತ್ತರಪ್ರದೇಶವಾದ ಮಂಜೋಟ್ಟಿ ತಲುಪುತ್ತಿದ್ದಂತೆ ವೇಗವನ್ನು ಕಳೆದುಕೊಳ್ಳುತ್ತವೆ. ಇಲ್ಲಿ ಹಲವಾರು ಯುವಕರು ನಿಂತಿದ್ದು ಆ ಕೋಣಗಳನ್ನು ಹಿಡಿದು ನಿಂಯತ್ರಿಸುತ್ತಾರೆ. ಕಂಬಳದ ಗದ್ದೆಯಲ್ಲಿ ಎರಡು ವಿಧಗಳಿದ್ದು ಅವುಗಳೆಂದರೆ ‘ಒಂಟಿ ಗದ್ದೆ ಕಂಬಳ’ ಮತ್ತು ‘ಜೋಡಿ ಗದ್ದೆ ಕಂಬಳ’(ಇದನ್ನೇ ಜೋಡು ಕೆರೆ ಕಂಬಳ ಎಂದೂ ಕರೆಯುತ್ತಾರೆ)
ಒಂಟಿ ಗದ್ದೆ ಕಂಬಳ:
ಒಂಟಿಗದ್ದೆ ಕಂಬಳ ವಿಶಿಷ್ಟವಾದ ‘ಕೆನೆ ಹಲಗೆ’ ಓಟವನ್ನು ನಡೆಸುವಾಗ ಬಳಸಲಾಗುತ್ತದೆ.ಇಲ್ಲಿ ಎರಡು ಜೊತೆ ಕೋಣಗಳ ಪೈಪೋಟಿಗೆ ಬದಲಾಗಿ ಕೇವಲ ಒಂದೇ ಜೊತೆ ಕೋಣಗಳನ್ನು ಓಡಿಸಲಾಗುತ್ತದೆ. ಆದರೆ ಕಂಬಳದ ಅಂಕಣದುದ್ದಕ್ಕೂ ಅಲ್ಲಲ್ಲಿ ವಿವಿಧ ಅಳತೆಯ ಎತ್ತರದಲ್ಲಿ ಅಲ್ಲಲ್ಲಿ ಕಟ್ಟಲಾದ ಬಿಳಿಯ ಪರದೆಗಳ(ಇವುಗಳನ್ನು ಪತಾಕೆ ಎನ್ನುತ್ತಾರೆ) ಪೈಕಿ ಅತೀ ಹೆಚ್ಚು ಎತ್ತರದ ಪರದೆಗೆ ವೇಗವಾಗಿ ಓಡುವ ಕೋಣಗಳ ಕೆನೆ ಹಲಗೆಯಿಂದ ಕೆಸರು ಚಿಮ್ಮಿಸುವ ಕೋಣಗಳನ್ನು ವಿಜೇತವೆಂದು ಘೋಷಿಸಲಾಗುತ್ತದೆ.
ಜೋಡು ಕೆರೆ ಕಂಬಳ:
ಈ ವಿಧಧ ಕಂಬಳದಲ್ಲಿ ಅಕ್ಕ ಪಕ್ಕದಲ್ಲಿ ಎರಡು ಕಂಬಳದ ಅಂಕಣಗಳಿದ್ದು ಏಕಕಾಲಕ್ಕೆ ಎರಡೂ ಅಂಕಣಗಳಲ್ಲಿ ತಲಾ ಒಂದೊಂದು ಜೊತೆ ಕೋಣಗಳನ್ನು ಓಡಿಸಿ ಅತ್ಯಂತ ವೇಗವಾಗಿ ಮಂಜೋಟ್ಟಿ ತಲುಪುವ ಕೋಣಗಳನ್ನು ವಿಜೇತವೆಂದು ಘೋಷಿಸಲಾಗುತ್ತದೆ.
