ಬಂಟ್ವಾಳ: ಸರಕಾರ ಬಂಟ್ವಾಳ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಇಲಾಖಾ ಮಟ್ಟದ ಸಭೆಯನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಯಾವುದೇ ಸಬೂಬು ನೀಡದೆ ಎಲ್ಲ ಇಲಾಖಾ ಮಟ್ಟದ ಅಧಿಕಾರಿಗಳೇ ಕಡ್ಡಾಯವಾಗಿ ಈ ಸಭೆಗೆ ಹಾಜರಾಗುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ಅವರು ಶುಕ್ರವಾರ ನಡೆದ ಬಂಟ್ವಾಳ ತಾಪಂ ಸಾಮಾನ್ಯ ಸಭೆಯಲ್ಲಿ ಕಟ್ಟುನಿಟ್ಟಿನ ಆದೇಶ ನೀಡಿದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಬಂಟ್ವಾಳ ತಾಲೂಕನ್ನು ಸರಕಾರ ಈಗಾಗಲೇ ಬರ ತಾಲೂಕೆಂದು ಘೋಷಿಸಿರುವುದನ್ನು ಇಒ ಮಿರಾಂದ ಅವರು ಸಭೆಯ ಗಮನಕ್ಕೆ ತಂದರಲ್ಲದೆ ಇದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಬೇಕಾಗಿರುವುದರಿಂದ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲು ದಿನಾಂಕವನ್ನು ಗೊತ್ತುಪಡಿಸಲಾಗಿದೆ. ಇದಕ್ಕೆ ಯಾರೊಬ್ಬರೂ ಕೂಡಾ ಇಲಾಖಾ ಮಟ್ಟದ ಅಧಿಕಾರಿಗಳು ಗೈರು ಹಾಜರಾಗಬಾರದು ಎಂದು ಸೂಚಿಸಿದರು.
ರಾಜೀನಾಮೆ ಬೆದರಿಕೆ: ಪುಣಚ ಗ್ರಾಮದ ಪುಣಚ ಎಂಬಲ್ಲಿ ಸಾರ್ವಜನಿಕರ ಉದ್ದೇಶಕ್ಕಾಗಿ ಕಾಯ್ದಿರಿಸಲಾದ ಸರಕಾರಿ ಜಮೀನನ್ನು ಸರ್ವೇ ನಡೆಸಿ ಗಡಿ ಗುರುತು ಮಾಡುವಲ್ಲಿ ಹಾಗೆಯೇ ಪುಣಚ ಗ್ರಾಮದಲ್ಲಿ ಅರ್ಹ ಫಲಾನುಭವಿಗಳು ಹಕ್ಕು ಪತ್ರಕ್ಕೆ ಸಿಲ್ಲಿಸಿರುವ ಅರ್ಜಿಗಳನ್ನು ಕೂಡಾ ವಿಲೇವಾರಿಗೆ ಬಂಟ್ವಾಳ ತಹಶೀಲ್ದಾರ್ ಸತಾಹಿಸುತ್ತಿದ್ದಾರೆ ಎಂದು ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರತಿಭಾ ಎಸ್. ಶೆಟ್ಟಿ ಸಭೆ ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು.
ಕಳೆದ ಹಲವು ಸಮಯದಿಂದ ತಾನು ಪ್ರತೀ ಸಭೆಯಲ್ಲೂ ಗಮನಕ್ಕೆ ತಂದರೂ ಈ ಬಗ್ಗೆ ತಹಶೀಲ್ದಾರ್‍ರಿಂದ ಯಾವುದೇ ಸ್ಪಂದನೆ ದೊರಕುತ್ತಿಲ್ಲ. ಸಾರ್ವಜನಿಕರ ಹಿತಾಸಕ್ತಿಯಿಂದ ಪ್ರಸ್ತಾಪಿಸುತ್ತಿದ್ದರೂ ಈ ವಿಚಾರದಲ್ಲಿ ತಹಶೀಲ್ದಾರ್ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ ಎಂದು ತನ್ನ ವೇದನೆಯನ್ನು ವ್ಯಕ್ತಪಡಿಸಿದರು.

