ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳದ 48 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೋಟರಿ ಕ್ಲಬ್ ಬಂಟ್ವಾಳ ಟೌನ್ ಎಂಬ ಹೆಸರಿನಲ್ಲಿ ಹೊಸ ಕ್ಲಬ್ ಮಾ. 26ರಂದು ಅಸ್ತಿತ್ವಕ್ಕೆ ಬರಲಿದೆ ಎಂದು ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಬಿ.ರಿತೇಶ್ ಬಾಳಿಯ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಬಂಟ್ವಾಳ ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಸ್ಥಾಪಕಾಧ್ಯಕ್ಷರನ್ನಾಗಿ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ ಅವರನ್ನು ಆಯ್ಕೆ ಮಾಡಲಾಗಿದ್ದು ಇವರ ನೇತೃತ್ವದ ಪದಾಧಿಕಾರಿಗಳ ತಂಡದ ಪದಗ್ರಹಣವು ಅಂದು ಸಂಜೆ 6 ಗಂಟೆಗೆ ಬಂಟವಾಳದ ಬಂಟರ ಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಈ ಹೊಸ ಕ್ಲಬ್ ಸ್ಥಾಪನೆಗೆ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯಿಂದಲೂ ಅನುಮತಿ ದೊರೆತಿದೆ. ನೂತನ ರೋಟರಿ ಕ್ಲಬ್ ಟೌನ್ ಸಂಸ್ಥೆಗೆ ಈಗಾಗಲೇ 66 ಮಂದಿ ಸ್ಥಾಪಕ ಸದಸ್ಯರಾಗಿ ಸೇರ್ಪಡೆಯಾಗಿದ್ದಾರೆ ಎಂದ ಅವರು ಇದು ರೋಟರಿ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲೇ ಇಷ್ಟು ಮಂದಿ ಸ್ಥಾಪಕ ಸದಸ್ಯರಾಗುವುದು ರೋಟರಿ ಕ್ಲಬ್ನ ಇತಿಹಾಸದಲ್ಲೇ ಪ್ರಥಮವಾಗಿದೆ. ಈ ನೂತನ ಕ್ಲಬ್ ಮಾತೃ ಸಂಸ್ಥೆಯ ಕಾರ್ಯವೈಖರಿ ಸೇವಾ ನೀತಿಯಂತೆ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳಲಿದೆ ಎಂದು ವಿವರಿಸಿದರು.
ಪದಗ್ರಹಣ ಸಮಾರಂಭದಲ್ಲಿ ರೋಟರಿ ಜಿಲ್ಲೆ 3181ರ ಗವರ್ನರ್ ಡಾ. ಆರ್.ಎಸ್.ನಾಗಾರ್ಜುನ ಭಾಗವಹಿಸಿ ನೂತನ ಕ್ಲಬನ್ನು ಉದ್ಘಾಟಿಸಲಿದ್ದಾರೆ. ರೋ.ಜಿಲ್ಲೆಯ ಸದಸ್ಯತ್ವ ಅಭಿವೃದ್ಧಿಯ ಚೇರ್ಮಾನ್ ಶೇಖರ್ ಶೆಟ್ಟಿ, ಹೊಸ ಕ್ಲಬ್ ನಿರ್ಮಾಣ ಚೇರ್ಮಾನ್ ಪ್ರಕಾಶ್ ಕಾರಂತ, ವಲಯ 4ರ ಸಹಾಯಕ ಗವರ್ನರ್ ಸಂತೋಷ್ ಶೆಟ್ಟಿ ಎಸ್. ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೋ.ಕ್ಲಬ್ ಕಾರ್ಯದರ್ಶಿ ಮುಹಮ್ಮದ್ ವಳವೂರು, ನಿಕಟಪೂರ್ವ ಅಧ್ಯಕ್ಷ ಕರುಣಾಕರ ರೈ, ನಿಯೋಜಿತ ಅಧ್ಯಕ್ಷ ಸಂಜೀವ ಪೂಜಾರಿ, ಕಾರ್ಯದರ್ಶಿ ನಾರಾಯಣ ಹೆಗ್ಡೆ, ಟೌನ್ ಕ್ಲಬ್ ನಿಯೋಜಿತ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.