ಹೆಚ್ಚಾಗಿ ಜೋಡು ಕೆರೆ ಕಂಬಳದ ಗದ್ದೆಗಳಿಗೆ ಜಾನಪದ ಪುರಾಣದಲ್ಲಿ ಸಿಗುವ ಅವಳಿ ಜವಳಿ ಅಥವಾ ಜೋಡುನುಡಿ ಪದಗಳನ್ನಿಡುವುದು ಸಾಮಾನ್ಯವಾಗಿದೆ. ಕರಾವಳಿಯ ಪ್ರಮುಖ ಜೋಡು ಕೆರೆ ಕಂಬಳದ ಗದ್ದೆಗಳೆಂದರೆ:
ಸೂರ್ಯ-ಚಂದ್ರ ಕಂಬಳ (ಬಾರಾಡಿ ಬೀಡು-ವೇಣೂರಿನಲ್ಲಿ ಮತ್ತು ಶಿರ್ವದಲ್ಲಿ, ಬಂಗಾಡಿಯ ಕೊಲ್ಲಿಯಲ್ಲಿ, ತಲಪಾಡಿಯಲ್ಲಿ ನಡೆಸಲಾಗುತ್ತದೆ)
ನೇತ್ರಾವತಿ-ಫಲ್ಗುಣಿಕಂಬಳ (ಪಿಲಿಕುಳದಲ್ಲಿ)
ಜಯ-ವಿಜಯಕಂಬಳ (ಕಾರ್ಕಳದ ಈದು ಮತ್ತು ಜಪ್ಪಿನಮೊಗ್ರು)
ಲವ-ಕುಶಕಂಬಳ(ಕಾರ್ಕಳದ ಮೀಯ್ಯಾರು)
ಮೂಡು-ಪಡುಕಂಬಳ(ಮುಲ್ಕಿ ಮತ್ತು ಕಟಪಾಡಿ)
ಮೂಡೂರು-ಪಡೂರುಕಂಬಳ(ಬಂಟ್ವಾಲದ ಕಾವಳ ಕಟ್ಟೆ)
ಮತ್ಸೇಂದ್ರನಾಥ-ಗೋರಕನಾಥಕಂಬಳ(ಮಂಗಳೂರಿನ ಕದ್ರಿ)
ಕೋಟಿ-ಚೆನ್ನಯ್ಯಕಂಬಳ(ಮೂಡಬಿದ್ರೆ ಪುತ್ತೂರು)
ಕಾಂತಬಾರೆ-ಬೂದಬಾರೆಕಂಬಳ (ಐಕಳ)
ವಿಜಯ-ವಿಕ್ರಮ ಕಂಬಳ (ಉಪ್ಪಿನಂಗಡಿಯ ನೇತ್ರಾವತಿ ನದಿತಟ)
ಹೇಗಿರುತ್ತವೆ ಕಂಬಳದ ಕೋಣಗಳು:
ಬೇಕಾಬಿಟ್ಟಿ ಕೋಣಗಳನ್ನು ಕಂಬಳದಲ್ಲಿ ಓಡಿಸಲು ಸಾಧ್ಯವಿಲ್ಲವಾಗಿದ್ದು, ಅವುಗಳನ್ನು ಆಯ್ಕೆ ಮಾಡುವಾಗಲೂ ಬಹಳ ಎಚ್ಚರಿಕೆವಹಿಲಾಗುತ್ತದೆ.ಉತ್ತಮ ತಳಿಯ ಮತ್ತು ಆರೋಗ್ಯವಂತ ಎಳೆ ವಯಸ್ಸಿನ ಕೋಣಗಳನ್ನು ಲಕ್ಷಗಟ್ಟಲೆ ಮೊತ್ತಕ್ಕೆ ಖರೀದಿಸಲಾಗುತ್ತದೆ.ಖರೀದಿ ಪ್ರಕ್ರಿಯೆಯು ಬಹಳಷ್ಟು ಅನುಭವಿಗಳ ಸಮ್ಮುಖದಲ್ಲೇ ನಡೆಯುತ್ತದೆ.ಖರೀದಿಯ ನಂತರ ಇವುಗಳ ಆರೈಕೆಯಂತೂ ರಾಜ ಮರ್ಯಾದೆಯಿಂದ ನಡೆಯುತ್ತದೆ.ಅವುಗಳ ಆರೈಕೆಗಾಗಿಯೇ ಒಬ್ಬ ನಿರ್ದಿಷ್ಟ ಅನುಭವಿ ಕೆಲಸಗಾರನನ್ನು ಆಯ್ಕೆ ಮಾಡಲಾಗುತ್ತದೆ.ಇವುಗಳನ್ನು ವಿಶೇಷ ಕೊಟ್ಟಿಗೆಯಲ್ಲಿ ಕಟ್ಟಿ ಅವುಗಳಿಗೆ ಎ.ಸಿ ವ್ಯವಸ್ಥೆಯನ್ನು ಮಾಡಿರುವ ಅದೆಷ್ಟೋ ಕಂಬಳ ಪ್ರಿಯ ಕುಟುಂಬಗಳನ್ನು ತುಳುನಾಡಿನಲ್ಲಿ ಗುರುತಿಸಬಹುದು.ಕೋಣಗಳು ಹೆಚ್ಚಾಗಿ ನೀರಲ್ಲಿರಲು ಇಷ್ಟ ಪಡುವುದರಿಂದ ಕೋಣಗಳಿಗಾಗಿಯೆ ವಿಶೇಷ ಈಜು ಕೊಳಗಳನ್ನು ನಿರ್ಮಿಸಿದ ಮನೆತನಗಳೂ ಇವೆ. ಇಲ್ಲಿ ಈ ಕೋಣಗಳನ್ನು ಮನೆಯ ಮಕ್ಕಳಂತೆ ಆರೈಕೆ ಮಾಡಲಾಗುತ್ತದೆ.ಇವುಗಳ ಕಾಳಜಿ ಹೇಗಿರುತ್ತದೆ ಎಂದರೆ ಕೋಣಗಳ ಮಾಲೀಕ ಮತ್ತು ಆರೈಕೆದಾರ ಹಾಗೂ ಓಡಿಸುವವನ ಹೊರತಾಗಿ ಉಳಿದವರ್ಯಾರೂ ಓಟದ ಕೋಣಗಳನ್ನು ಮುಟ್ಟಲೂ ಅವಕಾಶವನ್ನು ನೀಡುವುದಿಲ್ಲ.
