ಬಂಟ್ವಾಳ: ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟುವಿನಲ್ಲಿರುವ ಸಮಗ್ರ ಕುಡಿಯುವ ನೀರಿನ ಸ್ಥಾವರದಲ್ಲಿ ಕಳೆದ ಐದಾರು ತಿಂಗಳಿನಿಂದ ಶುದ್ದೀಕರಿಸಿದ ಕುಡಿಯುವ ನೀರು ಭಾರೀ ಪ್ರಮಾಣದಲ್ಲಿ ಪೋಲಾಗುತ್ತಿದ್ದರೂ ಪುರಸಭಾ ಅಧಿಕಾರಿಗಳಾಗಲಿ, ಆಡಳಿತವಾಗಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಜಕ್ರಿಬೆಟ್ಟುವಿನ ನೀರಿನ ಸ್ಥಾವರದಲ್ಲಿ ಪುರಸಭಾ ವ್ಯಾಪ್ತಿಗೆ ನೀರು ಪೂರೈಸುವ ಬೃಹತ್ ಪೈಪ್ಗಳಿಗೆ ಅಳವಡಿಸಿರುವ ಗೇಟ್ವಾಲ್ಗಳು ಕೆಟ್ಟು ಹೋಗಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಸ್ಥಾವರದಿಂದ ಸೋರಿಕೆಯಾಗುವ ಶುದ್ಧ ಕುಡಿಯುವ ನೀರು ತೋಡುಗಳ ಮೂಲಕ ಹರಿದು ತೋಟಗಳಿಗೆ ನೀರುಣಿಸುತ್ತಿದೆ.

ನೀರು ಸೋರಿಕೆಯಾಗುತ್ತಿರುವುದರ ಬಗ್ಗೆ ಕಳೆದ ಎರಡು ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರಕುತ್ತಿಲ್ಲ. ಸಭೆಯಲ್ಲಿ ಚರ್ಚೆ ನಡೆಯುವ ಸಂದರ್ಭದಲ್ಲಿ ನಾಳೆಯೇ ಗೇಟ್ವಾಲ್ಗಳನ್ನು ದುರಸ್ಥಿಪಡಿಸಿ ನೀರು ಸೋರಿಕೆಯನ್ನು ತಡೆಗಟ್ಟಲಾಗುವುದು ಎಂದು ಪುರಸಭಾ ಎಂಜಿನಿಯರ್ ಸಹಿತ ಮುಖ್ಯಾಧಿಕಾರಿ ಭರವಸೆ ನೀಡುತ್ತಾರೆ ಆದರೂ ಈ ವರೆಗೆ ಯವುದೇ ಕ್ರಮ ಕೈಗೊಂಡಿಲ್ಲ.
ಬಂಟ್ವಾಳ ತಾಲೂಕಿನಲ್ಲಿ ಕಳೆದ ಮಳೆಗಾಲದಲ್ಲಿ ಹಿಂದೆಂದು ಕೇಳರಿಯದಷ್ಟು ಪ್ರಮಾಣದಲ್ಲಿ ಮಳೆಯ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರಕಾರ ಬಂಟ್ವಾಳ ತಾಲೂಕನ್ನು ಬರ ಪೀಡಿತ ತಾಲೂಕೆಂದು ಗುರುತಿಸಿದೆ. ಮುಂದಿನ ಎಪ್ರಿಲ್, ಮೆ ತಿಂಗಳಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ನೀರಿ ಹಾಹಾಕಾರ ಹೆಚ್ಚಾಗುವ ಸಂಭವವಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆಯನ್ನು ನಿರ್ವಹಿಸುವ ಕುರಿತು ಸರ್ವ ಇಲಾಖೆಯ ಮಹತ್ವದ ಸಭೆಯೊಂದನ್ನು ಶೀಘ್ರದಲ್ಲೇ ಕರೆಯಲಾಗುವುದು ಎಂದು ಕಳೆದ ವಾರ ನಡೆದ ತಾಲೂಕು ಪಂಚಾಯತ್ ಸಭೆಯಲ್ಲಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮೀರಾಂದ ಹೇಳಿದ್ದರು.
ಈ ಎಲ್ಲದರ ನಡುವೆ ಬಿ.ಸಿ.ರೋಡ್-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಿಸುವ ಪ್ರಯಾಣಿಕರ ಕಣ್ಣಿಗೆ ರಾರಾಜಿಸುವಂತೆ ಕಳೆದ ಐದಾರು ತಿಂಗಳಿನಿಂದ ದಿನದ 24 ಗಂಟೆಯೂ ಶುದ್ದೀಕರಿಸಿದ ಶುದ್ದ ಕುಡಿಯುವ ನೀರು ಭಾರೀ ಪ್ರಮಾಣದಲ್ಲಿ ಪೋಲಾಗುತ್ತಿದ್ದರೂ ಗೇಟ್ವಾಲ್ಗಳ ದುರಸ್ಥಿ ಕಾರ್ಯಕ್ಕೆ ಮುಂದಾಗದಿರುವುದು ಪುರಸಭಾ ಅಧಿಕಾರಿಗಳ ಕರ್ತವ್ಯ ನಿಷ್ಠೆಯನ್ನು ತೋರ್ಪಡಿಸುತ್ತದೆ.
ಜಕ್ರಿಬೆಟ್ಟು ನೀರು ಶುದ್ದೀಕರಣ ಘಟಕದಲ್ಲಿ ಕೆಟ್ಟು ನಿಂತಿರುವ ಗೇಟ್ವಾಲ್ಗಳನ್ನು ಆದಷ್ಟು ಬೇಗ ದುರಸ್ಥಿಗೊಳಿಸಿ ಕುಡಿಯುವ ನೀರು ಪೋಲಾಗುತ್ತಿರುವುದನ್ನು ತಡೆಗಟ್ಟಬೇಕು ಎಂದು ವಿರೋಧ ಪಕ್ಷದ ಸದಸ್ಯ ಗೋವಿಂದ ಪ್ರಭು ಆಗ್ರಹಿಸಿದ್ದಾರೆ.