2 (1)ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ತಹಶೀಲ್ದಾರ್ ಪುರಂದರ ಹೆಗ್ಡೆಯವರು ತಾಲೂಕಿನ ಬಹುತೇಕ ಮಂದಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಂಡಿದ್ದೇನೆ. ಸರ್ವೆ ಕಾರ್ಯದ ಬಗ್ಗೆ ಮಾತು ಕೊಡಲು ಸಾಧ್ಯವಿಲ್ಲ ಎಂದು ಹಾರಿಕೆಯ ಉತ್ತರ ಕೊಟ್ಟರು.
ಪ್ರತಿಭಾ ಅವರ ಪ್ರಸ್ತಾಪಕ್ಕೆ ಸಭೆಯಲ್ಲಿದ್ದ ಯಾವುದೇ ಸದಸ್ಯರು ಬೆಂಬಲಕ್ಕೆ ನಿಲ್ಲಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಾ ಅವರು ಮುಂದಿನ ಸಭೆಯೊಳಗೆ ಈ ಎರಡು ಕೆಲಸಗಳನ್ನು ಮಾಡಿಕೊಡದಿದ್ದಲ್ಲಿ ತಾನು ಪಂಚಾಯತ್ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಈ ಹಂತದಲ್ಲಿ ಧ್ವನಿ ಗೂಡಿಸಿದ ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ಸಮಸ್ಯೆಗಳು ಉದ್ಭವಿಸುತ್ತಿದೆ ಎಂದರೆ ತಾಪಂ ಸದಸ್ಯ ಪ್ರಭಾಕರ್ ಪ್ರಭು ಮಧ್ಯ ಪ್ರವೇಶಿಸಿ ಪಂಚಾಯತ್ ಅಧ್ಯಕ್ಷರ ಸಮಸ್ಯೆಗೆ ತಕ್ಷಣ ಸ್ಪಂದಿಸುವಂತೆ ಒತ್ತಾಯಿಸಿದರು.
3 (1)ಮೆಸ್ಕಾಂ ಗೊಂದಲದ ಗೂಡು: ಬಂಟ್ವಾಳ ಮೆಸ್ಕಾಂ ಅವ್ಯವಸ್ಥೆಯಿಂದ ಕೂಡಿದ್ದು ಒಟ್ಟಾರೆಯಾಗಿ ಗೊಂದಲದ ಗೂಡಿನಂತಾಗಿದೆ ಎಂದು ಸದಸ್ಯರು ಆರೋಪಿಸಿದರು. ಮೀಟರ್ ರೀಡಿಂಗ್ ಬಿಲ್ ನೀಡುವಲ್ಲಿ ವ್ಯತ್ಯಾಸ, ಲೈನ್ ಮ್ಯಾನ್‍ಗಳನ್ನು ಕೇಳುವವರೇ ಇಲ್ಲದಂತಾಗಿದೆ. ಬಿಲ್ ಪಾವತಿಯ ಅವಧಿ ಮುಗಿಯುವ ಮುನ್ನವೇ ವಿದ್ಯುತ್ ಕಡಿತಗೊಳಿಸುವುದು ಸೇರಿದಂತೆ ಮೆಸ್ಕಾಂ ವಿರುದ್ಧ ಆರೋಪಗಳ ಸುರಿಮಳೆಗಳನ್ನೇ ಸದಸ್ಯರು ಹೋರಿಸಿದರು.
400 ರೂಪಾಯಿ ಬಿಲ್ ಬಾಕಿದ್ದರೆ ತಕ್ಷಣ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. 10,000 ಬಿಲ್ ಬಾಕಿರುವವರಿಗೆ ಇಲಾಖಾಧಿಕಾರಿಗಳು ದೂರವಾಣಿಗಳ ಮೂಲಕ ಸಂಪರ್ಕಿಸಿ ಬಿಲ್ ಪಾವತಿಗೆ ಕೋರಿಕೆಗೈದು ಸಮಯವಕಾಶ ನೀಡುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಸದಸ್ಯ ಪ್ರಭಾಕರ ಪ್ರಭು ಅವರು ಸಭೆಯ ಗಮನ ಸೆಳೆದರು. 4ಇದಕ್ಕೆ ಮೆಸ್ಕಾಂ ಅಧಿಕಾರಿ ಜ್ಯೋಷಿ ಸಮಜಾಯಿಸಿ ನೀಡಲು ಹೊರಟಾಗ ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಅವರು ಲೋಪವಾಗಿರುವ ವಿದ್ಯುತ್ ಬಿಲ್ಲನ್ನು ಸಭೆಗೆ ಪ್ರದರ್ಶಿಸಿ ಇಲಾಖೆಯ ಅವ್ಯವಸ್ಥೆ, ಕರ್ತವ್ಯ ಲೋಪವನ್ನು ಜನಪ್ರತಿನಿಧಿಗಳ ಮೇಲೆ ಹೇರುವುದು ಸರಿಯಲ್ಲ. ತಮ್ಮ ತಪ್ಪನ್ನು ತಿದ್ದಿಕೊಂಡು ಅದನ್ನು ಸರಿಪಡಿಸಿಕೊಳ್ಳುವ ಕೆಲಸ ಮಾಡಬೇಕು ಹೊರೆತು ಅದನ್ನು ಸಮರ್ಥಿಸಿಕೊಳ್ಳುವುದು ಅಲ್ಲ ಎಂದು ಸಲಹೆ ನೀಡಿದರು.
ಮೇರಮಜಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದ 27 ಸೆಂಟ್ಸ್ ಜಮೀನಿನ ಬದಲು ಅಲ್ಲಿರುವ ಇಡೀ ಜಮೀನಿಗೆ ಬೇಲಿ ಅಳವಡಿಸಿದೆ. ಈಗಾಗಲೇ ಆರೋಗ್ಯ ಇಲಾಖೆಯ 27 ಸೆಂಟ್ಸ್ ಜಮೀನನ್ನು ಅಳತೆ ಮಾಡಲಾಗಿದ್ದು ಅವರ ಜಾಗಕ್ಕೆ ಬೇಲಿ ಹಾಕಬೇಕಾದ ಬದಳು ಇಡೀ ಜಮೀನಿಗೆ ಹಾಕಲಾಗಿದೆ. ಅವರ ಜಾಗವನ್ನು ಹೊರತು ಪಡಿಸಿ ಉಳಿದ ಜಮೀನಿಗೆ ಹಾಕಿರುವ ಬೇಲಿಯನ್ನು ತೆರವುಗೊಳಿಸಲು ಸೂಚನೆ ನೀಡುವಂತೆ ಜಿಪಂ ಸದಸ್ಯ ರವೀಂದ್ರ ಕಂಬಳಿ ಮತ್ತು ಸ್ಥಳೀಯ ಪಂಚಾಯತ್ ಅಧ್ಯಕ್ಷ ಆಗ್ರಹಿಸಿದರು.
ಸಭೆಯಲ್ಲಿ ನಿವೃತ್ತರಾಗಲಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಬಂಟ್ವಾಳ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್ ಕೆ.ಪಿ. ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ನ್ಯಾಯ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ, ತಹಶೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದರು. ಇಒ ಸಿಪ್ರಿಯಾನ್ ಮಿರಾಂದ ಸಭಾ ಕಲಾಪ ನಡೆಸಿ ಸ್ವಾಗತಿಸಿ ವಂದಿಸಿದರು. ಸದಸ್ಯರಾದ ರಮೇಶ್ ಕುಡ್ಮೇರು, ಯಶವಂತ ಪೂಜಾರಿ, ಗಣೇಶ್ ಸುವರ್ಣ, ಸಂಜೀವ ಪೂಜಾರಿ, ಮಾಬಲ ಆಳ್ವ, ಹೈದರ್ ಕೈರಂಗಳ, ಆದಂ ಕುಂಞÂ, ಕುಮಾರ ಭಟ್, ಪದ್ಮನಾಭ ನಾಯ್ಕ್, ಪದ್ಮಾವತಿ, ಮಲ್ಲಿಕಾ ಶೆಟ್ಟಿ, ಸ್ವಪ್ನ, ಪದ್ಮಶ್ರೀ, ಲಕ್ಷ್ಮಿ ಗೋಪಾಲಾಚಾರ್ಯ, ಗೀತಾ ಚಂದ್ರಶೇಖರ್ ಮೊದಲಾದವರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು

6

ಬಾಕ್ಸ್…
ಸಭೆ ಪೂರ್ಣಗೊಳ್ಳುವ ಮೊದಲೇ ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಸಹಿತ ಕೆಲವರು ಪ್ರಾರ್ಥನೆಗಾಗಿ ಮಸೀದಿಗೆ ತೆರಳಲು ಒಂದು ಗಂಟೆಯ ಸುಮಾರಿಗೆ ಸಭೆಯಿಂದ ತೆರಳಿದರೆ ಇನ್ನು ಕೆಲವು ಸದಸ್ಯರು ಅಧ್ಯಕ್ಷರ ಗಮನಕ್ಕೆ ತಾರದೆ ಸಭೆ ತೆರಳಿದರು. ಇದೇ ವೇಳೆ ಸದಸ್ಯೆಯರಿಬ್ಬರು ಸಭೆಯಿಂದ ತೆರಳಲು ಮುಂದಾದಾಗ ಗಮನಿಸಿದ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಸಭಾ ಕಲಾಪ ಮುಗಿಯುವ ತನಕ ಕುಳಿತು ಕೊಳ್ಳುವಂತೆ ಸೂಚಿಸಿದರು.

 

By Suddi9

Leave a Reply

Your email address will not be published. Required fields are marked *