ಇಂತಹ ಕೋಣಗಳನ್ನು ಓಟಕ್ಕೆ ಬೇಕಾದ ತಯಾರಿಯೊಂದಿಗೆ ತರಬೇತಿಯನ್ನು ನೀಡಿ ಪಂದ್ಯಕ್ಕೆ ಸಿದ್ಧಪಡಿಸುವುದರ ಹಿಂದೆಯೂ ಬದ್ಧತೆ ಮತ್ತು ತಾಳ್ಮೆ ಬಹಳ ಮುಖ್ಯವಾಗಿರುತ್ತದೆ.(ಅದೆಷ್ಟೋ ಬಾರಿ ಕೋಣಗಳು ಒದೆಯುವ ಹಾಗೂ ತಿವಿಯುವ ಸಂಭವವೂ ಇರುತ್ತದೆ.)ಕೋಣಗಳನ್ನು ಪಂದ್ಯಕ್ಕೆ ತಯಾರು ಮಾಡುವ ಸವಾಲು ಮಾಲೀಕನಿಗೆ ಒಂದೆಡೆಯಾದರೆ ಇವುಗಳನ್ನು ಓಡಿಸುವ ಆರೋಗ್ಯವಂತ ಹಾಗೂ ಸದೃಢ ಯುವಕರ ಆಯ್ಕೆ ಇನ್ನೊಂದೆಡೆ.ಕೋಣಗಳ ಓಟದ ವೇಗಕ್ಕೆ ಸಮಾನವಾಗಿ ನೀರು ಕೆಸರು ತುಂಬಿದ ಗದ್ದೆಯಲ್ಲಿ ಓಡುವುದು ಸಾಮಾನ್ಯದ ಮಾತಲ್ಲ. ಇಂದು ಕರಾವಳಿ ಕೇವಲ ಬೆರಳೆಣಿಕೆಯಷ್ಟೇ ಮಂದಿ ಕಂಬಳದ ಗದ್ದೆಯಲ್ಲಿ ಕೋಣಗಳೊಂದಿಗೆ ಓಡುವ ಓಟಗಾರರಿದ್ದಾರೆ.
ಕಂಬಳದ ಕೋಣಗಳ ಮತ್ತು ಓಟಗಾರರ ನಿರ್ವಹಣೆ ಮಾಲೀಕರಿಗೆ ಬಲು ಖರ್ಚಿನ ಬಾಬ್ತು ಆಗಿದ್ದರೂ ಈ ಕ್ರೀಡೆ ಇಂದುಪ್ರತಿಷ್ಠೆಯ ಪ್ರಶ್ನೆಯಾಗಿ ಬೆಳೆದಿದೆ.ಓಟದ ಕೋಣಗಳನ್ನು ನಿತ್ಯ ತಣ್ಣೀರೀನಲ್ಲಿ ಸ್ನಾನ ಮಾಡಿಸಿ ಎಣ್ಣೆ ಮಸಾಜ್ ಮಾಡಲಾಗುತ್ತದೆ.ಗುಣಮಟ್ಟದ ಹಸಿರು ಮತ್ತು ಒಣ ಹುಲ್ಲನ್ನು ಹಾಗೂ ಬೇಯಿಸಿದ ಹುರುಳಿಯನ್ನು ಇವುಗಳಿಗೆ ನೀಡಲಾಗುತ್ತದೆ.ಕಂಬಳಕ್ಕೆ ಯೋಗ್ಯ ಕೋಣಗಳ ದರ ಮರುಕಟ್ಟೆಯಲ್ಲಿ ಸುಮಾರು ಹತ್ತರಿಂದ ಇಪ್ಪತ್ತು ಲಕ್ಷದವರೆಗೂ ಇದೆ ಎನ್ನುತ್ತಾರೆ ಹಿರಿಯ ಕಂಬಳ ತಜ್ಞರು.ಇಷ್ಟು ದೊಡ್ಡ ಮೊತ್ತವನ್ನು ನೀಡಿಯೂ ಕೋಣಗಳನ್ನು ಖರೀದಿಸುತ್ತಾರೆಂದರೆ ಕಂಬಳದ ಕ್ರೇಝ್ ಕರಾವಳಿಯಲ್ಲಿ ಎಷ್ಟಿದೆಯೆಂದು ತಿಳಿಯಬಹುದು.
