ಬಿ.ಸಿ.ರೋಡು: ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಯೋಜನೆ ಸ್ಮಾರ್ಟ್‍ಸಿಟಿಗಳಲ್ಲಿ ನಮ್ಮ ಜಿಲ್ಲೆಯ ಮಂಗಳೂರು ನಗರವೂ ಒಂದಾಗಿದೆ. ಬಿ.ಸಿ.ರೋಡು ಈ ನಗರವನ್ನು ಸಂಪರ್ಕಿಸುವ ಕೊಂಡಿಯಾಗಿದ್ದು ಸ್ಮಾರ್ಟ್ ಸಿಟಿ ಎಂಬ ಹೆಮ್ಮೆಗೆ ಮತ್ತೊಂದು ಗರಿ ಬಂದಂತಾಗಿದೆ. ಆಧುನಿಕ ವಿನ್ಯಾಸದ ಸುಸಜ್ಜಿತ ಕೆ.ಎಸ್.ಆರ್.ಟಿ.ಸಿ. ಬಸ್‍ನಿಲ್ದಾಣದ ಕಾಮಗಾರಿ ಶೀಘ್ರಗತಿಯಲ್ಲಿ ನಡೆಯುತ್ತಿದ್ದು ಇನ್ನೇನು ಕೆಲವೇ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಜನರ ಬಹುವರ್ಷಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗುತ್ತಿದೆ. ಸುಮಾರು 7.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿ ಅಂತಿಮ ಹಂತದಲ್ಲಿದ್ದು ಮಾರ್ಚ್ ಅಂತ್ಯಕ್ಕೆ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ.

ಸರಕಾರ ಮತ್ತು ಡಿಯುಎಲ್‍ಟಿ ಸಹಯೋಗದೊಂದಿಗೆ ವಾಸ್ತುಪ್ರಕಾರ 1.50 ಎಕರೆ ವಿಶಾಲವಾದ ಜಾಗದಲ್ಲಿ ಸುಮಾರು 7.50 ಕೋಟಿ ವೆಚ್ಚದಲ್ಲಿ ಜಿಲ್ಲೆಯಲ್ಲೇ ಉನ್ನತ ಮಟ್ಟದ ಆಧುನಿಕ ಮಾದರಿಯಲ್ಲಿ 2015ರ ಆಗಸ್ಟ್ 26ರಂದು ಶಿಲಾನ್ಯಾಸಗೊಂಡಿದೆ. ನಿರ್ಮಾಣವಾಗುತ್ತಿರುವ ಇದು 8000 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು ನೆಲ ಮತ್ತು ಮೊದಲ ಅಂತಸ್ತು ಹಾಗೂ ಸುತ್ತ ಆವರಣ ಗೋಡೆಯನ್ನು ಹೊಂದಿದೆ.
ಪ್ರಥಮ ಮಹಡಿಯಲ್ಲಿ ರೆಸ್ಟೋರೆಂಟ್ ಸಹಿತ ಇತರ ಉದ್ದೇಶದ ವಾಣಿಜ್ಯ ಮಳಿಗೆಗಳಿಗೆ ಅವಕಾಶ ನೀಡಲಾಗುತ್ತದೆ. ಒಟ್ಟು 17 ಬಸ್ ಫ್ಲ್ಯಾಟ್‍ಫಾರಂಗಳಿದ್ದು ಬೇಸ್‍ಮೆಂಟ್‍ನಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿಗಳ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ನಿಲುಗಡೆಗೆ ಯೋಜಿಸಿದ್ದು ಇದನ್ನು ನಿರ್ವಹಿಸಲು ಗುತ್ತಿಗೆ ನೀಡಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಈ ನಿಲ್ದಾಣದಲ್ಲಿ ಸಂಚಾರ ನಿಯಂತ್ರಣ ಕೊಠಡಿ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು ಜನರಿಗೆ ಎಲ್ಲ ರೀತಿಯ ಅನುಕೂಲವಾಗಲಿದೆ.
ನಗರಕ್ಕೆ ಫೈಓವರ್ ವಿಘ್ನ : ಭವಿಷ್ಯದ ಯೋಚನೆ ಇಲ್ಲದೆ ನಿರ್ಮಿಸಲ್ಪಟ್ಟ ಫ್ಲೈ ಓವರ್‍ನಿಂದಾಗಿ ಬಸ್‍ನಿಲ್ದಾಣಕ್ಕೆ ಬರುವ ಬಸ್ಸಿಗೆ ಸಮಸ್ಯೆಯುಂಟಾಗಿದೆ. ಫ್ಲೈ ಓವರ್ ರಸ್ತೆ ಏಕ ಮುಖವಾಗಿದ್ದು, ನಗರದ ಅಂದವನ್ನು ಕೆಡಿಸಿದ್ದು ಮಾತ್ರವಲ್ಲದೆ ಈಗ ನಿರ್ಮಾಣಗೊಳ್ಳುತ್ತಿರುವ ಬಸ್‍ನಿಲ್ದಾಣಕ್ಕೂ ಅಡ್ಡಿ ಉಂಟುಮಾಡುತ್ತಿದೆ. ಮಂಗಳೂರಿನಿಂದ ಆಗಮಿಸುವ ಬಸ್‍ಗಳು ನಿಲ್ದಾಣಕ್ಕೆ ಬರಬೇಕಾದರೆ ಇಲ್ಲಿನ ಫ್ಲೈಓವರ್ ರಸ್ತೆಯನ್ನು ದಾಟಿ ಬರಬೇಕಾಗಿದ್ದು ಇದು ಸಮಸ್ಯೆಯನ್ನು ಉಂಟುಮಾಡಿದೆ.
