ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಬಳಿಯ ಓಡದ ಕರಿಯದಲ್ಲಿ ಫಲ್ಗುಣಿ ನದಿಯಲ್ಲಿ ಯಂತ್ರದ ಮೂಲಕ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ಅಡ್ಡೆಗೆ ಬಂಟ್ವಾಳ ಪೊಲೀಸರು ಗುರುವಾರ ದಾಳಿ ನಡೆಸಿ ಮರಳುಗಾರಿಕೆಗೆ ಬಳಸಿದ್ದ ಯಂತ್ರೋಪಕರಣಗಳು,ಸುಮಾರು 30 ಲೋಡಿನಷ್ಟು ಮರಳನ್ನು ವಶಪಡಿಸಿಕೊಂಡಿದ್ದು 3 ಮಂದಿ ಆರೋಪಿಗಳನ್ನು ಬಂದಿಸಿದ್ದಾರೆ.ಖಚಿತ ವರ್ತಮಾನದ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಸೆ ಅವರ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್‍ಪಿ ರವೀಶ್‍ನೇತೃತ್ವದಲ್ಲಿ ಬಂಟ್ವಾಳ ನಗರ ಠಾಣಾ ಪಿ.ಎಸ್.ಐ. ನಂದಕುಮಾರ್ ಮತ್ತು ಸಿಬಂದಿಗಳು ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.
IMG-20170323-WA0003

ಫಲ್ಗುಣಿ ನದಿಯಲ್ಲಿ ದೋಣಿಗೆ ಯಂತ್ರವನ್ನು ಸಿಕ್ಕಿಸಿ ಅದರ ಸಹಾಯದಿಂದ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಪ್ರಶಾಂತ್,ನವನೀತ್,ಚೇತನ್ ಎಂಬವರನ್ನು ಬಂಧಿಸಿದ್ದಾರೆ. ಈ ಅಕ್ರಮ ಮರಳುಗಾರಿಕೆಯ ರುವಾರಿ ರಜನೀಶ ಎಂಬಾತ ತಲೆ ಮರೆಸಿ ಕೊಂಡಿದ್ದಾನೆ. ಮರಳುಗಾರಿಕೆಗೆ ಬಳಸಿದ್ದ ಒಂದು ಡಿಗ್ಗಿಂಗ್ ಯಂತ್ರಅಳವಡಿಸಿದ ದೋಣಿ,ಒಂದು ಹಿಟಾಚಿ,ಎರಡು ಲಾರಿ,ಸುಮಾರು 30 ಲೋಡಿನಷ್ಟು ಮರಳು, ಮತ್ತಿತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ 80 ಲ.ರೂ ಎಂದು ಅಂದಾಜಿಸಲಾಗಿದೆ. ಪೊಲೀಸ್ ಸಿಬಂದಿಗಳಾದ ಸೀತಾರಾಮ್,ಕೃಷ್ಣ,ಗೋಣಿ ಬಸಪ್ಪ,ಚಾಲಕ ಸತ್ಯಪ್ರಕಾಶ್ ಭಾಗವಹಿಸಿದ್ದರು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ಸಮಯಗಳ ಹಿಂದೆ ಇದೇ ಸ್ಥಳದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆಗೆ ಪೊಲೀಸರು ದಾಳಿ ನಡೆಸಿದ್ದ ವೇಳೆ ಪರಾರಿಯಾಗುವ ಸಂದರ್ಭದಲ್ಲಿ ಕಾರ್ಮಿಕನೊಬ್ಬ ನೀರಿಗೆ ಬಿದ್ದು ಮೃತ ಪಟ್ಟ ಘಟನೆ ನೆನಪಿಸಬಹುದು. ಇಲ್ಲಿ ಅವ್ಯವಥವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.

By suddi9

Leave a Reply

Your email address will not be published. Required fields are marked *