ಕಂಬಳದಲ್ಲಿರುವ ವಿವಿಧ ರೀತಿಯ ಸ್ಪರ್ಧೆಗಳು:
ಕಂಬಳ ವಿಶೇಷವಾಗಿ ಎರಡು ಕೋಣಗಳನ್ನು ಅಕ್ಕಪಕ್ಕ ನಿಲ್ಲಿಸಿ ಅವುಗಳ ಕುತ್ತಿಗೆಗೆ ನೊಗವನ್ನು ಕಟ್ಟಿ ಓಡಿಸುವಾತನೂ ಜತೆ ಸೇರಿದರೆ ಒಂದು ಜೋಡಿ ಸ್ಪರ್ಧಿಗಳೆಂದು ಪರಿಗಣಿಸಲಾಗುತ್ತದೆ. ಹೀಗೆ ಸಾಮಾನ್ಯವಾಗಿ ಎರಡು ಜೋಡಿಗಳ ಮಧ್ಯೆ ಸ್ಪರ್ಧೆ ನಡೆಯುತ್ತಿದ್ದು, ಇಂತಹ ಸ್ಪರ್ಧೆಯಲ್ಲಿ ನೂರಾರು ಜೊತೆ ಕೋಣಗಳು ಮತ್ತು ಸ್ಪರ್ಧಿಗಳು ಭಾಗವಹಿಸುತ್ತಾರೆ.ಕಂಬಳದಲ್ಲಿ ವಿವಿಧ ರೀತಿಯ ಸ್ಪರ್ಧೆಗಳಿದ್ದು, ಅವುಗಳೆಂದರೆ
ಹಗ್ಗದ ಓಟ: ಈ ಪ್ರಕಾರದ ಸ್ಪರ್ಧೆಯಲ್ಲಿ ಎರಡು ಕೋಣಗಳನ್ನು ಅಕ್ಕಪಕ್ಕ ನಿಲ್ಲಿಸಿ ಅವುಗಳ ಕತ್ತಿಗೆ ನೊಗವನ್ನು ಕಟ್ಟಲಾಗುತ್ತದೆ, ನೊಗಕ್ಕೆ ಹಗ್ಗವನ್ನು ಕಟ್ಟಿ, ಈ ಹಗ್ಗವನ್ನು ಹಿಡಿದು ಕೋಣಗಳನ್ನು ಓಡಿಸಲಾಗುತ್ತದೆ.
ನೇಗಿಲು ಓಟ: ಇದರಲ್ಲಿ ಅಕ್ಕಪಕ್ಕ ನಿಲ್ಲಿಸಲಾದ ಕೋಣಗಳ ಕತ್ತಿಗೆ ನೊಗವನ್ನು ಕಟ್ಟಿ ನೊಗಕ್ಕೆ ಉದ್ದನೆಯ ದಂಡವನ್ನು ಕಟ್ಟಿ, ದಂಡಕ್ಕೆ ಸಣ್ಣ ನೇಗಿಲಿನಾಕಾರದ ಮರದ ತುಂಡನ್ನು ಜೋಡಿಸಿ ಕೋಣಗಳನ್ನು ಓಡಿಸಲಾಗುತ್ತದೆ.
ಅಡ್ಡ ಹಲಗೆ: ನೊಗದ ಮಧ್ಯೆ ಉದ್ದನೆಯ ದಂಡವನ್ನು ಜೋಡಿಸಿ, ದಂಡಕ್ಕೆ ಹಲಗೆಯನ್ನು ಜೋಡಿಸಿ, ಹಲಗೆಯ ಮೇಲೆ ಕೋಣ ಓಡಿಸುವಾತ ನಿಂತು ಕೋಣಗಳನ್ನು ಓಡಿಸುವಿಕೆ.(ಸಾಮಾನ್ಯವಾಗಿ ಗದ್ದೆಯಲ್ಲಿ ಉಳುಮೆ ಮಾಡಿದ ಮಣ್ಣನ್ನು ಸಮತಟ್ಟು ಮಾಡಲು ಬಳಸುತ್ತಾರೆ.)
ಕೆನೆ ಹಲಗೆ: ಇದೊಂದು ವಿಶಿಷ್ಟ ಪ್ರಕಾರದ ಓಟದ ಪದ್ಧತಿಯಾಗಿದ್ದು, ಕೋಣಗಳಿಗೆ ಕಟ್ಟಲಾದ ನೊಗಕ್ಕೆ ಕೆನೆಹಲಗೆಯನ್ನು ಕಟ್ಟಿ ಅದರ ಅದರ ಮೇಲೆ ಓಡಿಸುವಾತ ತನ್ನ ಒಂದು ಕಾಲನ್ನಿಟ್ಟು ಕೆನೆ ಹಲಗೆಯಿಂದ ಮೇಲಕ್ಕೆ ಕಟ್ಟಲಾಗಿರುವ ವಿವಿಧ ಎತ್ತರದ ಪತಾಕೆಗಳಿಗೆ ಕೆಸರನ್ನು ಚಿಮ್ಮಿಸುವ ಸ್ಪರ್ಧೆಯಾಗಿರುತ್ತದೆ.
ಮೇಲಿನ ಮೂರೂ ಪ್ರಕಾರದ ಹಗ್ಗ, ನೇಗಿಲು, ಕೆನೆಹಲಗೆ ಪ್ರಕಾರದ ಓಟಗಳಲ್ಲಿ ಕೋಣಗಳ ಮತ್ತು ಓಟಗಾರರ ಓಟದ ವೇಗಕ್ಕೆ ಪ್ರಮುಖ ಪ್ರಾಶಸ್ತ್ಯವಿದ್ದು, ಯಾವ ಜೋಡಿ ಅತ್ಯಂತ ವೇಗವಾಗಿ ಮತ್ತು ಮೊದಲಾಗಿ ಓಟ ಮುಗಿಸುತ್ತಾರೋ ಅವರೇ ವಿಜೇತರಾಗುತ್ತಾರೆ. ಆದರೆ ಕೆನೆಹಲಗೆ ವಿಭಿನ್ನ, ಏಕೆಂದರೆ ಇಲ್ಲಿ ಕಂಬಳದ ಗದ್ದೆಯ ಮೇಲ್ಬಾಗದಲ್ಲಿ ವಿವಿಧ ಎತ್ತರದಲ್ಲಿ ಕಟ್ಟಲಾದ ಪತಾಕೆಗಳ ಪೈಕಿ ಅತ್ಯಂತ ಎತ್ತರದ ಪತಾಕೆಗೆ ಯಾವ ಜೋಡಿ ನೀರನ್ನು ಚಿಮ್ಮಿಸುತ್ತದೆಯೋ ಅದನ್ನು ವಿಜೇತ ಜೋಡಿಯೆಂದು ಘೋಷಿಸಲಾಗುತ್ತದೆ. ಕಂಬಳದ ಭಾಷೆಯಲ್ಲಿ ಈ ಎತ್ತರವನ್ನು ಕೋಲು ಎಂದು ಕರೆಯುತ್ತಾರೆ.ಸಾಮಾನ್ಯವಾಗಿ ಇದು 6.5ಕೋಲು ಎತ್ತರದಿಂದ ಆರಂಭವಾಗಿ 8.5 ಕೋಲು, 9.5 ಕೋಲು, 10 ಕೋಲು ಹೀಗೆ ವಿವಿಧ ಎತ್ತರಗಳಿಗೆ ಪತಾಕೆಗಳನ್ನು ಕಟ್ಟುತ್ತಾರೆ.(ಒಂದು ಕೋಲು ಅಂದರೆ 2.5 ಅಡಿ ಎಂದರ್ಥ)ಕಂಬಳದಲ್ಲಿ ಎರಡು ಹಿರಿಯ ಮತ್ತು ಕಿರಿಯ ಎಂಬ ಎರಡು ವಿಭಾಗಗಳಿರುತ್ತದೆ.ಕೋಣಗಳ ವಯಸ್ಸಿನ ಆಧಾರದಲ್ಲಿ ಅವುಗಳನ್ನು ಹಿರಿಯ ಮತ್ತು ಕಿರಿಯ ಎಂದು ಕಂಬಳ ಆಯೋಜಕರು ವರ್ಗೀಕರಿಸುತ್ತಾರೆ.ಕೋಣಗಳ ಆಯಸ್ಸನ್ನು ಅವುಗಳ ಹಲ್ಲು ಮತ್ತು ಉದುರಿದ ಹಲ್ಲನ್ನು ಆಧರಿಸಿ ನಿರ್ಧರಿಸಲಾಗುತ್ತದೆ.(ತುಳು ಭಾಷೆಯಲ್ಲಿ ಕೋಣಗಳ ‘ಪರು’ವನ್ನು ಲೆಕ್ಕ ಹಾಕಲಾಗುತ್ತದೆ.ಪರು ಎಂದರೆ ಹಲ್ಲು ಎಂದರ್ಥ)
ಸ್ಪರ್ದೆಯಲ್ಲಿ ವಿಜೇತವಾದ ಜೋಡಿಗೆ ವಿವಿದ ರೀತಿಯ ಪಾರಿತೋಷಕಗಳನ್ನು ನೀಡಲಾಗುತ್ತದೆ.ಇವುಗಳು ಚಿನ್ನದ ಪದಕ, (5ಪವನು, 2.5 ಪವನು ಮತ್ತಿ 1 ಪವನು ಈ ರೀತಿ ಪಂದ್ಯಕ್ಕನುಗುಣವಾಗಿ) ಟ್ರೋಫಿಯೊಂದಿಗೆ ದೊಡ್ಡ ಮೊತ್ತದ ನಗದು ಪುರಸ್ಕಾರವನ್ನೂ ನೀಡಲಾಗುತ್ತದೆ.(ಪ್ರಶಸ್ತಿ ಮೊತ್ತ 5 ರಿಂದ 10 ಲಕ್ಷದವರೆಗೂ ಇರುತ್ತದೆ.)ಇದರ ಜೊತೆಗೆ ಕೋಣಗಳನ್ನು ಓಡಿಸಿದ ಓಟಗಾರನ್ನು ಸನ್ಮಾನಿಸಿ ವಿಶೇಷ ಬಹುಮಾನವನ್ನು ನೀಡುವ ಪದ್ದತಿಯೂ ಕಂಬಳದಲ್ಲಿದೆ.
ಕಂಬಳದ ರೋಚಕತೆ ಹೀಗಿರುತ್ತದೆ:
ಸಾಮಾನ್ಯವಾಗಿ ಕಂಬಳವು ಶನಿವಾರ ಮತ್ತು ಭಾನುವಾರದಂದು ನಡೆಯುವ ಪರಿಪಾಠವಿದ್ದು, ಇದಕ್ಕಾಗಿ ಸುಮಾರು ಹದಿನೈದು ದಿನ ಮುಂಚಿತವಾಗಿಯೇ ಕಂಬಳದ ಗದ್ದೆಯ ತಯಾರಿ, ಚಪ್ಪರ ಹಾಕುವಿಕೆ, ವೇದಿಕೆ ಮತ್ತಿತರ ಕೆಲಸ ಕಾರ್ಯಗಳು ಪ್ರಾರಂಭವಾಗುತ್ತದೆ.ನಿರ್ಧರಿತ ದಿನಾಂಕದಂದು ಉದ್ಘಾಟನೆಯೊಂದಿಗೆ ಕಂಬಳ ಪ್ರಾರಂಭವಾಗುತ್ತದೆ.ಒಂದು ಕಂಬಳದಲ್ಲಿ ಸುಮಾರು ಇನ್ನೂರಕ್ಕಿಂತಲೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸುತ್ತವೆ. ಕಂಬಳದ ಗದ್ದೆ ಒಂಟಿಯೊ ಅಥವಾ ಜೋಡಿಯೋ ಎಂಬುವುದರ ಮೇಲೆ ಕಂಬಳದ ನಿಯಮಾವಳಿಗಳು ನಿರ್ಧಾರವಾಗುತ್ತದೆ.ಇದರಲ್ಲಿ ಸಾಮಾನ್ಯವಾಗಿ ಲೀಗ್ ಹಂತ, ಸೆಮಿಫೈನಲ್ ಮತ್ತು ಫೈನಲ್ ರೀತಿ ಇದ್ದು, ಜೋಡುಕೆರೆ ಕಂಬಳದಲ್ಲಿ ಎರಡೆರಡು ಜೊಡಿಗಳನ್ನು ಓಡಿಸಿ ವಿಜಯಿಯಾದವುಗಳ ನಡುವೆ ಮತ್ತೆ ಸ್ಪರ್ದೆ ಏರ್ಪಡಿಸಿ ಅಂತಿಮ ವಿಜೇತ ಜೋಡಿಯನ್ನು ನಿರ್ಧರಿಸಲಾಗುತ್ತದೆ.
ಕಂಬಳ ಅರಂಭವಾಗುತ್ತಿದ್ದಂತೆ ಓಟ ಆರಂಭದ ಸ್ಥಳದಲ್ಲಿ ಕೋಣಗಳನ್ನು ಗದ್ದೆಗೆ ಇಳಿಸಿ ಪ್ರಾರಂಭದ ತೋರಣದ ಕೆಳಗೆ ನಿಲ್ಲಿಸಲಾಗುತ್ತದೆ. ಕೋಣಗಳನ್ನು ಓಟಕ್ಕೆ ಸಮರ್ಪಕವಾಗಿ ನಿಲ್ಲಿಸಿ ಅಣಿಗೊಳಿಸುವುದೇ ಒಂದು ವಿಶೇಷ ಕಸರತ್ತು. ಹಠಮಾರಿ ಕೋಣಗಳು ಅದೆಷ್ಟೋ ಬಾರಿ ಓಟಕ್ಕೆ ಅಣಿಯಾಗದೇ ಮುಖ ತಿರುಗಿಸಿಬಿಡುತ್ತವೆ. ಇವುಗಳನ್ನು ಓಡಿಸುವಾತ ಮತ್ತು ಸಹಾಯಕರು ಸೇರಿ ಎರಡೂ ಅಂಕಣಗಳಲ್ಲಿ ಅಣಿಗೊಳೊಸುತ್ತಿದ್ದಂತೆ ಕೆಂಪು ಬಾವುಟ ತೋರಿ ಓಟವನ್ನು ಪ್ರಾರಂಭಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಓಡಿಸುವಾತ ಕೋಣಗಳ ಬೆನ್ನಿಗೆ ಛಡಿಯೇಟು ನೀಡುತ್ತಾನೆ. ಛಡಿಯೇಟು, ಓಡಿಸುವಾತನ ಪ್ರೋತ್ಸಾಹದ ಕೇಕೆ ಮತ್ತು ಪ್ರೇಕ್ಷಕರ ಹರ್ಷೋದ್ಗಾರಗಳಿಂದ ರೊಚ್ಚಿಗೇಳುವ ಕೋಣಗಳು ಎರಡರಿಂದ ಮೂರು ನಿಮಿಷದಲ್ಲಿ ನೂರೈವತ್ತರಿಂದ ಇನ್ನೂರೈವತ್ತು ಮೀಟರ್ ದೂರದ ಅಂತಿಮ ತೋರಣವನ್ನು ದಾಟಿ ಮಂಜೋಟ್ಟಿಯನ್ನು ತಲುಪಿರುತ್ತವೆ. ಮಂಜೋಟ್ಟಿಯನ್ನು ತಲುಪಿದ ನಂತರ ಕೋಣಗಳಿಗೆ ಯಾವುದೇ ಕಾರಣಕ್ಕೂ ಹೊಡೆಯಬಾರದೆಂಬ ನಿಯಮವೂ ಇದೆ. ಈ ವೇಳೆಗೆ ಓಟದ ಫಲಿತಾಂಶ ಪ್ರಕಟಗೊಂಡು ದಾಖಲೀಕರಣಗೊಳ್ಳುತ್ತದೆ.ಇಂದಿನ ದಿನಗಳಲ್ಲಿ ಓಟವು ಅತ್ಯಂತ ನಿಕಟ ಪೈಪೋಟಿಯಿಂದ ಕೂಡಿದ್ದು, ಫಲಿತಾಂಶ ನಿರ್ಧರಿಸಲು ಕ್ಯಾಮರಾ ತಂತ್ರಜ್ಞಾನವನ್ನೂ ಬಳಸಿಕೊಳ್ಳಲಾಗುತ್ತಿದೆ.
ಕಂಬಳವು ಬೆಳಗ್ಗಿನ ಹೊತ್ತು ಪ್ರಾರಂಭವಾಗಿ ಆದಿನ ರಾತ್ರಿಯಿಡೀ ನಡೆದು ಮಾರನೆಯ ದಿನ ಸಂಜೆಯ ವೇಳೆಗೆ ಕಂಬಳದ ಅಂತಿಮ ಫಲಿತಾಂಶ ಹೊರಬೀಳುವುದು ವಿಶೇಷವಾಗಿದೆ. ಕಂಬಳವು ಹಗಲು ನೈಜ ಬೆಳಕಿನಲ್ಲಿ ನಡೆದರೆ ರಾತ್ರಿಯ ಹೊತ್ತು ಪ್ರಕಾಶಮಾನವಾದ ಫ್ಲಡ್‍ಲೈಟ್ ಅಡಿಯಲ್ಲಿ ನಡೆಯುವುದನ್ನು ನೋಡುವುದೇ ಅದ್ಭುತ ಅನುಭವ. ಕಂಬಳಕ್ಕೆ ಆಗಮಿಸುವ ಕೋಣಗಳನ್ನು ವಿಶೆಷವಾಗಿ ಅಲಂಕರಿಸಿದ ಲಾರಿಯಲ್ಲಿ ತಂದು ಅವುಗಳನ್ನು ಕಂಬಳದ ಅಂಕಣಕ್ಕೆ ಇಳಿಸುವಾಗ ಚೆಂಡೆ, ಡೋಲು ಮತ್ತು ವಾಲಗಗಳೊಂದಿಗೆ ಭರ್ಜರಿಯಾಗಿ ಸ್ವಾಗತಿಸಲಾಗುತ್ತದೆ. ಕಂಬಳ ಗದ್ದೆಯ ಇಕ್ಕೆಲಗಳಲ್ಲಿ ಓಡಾಡುವ ನಾಗರಬೆತ್ತ ಹಿಡಿದ ಕೋಣಗಳ ಮಾಲೀಕರು, ಕಟುಮಸ್ತಾದ ಓಟಗಾರರು, ಮತ್ತು ಸಹಾಯಕರು ಪ್ರೇಕ್ಷಕರ ಕೇಂದ್ರ ಬಿಂದುಗಳಾಗಿರುತ್ತಾರೆ.
ಕೊನೆಯಲ್ಲಿ ಅಂತಿಮ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವೇದಿಕೆಯ ವಿಶೆಷ ಅತಿಥಿಗಳಿಂದ ಬಹುಮಾನ ವಿತರಣೆ ನಡೆಯುತ್ತದೆ.ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಕೋಣಗಳ ಮಾಲೀಕರಿಗೆ ಶಾಲು ಹೊದೆಸಿ ಸನ್ಮಾನಿಸಿ, ಟ್ರೊಫಿ ಮತ್ತು ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ.ಕೋಣಗಳನ್ನು ಓಡಿಸಿದ ಓಟಗಾರರಿಗೂ ಬಹುಮಾನ ನೀಡಲಾಗುತ್ತದೆ.ಪ್ರತೀ ವರ್ಷದ ನವೆಂಬರ್ ತಿಂಗಳಿನಲ್ಲಿ ಆ ವರ್ಷ ನಡೆಯುವ ವಿವಿಧ ಕಂಬಳಗಳ ದಿನಾಂಕಗಳನ್ನು‘ಜಿಲ್ಲಾ ಕಂಬಳ ಸಮಿತಿ’ಯು ಘೋಷಿಸುತ್ತದೆ, ಅದರ ಪ್ರಕಾರವೇ ಎಲ್ಲಾ ಕಂಬಳಗಳು ನಡೆಯುತ್ತವೆ.
ಕಂಬಳ ಪ್ರಾಣಿ ಹಿಂಸೆಯೇ?
ಕಂಬಳದ ಮೂಲಕ ಪ್ರಾಣಿಹಿಂಸೆ ಮಾಡಲಾಗುತ್ತದೆಯೇ ಎಂದು ಕೆಳಿದರೆ ಕೆಲವು ಬುದ್ಧಿಜೀವಿಗಳು ಹೌದೆನ್ನುತ್ತಾರೆ.ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ ಅದೇನೆಂದರೆ ಇಲ್ಲಿ ಕಂಬಳದ ಕೋಣಗಳನ್ನು ಎಲ್ಲೂ ಪ್ರ್ರಾಣಿಗಳಂತೆ ನೋಡಲಾಗುವುದೇ ಇಲ್ಲ. ಬದಲಾಗಿ ಅವುಗಳನ್ನು ಮನುಷ್ಯರಂತೆಯೇ ವಿಶೇಷ ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ.ಇವುಗಳ ಆರೈಕೆ ಮತ್ತು ಆಹಾರ ಪದ್ದತಿಯಲ್ಲಂತೂ ಮಾಲೀಕರು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಇವುಗಳ ದೈನಂದಿನ ನಿರ್ವಹಣೆಗೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ.
ಕೋಣಗಳು, ಮಾಲೀಕ ಮತ್ತು ಓಡಿಸುವಾತನ ಮಧ್ಯೆ ಅದಾಗಲೇ ಅವಿನಾಭಾವ ಬಾಂಧವ್ಯ ಬೆಳೆದಿರುವುದರಿಂದ ಕಂಬಳದ ಸಂದರ್ಭದಲ್ಲಿ ಕೋಣಗಳನ್ನು ರೊಚ್ಚಿಗೆಬ್ಬಿಸಲಷ್ಟೇ ಹೊಡೆಯುತ್ತಾರೆಯೇ ವಿನಃ ಹಿಂಸಿಸುವ ಉದ್ದೇಶದಿಂದಲ್ಲ ಎನ್ನುತ್ತಾರೆ ಹಿರಿಯ ಕಂಬಳ ಓಟಗಾರರು.ಇನ್ನೂ ಕೆಲವು ಪರಿಣತ ಓಟಗಾರರು ಒಂದೇಟೂ ಕೋಣಗಳಿಗೆ ಹೊಡೆಯದೆಯೇ ತಾಂತ್ರಿಕತೆಯೊಂದಿಗೆ ಅತ್ಯಂತ ವೇಗವಾಗಿ ಕೋಣಗಳನ್ನು ಜಯದೊಂದಿಗೆ ಮಂಜೋಟ್ಟಿ ಸೇರಿ ಬಿಡುತ್ತಾರೆ.ಒಟ್ಟಿನಲ್ಲಿ ಕಂಬಳ ಎನ್ನುವುದು ಜನಪದ ಕ್ರೀಡೆಯೊಂದಿಗೆ ಜಾನುವಾರುಗಳೊಂದಿಗಿನ ಬಾಂಧವ್ಯವನ್ನು ಬೆಸೆಯುವ ಕೊಂಡಿಯಾಗಿಯೂ ಬೆಳೆದಿರುವುದೂ ಉತ್ತಮ ಅಂಶವಾಗಿದೆ.ಜಲ್ಲಿಕಟ್ಟು ಕ್ರೀಡೆಗೆ ಹೊಲಿಸಿದಾಗ ಕಂಬಳದಲ್ಲಿ ಪ್ರಾಣಿಹಿಂಸೆ ಇಲ್ಲವೆಂದೇ ಹೇಳಬಹುದು. ಒಟ್ಟಾರೆಯಾಗಿ ತಲೆತಲಾಂತರಗಳಿಂದ ನಡೆದು ಬಂದ ಪಾರಂಪರಿಕ ಕ್ರೀಡೆ ಕಂಬಳದಲ್ಲಿ ಕೋಣಗಳ ಕಾಳಜಿಗೆ ಇನ್ನಷ್ಟು ಆದ್ಯತೆಯನ್ನು ನೀಡುವ ಮೂಲಕ ಮತ್ತು ಓಟದ ಪ್ರಾರಂಭದಲ್ಲಿ ಕೋಣಗಳಿಗೆ ಹೊಡೆಯದೇ ಓಡಿಸುವ ಮೂಲಕ ಈ ಕ್ರೀಡೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬಹುದಾಗಿದೆ.
ಸಂತೋಷ್ ರಾವ್.ಪೆರ್ಮುಡ
ದೂ: 9742884160
*******




